ಕೋಟೇಶ್ವರ: ಇಲ್ಲಿನ ಸಮೀಪದ ಬೀಜಾಡಿ ರಾ. ಹೆದ್ದಾರಿ ಬಳಿ ಜ. 15ರಂದು ಮುಂಜಾನೆ ವಿಶ್ರಾಂತಿಗಾಗಿ ನಿಲ್ಲಿಸಲಾಗಿದ್ದ ಇನ್ಸುಲೇಟರ್ ಲಾರಿಯ ಡೀಸೆಲ್ ಅಪಹರಿಸಲು ಯತ್ನಿಸಿದ ಮಂಬಯಿ ನೋಂದಣಿಯ ಲಾರಿಯ ಕಂಡಕ್ಟರ್ ಸಿಕ್ಕಿ ಬಿದ್ದು ಇತರ ನಾಲ್ವರು ಪರಾರಿಯಾಗಿದ್ದಾರೆ.
ಮಾಸ್ತಿಕಟ್ಟೆ ಮೂಲದ ಇನ್ಸುಲೇಟರ್ ಚಾಲಕ ರಾಜೇಂದ್ರ ಅವರು ಗೋವಾದಿಂದ ಮೀನು ಸಾಗಾಟಕ್ಕಾಗಿ ಕೇರಳಕ್ಕೆ ತೆರಳಿ ವಾಪಸು ಗೋವಾಕ್ಕೆ ಸಾಗುವ ಹಾದಿಯಲ್ಲಿ ಬೀಜಾಡಿ ರಾ. ಹೆದ್ದಾರಿ ಬಳಿ ಲಾರಿ ನಿಲ್ಲಿಸಿ ನಿದ್ರೆಗೆ ಶರಣಾದರು. ಅದೇ ಸಂದರ್ಭದಲ್ಲಿ ಲಾರಿಯ ಬಳಿ ಆಗಮಿಸಿದ ಸುಮಾರು ಐದು ಮಂದಿ ಲಾರಿಯ ಕನ್ನಡಿ ಹಾಗೂ ಬಾಗಿಲನ್ನು ಬಡಿದು ಬಾಗಿಲು ತೆರೆಯುವಂತೆ ಒತ್ತಾಯಿಸಿದರು. ಇಬ್ಬರು ಡೀಸೆಲ್ ಟ್ಯಾಂಕ್ ಬಳಿ ತೆರಳಿ ಅದನ್ನು ತೆರೆಯಲು ಪ್ರಯತ್ನ ಪಡುತ್ತಿದ್ದರು. ಭಾರೀ ಶಬ್ದದಿಂದ ಎಚ್ಚೆತ್ತ ರಾಜೇಂದ್ರ ಅವರು ಅಪಾಯದ ಸೂಚನೆ ಅರಿತು ಲಾರಿಯ ಎಡಭಾಗದ ಬಾಗಿಲನ್ನು ತೆರೆದು ಹೊರ ಜಿಗಿದು ಅಲ್ಲೇ ಸಮೀಪದ ಗ್ಯಾರೇಜ್ ಮಾಲಕರ ಮನೆಗೆ ಓಡಿ ಬಾಗಿಲು ತಟ್ಟಿ ಸಹಾಯಕ್ಕಾಗಿ ಬೊಬ್ಬೆ ಹಾಕಿದರು.
ಕೂಡಲೇ ಸ್ಪಂದಿಸಿದ ಆಸುಪಾಸಿನವರು ಬರುತ್ತಿರುವುದನ್ನು ಅರಿತ ದುಷ್ಕರ್ಮಿಗಳು ತಾವು ಬಂದ ಲಾರಿ ಸಮೇತ ಪಲಾಯನಗೆ„ದರು. ಅವರನ್ನು ಬೆನ್ನಟ್ಟಿದ ಸ್ಥಳೀಯರು ಕುಂದಾಪುರ ಪೊಲೀಸರಿಗೆ ಮಾಹಿತಿ ನೀಡಿದರು. ಏತನ್ಮಧ್ಯೆ ತಪ್ಪಿಸಿಕೊಳ್ಳುವ ತವಕದಲ್ಲಿ ಕೋಟೇಶ್ವರದ ಕಿನಾರಾ ಬೀಚ್ ರಸ್ತೆಗೆ ಆರೋಪಿಗಳು ಲಾರಿಯನ್ನು ಚಲಾಯಿಸಿದರು. ರಸ್ತೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಅವರ ಲಾರಿ ಭಾರೀ ಹೊಂಡಕ್ಕೆ ಬಿತ್ತು. ಅಷ್ಟರಲ್ಲೇ ಸ್ಥಳಕ್ಕಾಗಮಿಸುವರನ್ನು ಕಂಡ ಉಳಿದ ನಾಲ್ವರುರು ಇನ್ನೊಂದು ಲಾರಿಯಲ್ಲಿ ಪಲಾಯನಗೆ„ದರು.
ಓರ್ವನನ್ನು ಬಂಧಿಧಿಸಿದ ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೊಂಡಕ್ಕೆ ಬಿದ್ದ ಲಾರಿಯನ್ನು ಪೊಲೀಸರು ಹಾಗೂ ಸಾರ್ವಜನಿಕರು ಸೇರಿ ಕ್ರೇನ್ ಮೂಲಕ ಎತ್ತಿ ಕುಂದಾಪುರ ಠಾಣೆಗೆ ಸಾಗಿಸಿದರು.
ಘನ ಹಾಗೂ ಲಘು ವಾಹನ ಚಾಲಕರು ಮಧ್ಯರಾತ್ರಿ ಬಳಿಕ ವಿಶ್ರಾಂತಿಗಾಗಿ ವಾಹನ ನಿಲುಗಡೆಗೊಳಿಸುವಾಗ ಭದ್ರತೆ ಇರುವ ಸೂಕ್ತ ಪ್ರದೇಶವನ್ನು ಆಯ್ಕೆ ಮಾಡಿ ನಿಲುಗಡೆಗೊಳಿಸಬೇಕೆಂದು ಕುಂದಾಪುರ ಎಸ್.ಐ. ಜಯರಾಮ ಗೌಡ ವಿನಂತಿಸಿದ್ದಾರೆ.