ಬೆಂಕಿ ಆಕಸ್ಮಿಕ: ಮನೆ ಸಂಪೂರ್ಣ ಭಸ್ಮ

ಕುಂದಾಪುರ: ಹೆಮ್ಮಾಡಿ ಸಮೀಪದ ಕಟ್‌ಬೆಲ್ತೂರು ಗ್ರಾಮದ ಸುಳ್ಸೆ ಎಂಬಲ್ಲಿ ಬೆಂಕಿ ಆಕಸ್ಮಿಕದಿಂದ ಮನೆ ಭಸ್ಮವಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಇಲ್ಲಿನ ವಸಂತಿ ಖಾರ್ವಿ ಎಂಬವರ ಮನೆ ಬೆಂಕಿಗಾಹುತಿಯಾಗಿದ್ದು ಬಡ ಕುಟುಂಬ ಬೀದಿಪಾಲಾಗಿದೆ. ರಾತ್ರಿ 7.30ರ ಸುಮಾರಿಗೆ ಬಚ್ಚಲು ಮನೆಯಲ್ಲಿ ನೀರು ಕಾಯಿಸಲೆಂದು ಬೆಂಕಿ ಹಾಕಲಾಗಿದ್ದು ಬೆಂಕಿ ಒಲೆಯ ಸನಿಹದಲ್ಲಿದ್ದ ಒಣ ಕಟ್ಟಿಗೆಗೆ ಹಿಡಿದು ಮುಂದುವರಿದು ಗ್ಯಾಸ್ ಸ್ಟವ್‌ಗೆ ತಾಗಿದ್ದರಿಂದ ಸ್ಟವ್ ಸಿಡಿದು ಏಕಾಏಕಿ ಮನೆಗೆ ಬೆಂಕಿ ಆವರಿಸಿಕೊಂಡಿದ್ದು ಇಡಿ ಮನೆ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. 

ಪುತ್ರಿಯೊಂದಿಗೆ ಬಡತನದಲ್ಲಿಯೂ ದುಡಿಮೆಯ ಹಣದಿಂದ ಪುಟ್ಟ ಮನೆ ಕಟ್ಟಿಕೊಂಡು ನೆಲೆಸಿದ್ದ ವಸಂತಿ ಖಾರ್ವಿ ಕಣ್ಣೆದುರೇ ಮನೆ ಭಸ್ಮವಾಗುತ್ತಿರುವುದನ್ನು ಕಂಡು ದಿಗ್ಭ್ರಾಂತರಾಗಿದ್ದರು. ನೆರೆಹೊರೆಯವರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರೂ ಅಷ್ಟರಲ್ಲಿ ಇಡೀ ಮನೆ ಸುಟ್ಟು ಹೋಗಿತ್ತು. 

ಮನೆಯ ಮೇಲ್ಮಾಡು, ಪಕ್ಕಾಸು, ರೀಪು, ಪೀಠೋಪಕರಣ, ಮಿಕ್ಸಿ, ಮಗಳ ಮದುವೆಗೆಂದು ಸಂಗ್ರಹಿಸಿದ್ದ ಬಂಗಾರ, ಬಟ್ಟೆ ಬರೆ, ದವಸ ಧಾನ್ಯ, ನಗದು ಹಣ ಎಲ್ಲವೂ ಸುಟ್ಟು ಕರಲಾಗಿದೆ. 7 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಘಟನೆಯ ಸಂದರ್ಭ ವಸಂತಿ ಖಾರ್ವಿ ಮತ್ತು ಅವರ ಮಗಳು ಹಿತ್ತಲಲ್ಲಿ ಇದ್ದುದರಿಂದ ಅಪಾಯದಿಂದ ಪಾರಾಗಿದ್ದಾರೆ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com