ಉಡುಪಿ: ಮೊಬೈಲ್ ಎಂಎಂಎಸ್, ವಾಟ್ಸ್ಅಪ್ ಅಪ್ಲಿಕೇಶನ್ ಮುಖಾಂತರ ಹಿಂದೂ ಧರ್ಮಕ್ಕೆ ಅವಹೇಳನವಾಗುವಂತಹ ವೀಡಿಯೋ ಕ್ಲಿಪ್ಪಿಂಗ್ ಅನ್ನು ಇತರರಿಗೆ ರವಾನಿಸಿ ವಿಕೃತ ಆನಂದ ಪಡೆಯುತ್ತಿದ್ದ ಯುವಕ ಪರ್ಕಳ ಪುತ್ತಿಗೆಯ ಮಹಮ್ಮದ್ ಆದಂ (19) ಎನ್ನುವಾತನನ್ನು ಮಣಿಪಾಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಪರ್ಕಳದ ಭುವನೇಶ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದಂ ತನ್ನ ಮೊಬೈಲಿನಲ್ಲಿ ಹಿಂದೂ ಸಂಘಟನೆಗಳ ವಿರುದ್ಧ ಮತ್ತು ಹಿಂದೂ ದೇವರ ಬಗ್ಗೆ ಅವಹೇಳನ ಮಾಡುವಂತಹ ಮಾತುಗಾರಿಕೆ ಇರುವ ದೃಶ್ಯಾವಳಿಯನ್ನು ತನ್ನ ಮೊಬೈಲಿನಲ್ಲಿ ಶೇಖರಿಸಿಕೊಂಡು ಅದನ್ನು ಇತರರಿಗೆ ರವಾನೆ ಮಾಡುತ್ತಿದ್ದ. ಅದೇ ರೀತಿ ಪರ್ಕಳದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತನ್ನ ಮಿತ್ರ ಭುವನೇಶ ಅವರ ಮೊಬೈಲಿಗೂ ಆದಂ ಆ ದೃಶ್ಯಾವಳಿಯನ್ನು ರವಾನಿಸಿದ್ದ.
ಧರ್ಮದ ಅವಹೇಳನಕಾರಿ ಕ್ಲಿಪ್ಪಿಂಗ್ ರವಾನಿಸಿದ ವಿಷಯ ಹಿಂದೂ ಸಂಘಟನೆಗಳಿಗೆ ತಿಳಿಯುತ್ತಲೇ ವಿಹಿಂಪ, ಬಜರಂಗದಳದವರು ಯುವಕನನ್ನು ಹಿಡಿದು ಎಸ್ಪಿ ಕಚೇರಿಗೆ ಕರೆದೊಯ್ದಿದ್ದಾರೆ. ಎಸ್ಪಿಯವರ ಸೂಚನೆಯಂತೆ ಆರೋಪಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪದೇ ಪದೇ ಹಿಂದೂ ಧರ್ಮಕ್ಕೆ ಘಾಸಿಗೊಳಿಸುವ ಕಾರ್ಯ ನಡೆಯುತ್ತಿದೆ. ಇದನ್ನು ಪೊಲೀಸರು ಹತ್ತಿಕ್ಕಬೇಕು. ಇಲ್ಲವಾದರೆ ತೀವ್ರತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿಹಿಂಪ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಹೇಳಿದ್ದಾರೆ.