ಒಂದೇ ದಿನ ತಂದೆ-ಮಗ ಆತ್ಮಹತ್ಯೆ

ಕುಂದಾಪುರ: ತಾಲೂಕಿನ ಕಟ್‌ಬೆಲ್ತೂರು ಗ್ರಾಮದಲ್ಲಿ ತಂದೆ ಹಾಗೂ ಮಗ ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಗುರುವಾರ ನಡೆದಿದೆ. ಇಲ್ಲಿನ ಕೃಷ್ಣ ಮೊಗವೀರ(70) ಹಾಗೂ ಅವರ ಪುತ್ರ ಸುಕೇಶ್(30) ಆತ್ಮಹತ್ಯೆ ಮಾಡಿಕೊಂಡವರು. ಉತ್ತಮ ಹೈನುಗಾರರಾಗಿದ್ದ ಕೃಷ್ಣ ಮೊಗವೀರ ಅವರು ಕಿಡ್ನಿ ಸ್ಟೋನ್‌ನಿಂದ ಡಿ. 12ರಂದು ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗೊಳಗಾಗಿದ್ದ ಅವರನ್ನು ಡಿ. 19ರಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವುದಾಗಿ ವೈದ್ಯಾಧಿಕಾರಿ ತಿಳಿಸಿದ್ದರು. ಡಿ. 18ರಂದು ಬೆಳಗ್ಗೆ 11 ಗಂಟೆಗೆ ಮನೆಯವರು ಆಸ್ಪತ್ರೆಗೆ ಬಂದು ನೋಡುವಾಗ ನಾಪತ್ತೆಯಾಗಿದ್ದರು. ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. 

ಗುರುವಾರ ಮತ್ತೆ ಹುಡುಕಾಡಿದಾಗ ಕೃಷ್ಣ ಮೊಗವೀರ ಅವರ ಮೃತದೇಹ ಹೆಮ್ಮಾಡಿ ಜನತಾ ಪ್ರೌಢಶಾಲೆ ಸನಿಹದ ಹಾಡಿಯೊಂದರಲ್ಲಿ ಪತ್ತೆಯಾಗಿತ್ತು. ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೊದಲಿನಿಂದಲೂ ಮೂತ್ರಪಿಂಡದಲ್ಲಿ ಕಲ್ಲು ಬೆಳೆಯುತ್ತಿದ್ದು, ಆ ನೋವಿನಿಂದ ಕಂಗೆಟ್ಟಿದ್ದ ಅವರು ಅದೇ ಕಾರಣಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಅಪ್ಪನ ಶವದ ಮುಂದೆ ಮಗ ಆತ್ಮಹತ್ಯೆ: ಕೃಷ್ಣ ಮೊಗವೀರರ ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಮನೆಯವರಿಗೆ ಮೃತದೇಹ ಬಿಟ್ಟುಕೊಡಲಾಗಿತ್ತು. ಗುರುವಾರ ಮಧ್ಯಾಹ್ನದ ಹೊತ್ತು ಮೃತದೇಹ ಮನೆಗೆ ಬಂದು ಮೃತದೇಹದ ಅಂತ್ಯವಿಧಿ ಕಾರ್ಯಗಳಲ್ಲಿ ಪಾಲ್ಗೊಂಡಿದ್ದ ಅವರ ಎರಡನೇ ಮಗ ಸುಕೇಶ್ (30) ಇದ್ದಕ್ಕಿದ್ದಂತೆ ಮನೆಯ ಬಾವಿಗೆ ಹಾರಿದ್ದಾನೆ. ತಕ್ಷಣ ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಮೇಲಕ್ಕೆತ್ತುವಷ್ಟರಲ್ಲಿ ಸುಕೇಶ್ ಮೃತಪಟ್ಟಿದ್ದಾನೆ. 

ಮಾನಸಿಕ ಕಾಯಿಲೆ ಇತ್ತು: ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸುಕೇಶ್‌ಗೆ ಕೆಲ ದಿನಗಳಿಂದ ಮಾನಸಿಕ ಕಾಯಿಲೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದರು. ತಂದೆಯ ಅಗಲುವಿಕೆಯ ಆಘಾತ ಸಹಿಸಿಕೊಳ್ಳಲಾಗದೆ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಕುಂದಾಪುರ ಪೊಲೀಸರು ತಿಳಿಸಿದ್ದಾರೆ. ಮೃತರ ಸಂಬಂಧಿ ಸುರೇಶ್ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರತ್ಯೇಕ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com