ಮಿನಿ ಲಾರಿ-ಈಚರ್ ಡಿಕ್ಕಿ: ಸಂಚಾರ ಸ್ಥಗಿತ

ಕುಂದಾಪುರ: ತಲ್ಲೂರು ಸೇತುವೆಯಲ್ಲಿನ ಬೃಹತ್ ಹೊಂಡದಿಂದಾಗಿ ಭಾನುವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎರಡು ತಾಸಿಗೂ ಮಿಕ್ಕಿ ಟ್ರಾಫಿಕ್ ಜಾಮ್ ಉಂಟಾಗಿದೆ. ಉಡುಪಿಯಿಂದ ಬೈಂದೂರಿನ ಕಡೆಗೆ ಹಾಲು ತುಂಬಿಸಿಕೊಂಡು ಸಾಗುತ್ತಿದ್ದ ಮಿನಿ ಲಾರಿ ಹೊಂಡಕ್ಕೆ ಇಳಿದ ಹಿನ್ನೆಲೆಯಲ್ಲಿ ಸ್ಟೇರಿಂಗ್ ತುಂಡಾಗಿ ಎದುರಿನಿಂದ ಬರುತ್ತಿದ್ದ ಟಾಟಾ ಈಚರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಂಚಾರ ವ್ಯತ್ಯಯಗೊಂಡಿದೆ. ಎರಡು ವಾಹನಗಳ ಮುಂಭಾಗ ಜಖಂಗೊಂಡಿದ್ದು ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಟ್ರಾಫಿಕ್ ಜಾಮ್: ಸೇತುವೆಯಲ್ಲಿ ಅಪಘಾತ ಸಂಭವಿಸಿದ್ದರಿಂದ ಸರಿಸುಮಾರು 2 ತಾಸು ಟ್ರಾಫಿಕ್ ಜಾಮ್ ಉಂಟಾಗಿದೆ. 14 ಕಿ.ಮೀ. ದೂರದ ತ್ರಾಸಿಯಿಂದ ತಲ್ಲೂರು ಹಾಗೂ ಕುಂದಾಪುರ ಶಾಸ್ತ್ರೀ ವೃತ್ತದಿಂದ ಅಪಘಾತ ಸ್ಥಳದವರೆಗೆ ಟ್ರಾಫಿಕ್ ಜಾಮ್ ಆಗಿದ್ದು, ಹೆದ್ದಾರಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು. ಸಂಜೆ 6.45ರಿಂದ ರಾತ್ರಿ 8.45ರ ತನಕ ಟ್ರಾಫಿಕ್ ಜಾಮ್ ಉಂಟಾಗಿತ್ತು. ಭಾರಿ ಗಾಳಿ, ಗುಡುಗು ಸಿಡಿಲು ಸಹಿತ ಮಳೆ ಇದೇ ಹೊತ್ತಿನಲ್ಲಿ ಕಾಣಿಸಿಕೊಂಡಿದ್ದರಿಂದ ಹೆದ್ದಾರಿಯಲ್ಲಿ ಅಯೋಮಯ ಸ್ಥಿತಿ ನಿರ್ಮಾಣ ವಾಯಿತು. 

ತೆರವಿಗೆ ಹರಸಾಹಸ: ಅಪಘಾತಕ್ಕೀಡಾದ ವಾಹನಗಳನ್ನು ಬದಿಗೆ ಸರಿಸಲು ಹರಸಾಹಸ ಪಡಬೇಕಾಯಿತು. ಹೆದ್ದಾರಿಯಲ್ಲಿ ದೀಪದ ವ್ಯವಸ್ಥೆ ಇಲ್ಲದೆ ಇರುವುದು, ಸುರಿಯುತ್ತಿರುವ ಮಳೆಯಿಂದಾಗಿ ಅಡಚಣೆಯುಂಟಾಯಿತು. 50ಕ್ಕೂ ಮಿಕ್ಕಿ ಪೊಲೀಸ್ ಸಿಬ್ಬಂದಿ, ನೂರಾರು ಸ್ಥಳೀಯರು ಸುಗಮ ಸಂಚಾರ ಅನುವು ಮಾಡಿಕೊಡುವಲ್ಲಿ ಶ್ರಮಿಸಿದರು. 

ನಾಗರಿಕರ ಆಕ್ರೋಶ: ಹೇರಿಕುದ್ರು, ತಲ್ಲೂರು, ಅರಾಟೆ ಸೇತುವೆಯಲ್ಲಿ ಘಾತಕ ಹೊಂಡಗಳು ಪ್ರತಿದಿನ ಅವಘಡಕ್ಕೆ ಎಡೆಮಾಡಿಕೊಡುತ್ತಿದ್ದರೂ ಹೆದ್ದಾರಿ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ನೀತಿ ಸಂಹಿತೆ ಹೆಸರಿನಲ್ಲಿ ಈ ತನಕ ಹೊಂಡ ಮುಚ್ಚದೆ ಸುಮ್ಮನಿದ್ದ ಇಲಾಖೆ ಈಗಲೂ ಅದೇ ಚಾಳಿ ಮುಂದುವರಿಸಿದೆ. ಪರಿಸ್ಥಿತಿ ಮುಂದುವರಿದ್ದಲ್ಲಿ ಹೆದ್ದಾರಿ ಇಲಾಖೆಗೆ ಮುತ್ತಿಗೆ ಹಾಕಲಾಗುವುದು ಎಂದು ಸ್ಥಳೀಯರು ಆಕ್ರೋಶ ಹೊರಗೆಡಹಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com