ಕೊಲ್ಲೂರು ದೇವಳ ಸಿಬ್ಬಂದಿ ಅಮಾನತು

ಕೊಲ್ಲೂರು: ತುಲಾಭಾರ ಸೇವೆಯಲ್ಲಿ ಭಕ್ತರು ಸಮರ್ಪಿಸಿದ ಬೆಳ್ಳಿಯನ್ನು ಯಾಮಾರಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಸಿಬ್ಬಂದಿ ನಾರಾಯಣ ಪುರಾಣಿಕ ಅವರನ್ನು ಅಮಾನತುಗೊಳಿಸಲಾಗಿದೆ. 

ತನಿಖೆ ಪೂರ್ಣವಾಗುವ ತನಕ ಅವರನ್ನು ಅಮಾನತಿನಲ್ಲಿಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ ತಿಳಿಸಿದ್ದಾರೆ. 

ಪ್ರಕರಣದ ವಿವರ: ಜ.1ರಂದು ತಮಿಳುನಾಡು ಮೂಲದ ಭಕ್ತರು ಕ್ಷೇತ್ರದಲ್ಲಿ ತುಲಾಭಾರ ಸೇವೆ ನೀಡಿದ್ದು ಈ ಸಂದರ್ಭ ಸಕ್ಕರೆಯೊಂದಿಗೆ ಭಾರಕ್ಕೆ 4 ಕೆಜಿ 850 ಗ್ರಾಂ ಬೆಳ್ಳಿ ಸಮರ್ಪಿಸಿದ್ದರು. ಇದು ದೇವಿಗೆ ಸಲ್ಲಬೇಕಾಗಿದ್ದ ಪರಿಕರವಾಗಿತ್ತು. ತುಲಾಭಾರ ಸೇವೆ ಬಳಿಕ ಇದರ ಉಸ್ತುವಾರಿ ವಹಿಸಿದ್ದ ಸಿಬ್ಬಂದಿ ಯಾರಿಗೂ ಅರಿವಿಲ್ಲದ್ದಂತೆ ಬೆಳ್ಳಿಯ ಗಟ್ಟಿ ಯಮಾರಿಸಿದ್ದರು ಎಂದು ಆರೋಪಿಸಲಾಗಿತ್ತು. ಅಲ್ಲದೆ ಈ ಬಗ್ಗೆ ಕೆಲವರು ದೇವಳದ ವ್ಯವಸ್ಥಾಪನಾ ಸಮಿತಿಗೆ ಮಾಹಿತಿ ನೀಡಿದ್ದರು. 

ಸಮಿತಿ ಸಿಸಿ ಟಿವಿ ಕ್ಯಾಮೆರಾದಲ್ಲಿ ಪರಿಶೀಲನೆ ನಡೆಸಿದ ಸಂದರ್ಭ ಬೆಳ್ಳಿಗಟ್ಟಿಯೊಂದನ್ನು ಎಗರಿಸಿದ್ದು ಪತ್ತೆಯಾಗಿದ್ದು ಸಂಬಂಧಿತ ಸಿಬ್ಬಂದಿಯನ್ನು ಕರೆಸಿ ತೆಗೆದುಕೊಂಡಿರುವ ಬೆಳ್ಳಿಯ ಗಟ್ಟಿಯನ್ನು ವಾಪಸ್ ಮಾಡುವಂತೆ ಸೂಚನೆ ನೀಡಲಾಗಿತ್ತು. ಸಿಬ್ಬಂದಿ ತಾನು ತೆಗೆದಿಲ್ಲ ಎಂದು ಮೊದಲು ವಾದ ಮುಂದಿಟ್ಟರೂ ನಂತರ ದಾಖಲಾತಿ ಹಾಜರುಪಡಿಸಿದಾಗ ತಲೆತಗ್ಗಿಸಿದ್ದರು. ವಾಪಸ್ ಮರಳಿಸುವುದಾಗಿ ಹೇಳಿದ್ದರೂ ಈ ತನಕ ದೇವಳಕ್ಕೆ ಸಮರ್ಪಿಸದ ಹಿನ್ನೆಲೆಯಲ್ಲಿ ಅವರನ್ನು ಮುಂದಿನ ವಿಚಾರಣೆ ತನಕ ಅಮಾನತಿನಲ್ಲಿಡಲು ಮಂಗಳವಾರ ಸಮಿತಿ ತೀರ್ಮಾನ ತೆಗೆದುಕೊಂಡಿದೆ ಎಂದು ಕೃಷ್ಣಪ್ರಸಾದ್ ಅಡ್ಯಂತಾಯ ತಿಳಿಸಿದ್ದಾರೆ. 

ಜ.18ರಂದು ಮುಂದಿನ ತನಿಖೆ: ಜ.18ರಂದು ದೇವಳದ ವ್ಯವಸ್ಥಾಪನಾ ಸಮಿತಿ ಸಭೆ ನಡೆಯಲಿದ್ದು ಈ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುತ್ತದೆ. ಸೂಕ್ತ ವಕೀಲರನ್ನು ನಿಯೋಜಿಸಿ ಪ್ರಕರಣದ ಸಮಗ್ರ ವಿಚಾರಣೆ ನಡೆಸಲಾಗುವುದು. ಭಕ್ತರ ಭಾವನೆಗೆ ನೋವಾಗುವ ಯಾವುದೇ ಘಟನೆ ದೇವಳದಲ್ಲಿ ನಡೆಯಲು ಬಿಡುವುದಿಲ್ಲ. ರಾಷ್ಟ್ರದ ಹಲವೆಡೆಯ ಭಕ್ತರು ಇಲ್ಲಿ ನಂಬಿಕೆ, ಭಾವನೆ ಶ್ರದ್ಧೆಯಿಂದ ಬರುತ್ತಾರೆ. ದೇವರಿಗೆ ಸಲ್ಲಿಕೆಯಾಗುವ ವಸ್ತುಗಳ ದುರ್ಬಳಕೆ ಸಲ್ಲ. ದೇಗುಲದ ಪಾವಿತ್ರ್ಯತೆ ರಕ್ಷಣೆಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com