ಕುಂದಾಪುರ: ತಾಲೂಕಿನ ಜನ್ನಾಡಿ ಗ್ರಾಮದ ಜವಳಿಜಡ್ಡು ಎಂಬಲ್ಲಿ ಮಗನೊಬ್ಬ ತನ್ನ ತಂದೆಯನ್ನು ಬರ್ಬರವಾಗಿ ಕೊಲೆಗೈದ ಘಟನೆ ಗುರುವಾರ ಬೆಳಗ್ಗಿನ ಜಾವ ನಡೆದಿದೆ. ಮೀಸೆ ಕತ್ತರಿಸುವ ಕತ್ತರಿಯಿಂದ ಚುಚ್ಚಿ ಚುಚ್ಚಿ ತಂದೆಯನ್ನು ಹತ್ಯೆಗೈಯುವ ಮೂಲಕ ವಿಕತಿ ಮೆರೆದಿದ್ದಾನೆ. ಕೊಲೆಗೈದವ ನರಸಿಂಹ ನಾಯ್ಕ್(26). ಹತ್ಯೆಗೀಡಾದವರು ಆತನ ತಂದೆ ನಾರಾಯಣ ನಾಯ್ಕ್(60). ಆರೋಪಿಯನ್ನು ಕೋಟ ಪೊಲೀಸರು ಬಂಸಿದ್ದಾರೆ.
ಪ್ರಕರಣದ ವಿವರ: ಪ್ರತಿದಿನ ಕುಡಿದು ಬಂದು ತಗಾದೆ ತೆಗೆಯುವ ನರಸಿಂಹ ನಾಯ್ಕ್ ಎಂದಿನಂತೆ ಗುರುವಾರ ರಾತ್ರಿಯೂ ಮನೆಯಲ್ಲಿ ರಂಪಾಟ ನಡೆಸಿದ್ದಾನೆ. ತಡರಾತ್ರಿ ತನಕ ನಡೆದ ಈತನ ಆರ್ಭಟ ಮುಂದುವರಿದಿದ್ದು ತಣ್ಣಗಾದ ಮೇಲೆ ಮನೆಯವರು ನಿದ್ರೆಗೆ ಜಾರಿದ್ದಾರೆ. ನಿದ್ದೆಗೆ ಜಾರಿಕೊಳ್ಳದ ನರಸಿಂಹ ನಾಯ್ಕ್ ಮತ್ತೆ ಉಪಟಳ ಆರಂಭಿಸಿದ್ದಾನೆ. ಮನೆಯ ಸುತ್ತ ಬೆಂಕಿ ಹಾಕಿ ಮನೆಯ ಸದಸ್ಯರನ್ನು ಹೊರಗಟ್ಟಿದ್ದಾನೆ. ಮನೆಯೊಳಗಿದ್ದ ದೇವರ ಪೋಟೊಗಳನ್ನು ಕಿತ್ತು ಅಂಗಳಕ್ಕೆ ಎಸೆದಿದ್ದಾನೆ. ತುಳಸೀಕಟ್ಟೆ ಹಾನಿಗೊಳಿಸಿದ್ದಾನೆ. ಕತ್ತಿಯಿಂದ ಕಡಿಯುವುದಾಗಿ ಬೆದರಿಸಿದ್ದಾನೆ. ಭಯದಿಂದ ಮನೆಯವರು ಮನೆ ಪಕ್ಕದ ಹಾಡಿಗೆ ನುಗ್ಗಿದ್ದಾರೆ. ಈತನಿಂದ ತಪ್ಪಿಸಿಕೊಳ್ಳಲು ತಂದೆ ನಾರಾಯಣ ನಾಯ್ಕ್ ಯತ್ನ ನಡೆಸಿದರಾದರೂ ಸಾಧ್ಯವಾಗಲಿಲ್ಲ. ಮರದ ದೊಣ್ಣೆಯಿಂದ ಅವರನ್ನು ಥಳಿಸಿದ್ದಾನೆ. ಮನೆಯ ಕೋಣೆಯಿಂದ ಅಂಗಳಕ್ಕೆ ಏಳೆದು ತಂದು ಅಮಾನುಷ ಹಲ್ಲೆ ನಡೆಸಿದ್ದಾನೆ. ಮೊದಲೆ ಪೋಲಿಯೊ ಪೀಡಿತರಾಗಿರುವ ನಾರಾಯಣ ನಾಯ್ಕ್ ಪ್ರಜ್ಞಾಹೀನರಾಗಿದ್ದಾರೆ. ಇಷ್ಟಕ್ಕೆ ಸುಮ್ಮನಿರದ ದುಷ್ಕರ್ಮಿ ಮೀಸೆ ತೆಗೆಯುವ ಕತ್ತರಿಯಿಂದ ಅವರನ್ನು ವಿಕತವಾಗಿ ಚುಚ್ಚಿದ್ದಾನೆ. ದೇಹದ 15ಕ್ಕೂ ಹೆಚ್ಚು ಕಡೆ ಚುಚ್ಚಿ ಚುಚ್ಚಿ ರಕ್ತಸ್ರಾವ ಆಗುವಂತೆ ಮಾಡಿದ್ದಾನೆ. ಇದರಿಂದ ಅವರು ಪ್ರಾಣಬಿಟ್ಟಿದ್ದಾರೆ. ಕತ್ಯ ಎಸಗಿದ ಬಳಿಕವು ಕದಲದೇ ಅಲ್ಲಿಯೇ ಈತ ನಿಂತಿದ್ದ. ಮನೆಯವರು ಬಂದು ನೋಡುವಾಗ ಮನೆಯ ಯಜಮಾನನ ಪ್ರಾಣಪಕ್ಷಿ ಹಾರಿಹೋಗಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಕೋಟ ಠಾಣಾಕಾರಿ ಕೆ.ಆರ್.ನಾಯ್ಕ್ ಆಗಮಿಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಬಂಧಿಸಿದ್ದಾರೆ..
'ಆತ ಕೊಲ್ಲುವ ಮಟ್ಟಕ್ಕೆ ಹೋಗುತ್ತಾನೆ ಎಂದು ಭಾವಿಸಿರಲಿಲ್ಲ. ಗಂಡ ಮತ್ತು 6 ಮಂದಿ ಮಕ್ಕಳು, ಮೊಮ್ಮಕ್ಕಳೊಂದಿಗೆ ಇದೇ ಮನೆಯಲ್ಲಿ ನೆಲೆಸಿದ್ದೇನೆ. ನರಸಿಂಹ ನಾಯ್ಕ್ ನನ್ನ ಎರಡನೆ ಮಗ. ಕಳೆದ ಕೆಲವು ವರ್ಷಗಳಿಂದ ರಾತ್ರಿಯಾದ ಮೇಲೆ ನಮಗೆ ಸುಖವಿಲ್ಲ. ಪ್ರತಿದಿನ ಕುಡಿದು ಬಂದು ದಾಂಧಲೆ ನಡೆಸುವುದು, ಮನೆಯವರನ್ನು ಹೊರಗಟ್ಟುವುದು ಈತನ ಕಾಯಕವಾಗಿಬಿಟ್ಟಿದೆ. ಈತನ ವಿರುದ್ಧ ಅನೇಕ ಬಾರಿ ಠಾಣೆಗೆ ದೂರು ನೀಡಿದ್ದೆವು. ಗುರುವಾರವು ಇದೇ ರೀತಿ ವರ್ತಿಸಿದ್ದ 'ಎಂದು ತಾಯಿ ಸೀತು ನಾಯ್ಕ್ ತಿಳಿಸಿದ್ದಾರೆ.
ಎಡಿಶನಲ್ ಎಸ್ಪಿ ಭೇಟಿ: ಉಡುಪಿ ಜಿಲ್ಲಾ ಎಡಿಶನಲ್ ಎಸ್ಪಿ ಸಂತೋಷ್ಕುಮಾರ್, ಡಿವೈಎಸ್ಪಿ ಪ್ರಭುದೇವ ಮಾನೆ, ಸರ್ಕಲ್ ಇನ್ಸ್ಪೆಕ್ಟರ್ ಅರುಣ್ ಬಿ.ನಾಯಕ್, ಪ್ರೊಬೆಷನರಿ ಎಎಸ್ಪಿ ರಾಕಾ, ಗ್ರಾ.ಪಂ.ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
*ನನ್ನ ಆಸೆಯಂತೆ ತಂದೆ ನನ್ನನ್ನು ಬದುಕಲು ಬಿಟ್ಟಿಲ್ಲ. ನಾನು ಕೇಳಿದಾಗ ಹಣ ಕೊಡುವುದಿಲ್ಲ. ನಿನ್ನೆ ಮೊಬೈಲ್ ರಿಪೇರಿಗೆ ಹಣ ಕೊಡಲಿಲ್ಲ. ಈ ವಿಷಯದಲ್ಲಿ ಗಲಾಟೆ ನಡೆದಿದೆ -ಆರೋಪಿ ನರಸಿಂಹ ನಾಯ್ಕ್