ಚಿರತೆ ದಾಳಿ: 4 ದಿನದಲ್ಲಿ ಮೂರನೇ ದನ ಬಲಿ

ಕುಂದಾಪುರ: ತಾಲೂಕಿನ ಕಾಳಾವರ, ಜಪ್ತಿ ಮತ್ತು ಹೊಂಬಾಡಿ-ಮಂಡಾಡಿ ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ದಾಳಿ ವಿಪರೀತವಾಗಿದ್ದು, ನಾಲ್ಕು ದಿನದ ಅವಧಿಯಲ್ಲಿ ಒಂದು ದನ ಮತ್ತು ಎರಡು ಕರುಗಳು ಬಲಿಯಾಗಿವೆ. ಅದೆಷ್ಟೋ ನಾಯಿಗಳನ್ನು ಈಗಾಗಲೇ ಚಿರತೆ ಬಲಿ ಪಡೆದಿದ್ದು, ಈ ಪ್ರದೇಶದಲ್ಲಿ ಕತ್ತಲಾವರಿಸುತ್ತಿದ್ದಂತೆಯೇ ಜನ ಮನೆಯಿಂದ ಹೊರಬರಲು ಭಯ ಪಡುವಂತಾಗಿದೆ. 

ಮೂರು ಘಟನೆಗಳು: ಕಾಳಾವರ ಗ್ರಾಪಂ ವ್ಯಾಪ್ತಿಯ ಕಚ್ಚೇರಿ ಎಂಬಲ್ಲಿ ಕೃಷಿಕ ಗೋವಿಂದ ಕುಲಾಲ ಎಂಬವರಿಗೆ ಸೇರಿದ ಕರು ಚಿರತೆಗೆ ಬಲಿಯಾಗಿದೆ. ಸೋಮವಾರ ರಾತ್ರಿ ಮನೆಯಂಗಳದಲ್ಲಿ ಕಟ್ಟಿಹಾಕಿದ್ದ ಕರು ಬೆಳಗ್ಗಿನ ಜಾವ ನೋಡಿದಾಗ ನಾಪತ್ತೆಯಾಗಿತ್ತು. ಹುಡುಕಾಡಿದಾಗ ಗುಡ್ಡದಲ್ಲಿ ಕರುವಿನ ಶವ ಸಿಕ್ಕಿದ್ದು ಉದರ ಎರಡು ಭಾಗವಾಗಿತ್ತು. ಅದಕ್ಕಿಂತ ಮೊದಲು ಶನಿವಾರ ಜಪ್ತಿ ಗ್ರಾಮದ ಜಯಂತಿ ಶೆಟ್ಟಿ ಅವರಿಗೆ ಸೇರಿದ ದನದ ಕರುವನ್ನು ಚಿರತೆ ಹಿಡಿದಿತ್ತು. ಶನಿವಾರದ ದಿನವೇ ಹಿಲ್ಕೊಮೆಯಲ್ಲಿಯೂ ದನವೊಂದು ಚಿರತೆಗೆ ಆಹಾರವಾಗಿದೆ. 

ಭಯಗ್ರಸ್ತ ಪ್ರದೇಶಗಳು: ಹೊಂಬಾಡಿ-ಮಂಡಾಡಿ, ಸುಣ್ಣಾರಿ, ಜಪ್ತಿ, ಹಿಲ್ಕೋಮೆ, ಕಾಳಾವರ, ಕಚ್ಚೇರಿ, ಹೆಸ್ಕುತ್ತೂರು ದಬ್ಬೆಕಟ್ಟೆ, ಕೊರ್ಗಿ, ಅಸೋಡು, ಹುಣ್ಸೆಮಕ್ಕಿ, ಕೊರ್ಗಿ, ಅರ್ಕೊಲೆ, ದೊಡ್ಡ ಅರೆಕಲ್ಲು, ಅರೆಕಲ್ಲುಮನೆ, ಕಾಡಿನಬೆಟ್ಟು ಭಾಗದಲ್ಲಿ ಚಿರತೆ ಹಾವಳಿ ಮೇರೆ ಮೀರಿದೆ. ಮೇಯಲು ಬಿಟ್ಟ ಜಾನುವಾರುಗಳು, ಸಾಕು ನಾಯಿಗಳು, ಬೆಕ್ಕುಗಳು ಚಿರತೆ ಬಾಯಿಗೆ ಸಿಲುಕುತ್ತಿವೆ.

ಚಿರತೆ ಸಂಜೆ ಹೊತ್ತಿಗೆ ದನದ ಕೊಟ್ಟಿಗೆ ಹತ್ತಿರ ಬಂದು ಸುಳಿದಾಡುತ್ತಿರುವ ದೃಶ್ಯ ಪ್ರತಿದಿನ ಕಂಡುಬರುತ್ತಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಳಾವರ ಗ್ರಾಪಂ ಮಾಜಿ ಅಧ್ಯಕ್ಷ ರಂಜಿತ್ ಕುಮಾರ ಆಗ್ರಹಿಸುತ್ತಾರೆ. 

ಹೊರಬರಲು ಭಯ: ಪ್ರಾಣಿಗಳ ಮೀಸಲು ಅರಣ್ಯ ವ್ಯಾಪ್ತಿಯಲ್ಲಿರುವ ಈ ಪ್ರದೇಶದ ಜನ ಸಂಜೆ ಬಳಿಕ ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಶಾಲಾ, ಕಾಲೇಜಿಗೆ ಸಾಗುವ ವಿದ್ಯಾರ್ಥಿಗಳು ಭಯದಿಂದಲೇ ಹೆಜ್ಜೆ ಇರಿಸುವಂತಾಗಿದೆ. ಸರಿಸುಮಾರು 3000ಕ್ಕೂ ಅಧಿಕ ಮಂದಿ ನಾಗರಿಕರು ಚಿರತೆ, ನಾಯಿಕುರ್ಕದಂತಹ ಕಾಡು ಪ್ರಾಣಿಗಳ ಭಯದಲ್ಲೇ ಬದುಕುತ್ತಿದ್ದಾರೆ. 

ಸ್ಥಳೀಯರ ಆಕ್ರೋಶ: ಇಲ್ಲಿ ನಿರಂತರ ಗೋವುಗಳು ಚಿರತೆ ಬಾಯಿಗೆ ಆಹಾರವಾಗುತ್ತಿದ್ದರೂ ಕೇಳುವವರಿಲ್ಲದ ಪರಿಸ್ಥಿತಿ ನಿರ್ಮಾಣ ಆಗಿದೆ. ಚಿರತೆ ದನದ ಕೊಟ್ಟಿಗೆ, ಮನೆಯಂಗಳಕ್ಕೆ ನುಗ್ಗಿ ದಾಂಧಲೆ ನಡೆಸುತ್ತಿವೆ. ಸಂಬಂಧಿಸಿದ ಇಲಾಖೆ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಇಲಾಖೆ ಮುಂದೆ ಘೇರಾವ್ ಹಾಕಲಾಗುವುದು ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಸಿದ್ದಾರೆ. 

ಜ.17ರಂದು ಬೃಹತ್ ಪ್ರತಿಭಟನೆ 

ಮೂರು ಗ್ರಾಮಗಳಲ್ಲಿ ಈಗಾಗಲೇ 10ಕ್ಕೂ ಅಧಿಕ ಗೋವು, 50ಕ್ಕೂ ಮಿಕ್ಕಿ ಸಾಕು ನಾಯಿಗಳು ಚಿರತೆ ದಾಳಿಗೆ ಸಿಲುಕಿವೆ. ಈಗ ಚಿರತೆಯೊಂದಿಗೆ ಹುಲಿಯೊಂದು ತಿರುಗಾಟ ನಡೆಸುತ್ತಿದೆ ಎಂಬ ಮಾಹಿತಿ ಇದೆ. ಸಂಜೆ ನಂತರ ಯಾರೂ ಮನೆಯಿಂದ ಹೊರಬರುತ್ತಿಲ್ಲ. ಸಾಕು ನಾಯಿಗಳು ಒಂದೇ ಒಂದು ಉಳಿದಿಲ್ಲ. ಇಷ್ಟಾದರೂ ಸಂಬಂಧಿತ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅರಣ್ಯ ಇಲಾಖೆಯ ಈ ನಿಲುವು ವಿರೋಧಿಸಿ ಜ.17ರಂದು ಕಾಳಾವರದಲ್ಲಿ ಬಹತ್ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಗ್ರಾಪಂ ಸದಸ್ಯ ರಾಮಚಂದ್ರ ನಾವಡ ಹೇಳಿದ್ದಾರೆ. 

ಹೋರಾಟಕ್ಕೆ ನಮ್ಮ ಬೆಂಬಲವಿದೆ. ಪರಿಸ್ಥಿತಿಯ ಗಂಭೀರತೆ ಅರಿತು ಇಲಾಖೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಳಾವರ ಗ್ರಾಪಂ ಅಧ್ಯಕ್ಷ ಸತೀಶ್ ಪೂಜಾರಿ ಹೇಳಿದ್ದಾರೆ. 

ಹುಲಿ/ಚಿರತೆ ಎರಡು ಇವೆ 
ನಮ್ಮ ಗ್ರಾಮದಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಚಿರತೆ ಮತ್ತು ನಾಯಿಕುರ್ಕದ ಕಾಟವಿತ್ತು. ಈಗ ಹುಲಿ ಕಾಲಿರಿಸಿದೆ. ಕಳೆದ 1 ವಾರದಿಂದ ಈ ಭಾಗದಲ್ಲಿ ಹುಲಿಯೊಂದು ಸಂಚಾರ ಆರಂಭಿಸಿದೆ. ಅನೇಕರು ಕಂಡಿದ್ದಾರೆ. ಹೊಂಬಾಡಿ-ಮಂಡಾಡಿ ಪರಿಸರದಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ಜಿಂಕೆಗಳು ಈಗ ಕಾಣುತ್ತಿಲ್ಲ. ಸಂಬಂಧಿತ ಇಲಾಖೆ ದುರಂತ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕು. - ವಿಜಯ್ ಹೊಂಬಾಡಿ-ಮಂಡಾಡಿ ನಿವಾಸಿ 

ಪರಿಶೀಲನೆ ನಡೆಸಲಾಗುವುದು 

ಚಿರತೆ ಹಾವಳಿ ಇರುವ ಬಗ್ಗೆ ಮಾಹಿತಿ ಇದೆ. ಹುಲಿ ಬಂದಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಕೊಲ್ಲೂರು, ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಹುಲಿ ಓಡಾಟವಿದೆ. ಕರಾವಳಿ ಪ್ರದೇಶಕ್ಕೆ ತಾಗಿಕೊಂಡಿರುವ ನಡುವಿನ ಬಯಲು ಸೀಮೆಯ ಮೀಸಲು ಅರಣ್ಯ ತಪ್ಪಲು ಪ್ರದೇಶದಲ್ಲಿ ಈವರೆಗೆ ಹುಲಿ ಓಡಾಟ ನಡೆಸಿರುವುದು ಬೆಳಕಿಗೆ ಬಂದಿಲ್ಲ. ನಾಗರಿಕರ ಹೇಳಿಕೆಯನ್ನು ತಳ್ಳಿಹಾಕಲಾಗದು. ಇಲಾಖೆ ತಕ್ಷಣ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಿದೆ. ಯಾವುದೇ ಕಾರಣಕ್ಕೂ ಗಾಬರಿಗೊಳಗಾಗುವ ಅಗತ್ಯವಿಲ್ಲ. -ರವಿಶಂಕರ್ ಡಿಎಫ್‌ಓ ಕುಂದಾಪುರ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com