ಕುಂದಾಪುರ: ಖರ್ಚಿಗೆ ಹಣ ಕೊಡಲಿಲ್ಲ ಹಾಗೂ ಮನೆಯ ಜಾಗದ ಪಾಲು ಮಾಡಿಲ್ಲ ಎಂಬ ಕಾರಣಕ್ಕೆ ತನ್ನ ತಂದೆಯನ್ನೇ ಕೊಲೆ ಮಾಡಿದ ಘಟನೆ ಕುಂದಾಪುರ ತಾಲೂಕು ಹಾರ್ದಳ್ಳಿ- ಮಂಡಳ್ಳಿ ಗ್ರಾಮದ ಜವಳೀಜಡ್ಡು ಬಳಿ ಗುರುವಾರ ಬೆಳಗಿನ ಜಾವ ಸಂಭವಿಸಿದೆ.
ಕುಡಬಿ ಸಮಾಜದ ನಾರಾಯಣ ನಾಯ್ಕ (58) ಕೊಲೆಯಾದ ದುರ್ದೈವಿಯಾಗಿದ್ದು, ಕೊಲೆಗೈದ ಮಗ ನರಸಿಂಹ (26) ಎಂದು ತಿಳಿದು ಬಂದಿದೆ.
ನಾರಾಯಣ ನಾಯ್ಕ ಪಾಶುìವಾಯು ಪೀಡಿತಕ್ಕೆ ಒಳಗಾಗಿ ಅಂಗವಿಕಲನಾಗಿದ್ದು, ತನ್ನ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಈತನ ಪುತ್ರ ನರಸಿಂಹ ಅಲ್ಲಿ ಇಲ್ಲಿ ಕೂಲಿ ಕೆಲಸಮಾಡಿಕೊಂಡು ಪ್ರತಿದಿನ ಸಂಜೆಯಾಗುತ್ತಿದ್ದಂತೆ ಕಡಿದು ಬಂದು ಮನೆಯಲ್ಲಿ ಗಲಾಟೆ ಮಾಡುವುದೇ ಅಭ್ಯಾಸವಾಗಿತ್ತು. ಎಂದಿನಂತೆ ಬುಧವಾರ ಕುಡಿದು ಬಂದ ನರಸಿಂಹ ರಾತ್ರಿ ಮಲಗಿದ್ದವನು ಬೆಳಗ್ಗಿನ ಜಾವ ಎದ್ದು ತಂದೆಯೊಂದಿಗೆ ಖರ್ಚಿಗೆ ಹಣಕೊಡುವಂತೆ ಹಾಗೂ ಜಾಗವನ್ನು ಪಾಲು ಮಾಡಿಕೊಡುವಂತೆ ತಕರಾರು ತೆಗೆದಿದ್ದ ಎನ್ನಲಾಗಿದೆ. ಅದಕ್ಕೆ ತಂದೆ ಮಗನೊಂದಿಗೆ ವಾಗ್ವಾದ ನಡೆದಿತ್ತು. ಆರಂಭದಲ್ಲಿ ಸಣ್ಣ ಮಟ್ಟದಲ್ಲಿ ಆರಂಭವಾದ ಗಲಾಟೆ ನಂತರ ವಿಕೋಪಕ್ಕೆ ತಲುಪಿ ಮಗ ಅಲ್ಲಿಯೇ ಇದ್ದ ದೊಣ್ಣೆ, ಕತ್ತಿಯಿಂದ ತಂದೆಗೆ ಹಲ್ಲೆ ನಡೆಸಿದ್ದಲ್ಲದೇ ಚಿತ್ರ ಹಿಂಸೆ ನೀಡಿ ಆಮಾನುಷವಾಗಿ ಕೊಲೆಮಾಡಿ ಮನೆಯ ಹೊರಗೆ ಎಳೆದು ಹೊರಹಾಕಿದ್ದಾನೆ ಎನ್ನಲಾಗಿದೆ. ಈ ನಡುವೆ ಮನೆಯಲ್ಲಿದ್ದವರು ಜಗಳವನ್ನು ತಪ್ಪಿಸಲು ಮನೆಯಲಿದ್ದವರು ಮುಂದಾಗಲಿಲ್ಲ. ಮನೆಯ ಅಂಗಳದಲ್ಲಿ ಕುಸಿದು ಬಿದ್ದಿದ್ದ ನಾರಾಯಣ ನಾಯ್ಕರಿಗೆ ಮನೆಯವರು ನೀರು ಕುಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ತಂದೆಯಂತೆ ಮಗ: ಒಂದು ಕಾಲದಲ್ಲಿ ತಂದೆ ನಾರಾಯಣ ನಾಯ್ಕ ಕೂಡಾ ಕುಡಿತದ ಚಟಕ್ಕೆ ಬಲಿಯಾಗಿ ಮನೆ ಮಂದಿಗೆ ತೊಂದರೆ ಕೊಡುತ್ತಾ ಬಂದವರು. ಅದೇ ಚಾಳಿ ಮಗನಿಗೂ ಅಂಟಿಕೊಂಡಿತ್ತು ಎಂದರೆ ತಪ್ಪಾಗಲಾರದು. ಈತ ಸಹ ಸಣ್ಣ ವಯಸ್ಸಿನಲ್ಲಿ ಕುಡಿತದ ದಾಸನಾಗಿದ್ದ ಹಾಗೂ ಕುಡಿದುಬಂದು ಮನೆಯಲ್ಲಿ ದಿನವೂ ರಂಪಾಟ ಮಾಡುತ್ತಿದ್ದ ಎನ್ನುವುದು ಸ್ಥಳೀಯರ ಹೇಳಿಕೆ. ಕೂಲಿ ಕೆಲಸ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ನರಸಿಂಹ ಕೈಯಲ್ಲಿ ಹಣ ಇಲ್ಲದಾಗ ಕಳ್ಳತನಕ್ಕೂ ಮುಂದಾಗಿದ್ದ ಘಟನೆಗಳು ನಡೆದಿದೆ. ಮಗನ ಈ ಕಟ್ಟ ನಡೆತೆಯನ್ನು ತಂದೆ ಹಲವಾರು ಬಾರಿ ಆಕ್ಷಪಿಸಿದ್ದು, ಇದರಿಂದ ಮನೆಯಲ್ಲಿ ಆಗಾಗ ಗಲಾಟೆಗಳು ನಡೆಯುತ್ತಿದ್ದವು ಮತ್ತು ಇದು ಮನೆಯವರಿಗೆ ಮಾಮೂಲಿಯಾಗಿತ್ತು ಎನ್ನುವುದು ಸ್ಥಳೀಯರ ಅಭಿಪ್ರಾಯ.
ಕದಲದ ಪುತ್ರ: ತಂದೆಯ ಕೊಲೆ ನಡೆದಿದೆ ಎಂದು ಗೊತ್ತಾದರೂ ನರಸಿಂಹ ಪರಾರಿಯಾಗುವ ಯತ್ನ ನಡೆಸದೇ ಮನೆಯಲ್ಲಿ ಸುಮ್ಮನೇ ಕುಳಿತಿದ್ದ. ಸುದ್ದಿ ತಿಳಿದ ತಕ್ಷಣ ಕೋಟ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆರೋಪಿ ನರಸಿಂಹ ನಾಯ್ಕನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮೃತ ನಾರಾಯಣ ನಾಯ್ಕ ಪತ್ನಿ, ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.