ಹೈದರಾಬಾದ್: ಕೊಲೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿ ಮುನ್ನಾ ನನ್ನು ಕೊನೆಗಾಣಿಸಿದ್ದ, ದಕ್ಷತೆಯಿಂದಲೇ ಹೆಸರುವಾಸಿಯಾಗಿದ್ದ ಮಲ್ಲಿಕಾರ್ಜುನ ಬಂಡೆ ಹೈದ್ರಾಬಾದ್'ನಲ್ಲಿ ಇಂದು ನಡುರಾತ್ರಿ ನಿಧನರಾಗಿದ್ದಾರೆ.. 39 ವರ್ಷದ ಬಂಡೆ ನಿಧನದ ಹಿನ್ನೆಲೆಯಲ್ಲಿ ಗುಲ್ಬರ್ಗ ಬೂದಿಮುಚ್ಚಿದ ಕೆಂಡದಂತಾಗಿದ್ದು, ಹೆಚ್ಚಿನ ಭದ್ರತೆ ವಹಿಸಲಾಗಿದೆ...
ಗುಲ್ಬರ್ಗ ಜನರ ಪಾಲಿಗೆ ಅಕ್ಷರಶಃ ಹೀರೋವೇ ಆಗಿದ್ದ ಬಂಡೆ ಕಳೆದ ಎಂಟು ದಿನಗಳಿಂದ ಕೋಮಾ ಸ್ಥಿತಿಯಲ್ಲೇ ಇದ್ದು ಜೀವನ್ಮರಣ ಹೋರಾಟದಲ್ಲಿದ್ದರು. ಹೈದರಾಬಾದ್'ನ ಯಶೋಧಾ ಆಸ್ಪತ್ರೆಯಲ್ಲಿ ರಾತ್ರಿ 12:45ರ ಸುಮಾರಿಗೆ ಮಲ್ಲಿಕಾರ್ಜುನ್ ಬಂಡೆ ಕೊನೆಯುಸಿರಳೆದಿದ್ದಾರೆ.
ಜನವರಿ ಎಂಟರಂದು ಗುಲ್ಬರ್ಗದ ರೋಜಾ ಸ್ಟೇಷನ್ ಸಮೀಪ ರೌಡಿ ಶೀಟರ್ ಮುನ್ನಾ ವಿರುದ್ಧದ ಕಾರ್ಯಾಚರಣೆ ವೇಳೆ ಗುಂಡಿನ ಚಕಮಕಿ ನಡೆದಿತ್ತು. ಆಗ, ಮುನ್ನಾ ಹತ್ಯೆಯಾದನಾದರೂ ಬಂಡೆ ಸೇರಿದಂತೆ ಮೂವರು ಪೊಲೀಸರಿಗೆ ಗುಂಡಿನೇಟು ಬಿದ್ದು ಗಂಭೀರ ಗಾಯಗೊಂಡಿದ್ದರು. ಮೂವರನ್ನೂ ಆಸ್ಪತ್ರೆಗೆ ಸೇರಿಸಲಾಯಿತಾದರೂ ಮಲ್ಲಿಕಾರ್ಜುನ ಬಂಡೆ ಮಾತ್ರ ಕೋಮಾ ಸ್ಥಿತಿ ತಲುಪಿದ್ದರು. ಎಂಟು ದಿನಗಳಿಂದ ಜೀವನ್ಮರಣ ಹೋರಾಟದಲ್ಲಿದ್ದ ಬಂಡೆಯ ಜೀವ ಕೊನೆಗೂ ನಿಲ್ಲಲಿಲ್ಲ...
ಸಿಕಂದರಾಬದ್'ನ ಗಾಂಧಿ ಆಸ್ಪತ್ರೆಯಲ್ಲಿ ಬಂಡೆಯವರ ಮರಣೋತ್ತರ ಪರೀಕ್ಷೆ ನಡೆದಿದ್ದು, ಮೃತದೇಹವನ್ನ ನಾಳೆ, ಅಂದರೆ ಗುರುವಾರದಂದು ಹೈದರಾಬಾದ್'ನಿಂದ ಹೆಲಿಕಾಪ್ಟರ್ ಮೂಲಕ ಗುಲ್ಬರ್ಗಕ್ಕೆ ತೆಗೆದುಕೊಂಡುಹೋಗಲು ನಿರ್ಧರಿಸಲಾಗಿದೆ. ಬಳಿಕ, ಗುಲ್ಬರ್ಗದ ಆಳಂದ ತಾಲೂಕಿನಲ್ಲಿರುವ ಅವರ ಸ್ವಂತ ಊರಾದ ಖಜೂರಿಯಲ್ಲಿ ನಾಳೆ ಸಂಜೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.
ಗುಲ್ಬರ್ಗದಲ್ಲಿ ಅಕ್ಷರಶಃ ಸ್ಮಶಾನಮೌನ..!
ವೀರಮರಣವಪ್ಪಿದ ಮಲ್ಲಿಕಾರ್ಜುನ ಬಂಡೆಯವರ ನಿಧನಕ್ಕೆ ಇಡೀ ಗುಲ್ಬರ್ಗ ಜನತೆಯೇ ಕಣ್ಣೀರು ಮಿಡಿಯುತ್ತಿದೆ. ದಕ್ಷತೆಗೆ ಹೆಸರಾಗಿದ್ದ ಬಂಡೆಯವರು ಇಡೀ ಜಿಲ್ಲೆಯ ಜನರ ಪಾಲಿಗೆ ಹೀರೋ ಆಗಿದ್ದರು ಎಂಬ ಮಾತು ಅತಿಶಯೋಕ್ತಿಯಲ್ಲ. ಗುಲ್ಬರ್ಗ ಪಟ್ಟಣದಲ್ಲಿ ಒಂದು ರೀತಿ ಅಘೋಷಿತ ಬಂದ್ ಸ್ಥಿತಿ ಇರುವುದೇ ಇದಕ್ಕೆ ಸಾಕ್ಷಿ...
ವಿದೇಶದಲ್ಲಿ ಚಿಕಿತ್ಸೆ ಕೊಡಿಸಬಹುದಿತ್ತು...!
ಮಲ್ಲಿಕಾರ್ಜುನ ಬಂಡೆಯವರನ್ನ ಸಿಂಗಾಪುರಕ್ಕೆ ಕರೆದೊಯ್ಯಲಾಗುತ್ತದೆ ಎಂಬಂತಹ ಸುದ್ದಿಗಳು ಕೆಲ ದಿನಗಳಿಂದ ಕೇಳಿಬಂದಿದ್ದವು. ಆದರೆ, ಈ ಸುದ್ದಿಗಳು ನಿಜವಾಗಲಿಲ್ಲ. ವಿದೇಶದಲ್ಲಿ ಚಿಕಿತ್ಸೆ ನೀಡಿದಿದ್ದರೆ ಬಂಡೆಯವರು ಪ್ರಾಯಶಃ ಬದುಕುತ್ತಿದ್ದರೇನೋ ಎಂಬ ಮಾತುಗಳೂ ಈಗ ಕೇಳಿಬರುತ್ತಿವೆ. ಸರ್ಕಾರದ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಲ್ಲಿಕಾರ್ಜುನ ಬಂಡೆ ಸೂಕ್ತ ಚಿಕಿತ್ಸೆ ಸಿಗದೇ ಮೃತಗೊಂಡರು ಎಂಬ ಆರೋಪ ಎದುರಾಗಿದೆ.
ಜನರ ಒತ್ತಾಯಕ್ಕೆ ಮಣಿದ ಸರ್ಕಾರ...!
ಬಂಡೆಯವರ ಮೃತದೇಹವನ್ನ ಗುಲ್ಬರ್ಗ ನಗರಕ್ಕೆ ತರದೇ ಸೀದಾ ಅವರ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿತ್ತು. ಬಂಡೆಯವರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದ ಗುಲ್ಬರ್ಗ ಜನರು ಪಾರ್ಥಿವ ಶರೀರವನ್ನ ನಗರಕ್ಕೆ ಕರೆತರಬೇಕೆಂದು ದೊಡ್ಡ ಹೋರಾಟಕ್ಕೇ ಅಣಿಯಾಗಿದ್ದರು. ಮಾಧ್ಯಮಗಳು ಹಾಗೂ ಅನೇಕ ನಿವೃತ್ತ ಪೊಲೀಸ್ ಅಧಿಕಾರಿಗಳು ಬಂಡೆಯವರ ಮೃತದೇಹವನ್ನ ಗುಲ್ಬರ್ಗಕ್ಕೆ ಕರೆದೊಯ್ಯಬೇಕೆಂಬ ಕೂಗಿಗೆ ಧ್ವನಿಗೂಡಿಸಿದ್ದರು. ಈ ಎಲ್ಲಾ ಒತ್ತಾಯಗಳಿಗೆ ಸರ್ಕಾರ ಮಣಿದಿದ್ದು, ಮಲ್ಲಿಕಾರ್ಜುನ ಬಂಡೆಯವರ ಮೃತದೇಹವನ್ನ ಗುಲ್ಬರ್ಗ ನಗರಕ್ಕೆ ತರಲು ಸರ್ಕಾರ ಒಪ್ಪಿಕೊಂಡಿದೆ.
ಮಕ್ಕಳ ದತ್ತು ಮತ್ತು 15 ಲಕ್ಷ ಪರಿಹಾರ!
ವೀರಮರಣವನ್ನಪ್ಪಿದ ಪಿಎಸ್ಐ ಮಲ್ಲಿಕಾರ್ಜುನ ಬಂಡೆಯವರ ಕುಟುಂಬಕ್ಕೆ ಸರ್ಕಾರ 15 ಲಕ್ಷ ರುಪಾಯಿ ಪರಿಹಾರ ಧನ ಘೋಷಿಸಿದೆ. ಅಲ್ಲದೇ, ಬಂಡೆಯವರ ಇಬ್ಬರು ಮಕ್ಕಳನ್ನ ದತ್ತುಪಡೆದುಕೊಂಡು ಸಕಲ ಶಿಕ್ಷಣ ಕೊಡಿಸಲೂ ಸರ್ಕಾರ ನಿರ್ಧರಿಸಿದೆ.
ಕುಟುಂಬದ ಅಳಲು...!
ಮಲ್ಲಿಕಾರ್ಜುನ ಬಂಡೆಯವರ ಅಂತ್ಯಸಂಸ್ಕಾರ ಇಂದೇ ಆಗಬೇಕೆಂದು ಅವರ ಕುಟುಂಬದವರು ಕೇಳಿಕೊಂಡಿರುವುದು ಗೊತ್ತಾಗಿದೆ. ತಮ್ಮ ಕೌಟುಂಬಿಕ ಸಂಪ್ರದಾಯದ ಪ್ರಕಾರ ಸತ್ತ ದಿನವೇ ಅಂತ್ಯ ಸಂಸ್ಕಾರವಾಗಬೇಕಿರುವುದರಿಂದ ಇಂದೇ ಪಾರ್ಥಿವ ಶರೀರವನ್ನ ಗ್ರಾಮಕ್ಕೆ ಕರೆತರಬೇಕೆಂದು ಪತ್ನಿ ಹಾಗೂ ಸಂಬಂಧಿಕರು ಸಂಬಂಧಪಟ್ಟ ಅಧಿಕಾರಿಗಳನ್ನ ಒತ್ತಾಯಿಸಿದ್ದಾರೆ.
ಸೌಜನ್ಯ: ಸುವರ್ಣ ನ್ಯೂಸ್