ಕುಂದಾಪುರ: ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಹವಾಲ ಹಣವನ್ನು ಆರು ಜನರ ತಂಡ ಲೂಟಿ ಮಾಡಿದ ಪ್ರಕರಣದಲ್ಲಿ ಭಟ್ಕಳ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ವಿದೇಶದಿಂದ ಪಾರ್ಸೆಲ್ ಮೂಲಕ ಬಂದಿದ್ದ ರೂ.36 ಲಕ್ಷ ಹಣವನ್ನು ಡಿ.24ರಂದು ಬೆಂಗಳೂರಿನಿಂದ ರಾತ್ರಿ ಹೊರಡುವ ಸರಕಾರಿ ಬಸ್ಸಿನಲ್ಲಿ ಕ್ರಿಸ್ಮಸ್ ಮುನ್ನಾ ದಿನ ಭಟ್ಕಳಕ್ಕೆ ಕಳುಹಿಸಲಾಗಿತ್ತು. ಪಾರ್ಸೆಲ್ನಲ್ಲಿ ಬಂದಿದ್ದ ಹಣವನ್ನು ಭಟ್ಕಳದ ಅಂಗಡಿಯೊಬ್ಟಾತ ಪಡೆದುಕೊಂಡಿದ್ದ ಮಾಹಿತಿ ಪಡೆದ ಆರು ಜನ ದರೋಡೆಕೋರರ ತಂಡ ಅಂಗಡಿಯಾತನನ್ನು ಬೆದರಿಸಿ, ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಘಟನೆ ನಡೆದು ಎರಡು ದಿನಗಳ ನಂತರ ಭಟ್ಕಳ ನಗರ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಭಟ್ಕಳದ ಇಬ್ಬರು ಹಾಗೂ ಕುಂದಾಪುರ ನಂದನವನ ಗ್ರಾಮದ ರವಿ ಯಾನೆ ರವಿಚಂದ್ರ ಹಾಗೂ ಹೆಮ್ಮಾಡಿಯ ಇರ್ಫಾನ್ನನ್ನು ವಶಕ್ಕೆ ಪಡೆದುಕೊಂಡಿದ್ದು, ಇನ್ನಿಬ್ಬರು ಆರೋಪಿಗಳಾದ ಹೆಮ್ಮಾಡಿಯ ಇಲಾಹಿದ್ ಹಾಗೂ ಕೋಟೇಶ್ವರದ ಅಲ್ತಾಫ್ ಎಂಬಾತನ ಬಂಧನಕ್ಕೆ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ.