ಯಾತ್ರಿಕರನ್ನು ಸುಲಿಗೆ ಮಾಡಲು ವಿಫಲ ಸಂಚು: ಐವರು ದರೋಡೆಕೋರರ ಬಂಧನ

ಕುಂದಾಪುರ: ಕೊಲ್ಲೂರು ಯಾತ್ರಿಕರನ್ನು ಟಾರ್ಗೆಟ್ ಮಾಡಿಕೊಂಡು ದರೋಡೆಗೆ ಯತ್ನಿಸಿದ್ದ ಐವರು ದುಷ್ಕರ್ಮಿಗಳನ್ನು ಕೊಲ್ಲೂರು ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಸೋಮವಾರ ಬಂಧಿಸಿದ್ದಾರೆ. 

ಥೇಟ್ ಸಿನಿಮಾ ಮಾದರಿಯಲ್ಲಿ ನಡೆದ ದುಷ್ಕೃತ್ಯ ಪೂರಕ ಘಟನೆಯಲ್ಲಿ ಮಂಗಳೂರು ವಾಮಂಜೂರಿನ ನಿವಾಸಿ ಸೈಫುದ್ದೀನ್ (19), ಫೈಜಲ್ (20), ಮೂಡುಶೆಡ್ಡೆಯ ಮಹಮದ್ ರಿಜ್ವಾನ್ (26), ಮಹಮ್ಮದ್ ಆಲಿ ಶಾನೂರ್ (21) ಹಾಗೂ ಹರ್ಷಿತ್ (21)ಬಂಧಿತರು. 

ಘಟನೆ ವಿವರ: ಕೇರಳದಿಂದ ಕೊಲ್ಲೂರಿಗೆ ಸ್ಯಾಂಟ್ರೋ ಕಾರ್‌ನಲ್ಲಿ ಭಾನುವಾರ ರಾತ್ರಿ ತೆರಳುತ್ತಿದ್ದ ಯಾತ್ರಿಕರು ಹೆಮ್ಮಾಡಿ ಸಮೀಪ ಕೊಲ್ಲೂರಿಗೆ ತೆರಳುವ ಹಾದಿಯ ಕುರಿತು ಅಲ್ಲಿಯೇ ಇದ್ದ ಮಾರುತಿ ಸ್ವಿಫ್ಟ್‌ನಲ್ಲಿ ತೆರಳುತ್ತಿದ್ದವರಲ್ಲಿ ವಿಚಾರಿಸಿದ್ದಾರೆ. ಅವರು ಇದೇ ಮಾರ್ಗವಾಗಿ ಮುಂದೆ ಹೋಗಿ. ಸ್ವಲ್ಪ ದೂರದಲ್ಲಿಯೇ ದಟ್ಟ ಕಾಡು ಎದುರಾಗುತ್ತದೆ. ಎಚ್ಚರಿಕೆಯಿಂದ ಪಯಣಿಸಿ ಎಂದಿದ್ದಾರೆ. 

ಸ್ಯಾಂಟ್ರೋ ಕಾರು ಮುಂದೆ ಸಾಗುತ್ತಿರುವಂತೆಯೇ ಮಾರುತಿ ಸ್ವಿಫ್ಟ್ ಕಾರು ಬೆನ್ನತ್ತಿದೆ. ವಂಡ್ಸೆಯಿಂದ ಸ್ವಲ್ಪ ದೂರದ ಶಾರ್ಕೆ ತಿರುವಿನಲ್ಲಿ ಓವರ್‌ಟೇಕ್ ಮಾಡಿದ ಮಾರುತಿ ಸ್ವಿಫ್ಟ್ ಕಾರಿನವರು ಯಾತ್ರಿಕರ ಕಾರನ್ನು ತಡೆಯುವ ಯತ್ನ ನಡೆಸಿದ್ದಾರೆ. ಅಲ್ಲದೆ ರಾಡ್ ಕಾರ್‌ಗೆ ಬೀಸಿದ್ದಾರೆ. ಇದರಿಂದ ಭಯಗೊಂಡ ಯಾತ್ರಿಕರನ್ನು ಹೊತ್ತ ಸ್ಯಾಂಟ್ರೋ ಕಾರಿನ ಚಾಲಕರು ತಡೆಯುವ ಯತ್ನ ನಡೆಸಿದ್ದ ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿದ್ದಾರೆ. ನೇರವಾಗಿ ಕೊಲ್ಲೂರು ತಲುಪಿ ಪೊಲೀಸ್ ಠಾಣೆಗೆ ವಿಷಯ ತಲುಪಿಸಿದ್ದಾರೆ. ಎಚ್ಚೆತ್ತ ಕೊಲ್ಲೂರು ಪೊಲೀಸರು ಎಲ್ಲೆಡೆ ನಾಕಾಬಂದಿಗೆ ಆದೇಶಿಸಿದ್ದಾರೆ. 

ಕಾರ್ಯಾಚರಣೆ: ಉಡುಪಿ ಜಿಲ್ಲಾ ಎಸ್ಪಿ ಡಾ. ಬೋರಲಿಂಗಯ್ಯ, ಕುಂದಾಪುರ ಡಿವೈಎಸ್ಪಿ ಸಿ.ಬಿ. ಪಾಟೀಲ್ ಮಾರ್ಗದರ್ಶನದಲ್ಲಿ ಕೊಲ್ಲೂರು ಠಾಣಾಧಿಕಾರಿ ದೇವೇಂದ್ರ ಸಿಬ್ಬಂದಿಗಳೊಂದಿಗೆ ಸೋಮವಾರ ವ್ಯಾಪಕ ಕಾರ್ಯಾಚರಣೆಗಿಳಿದ ಬೆನ್ನಲ್ಲೇ ವಂಡ್ಸೆ ಸಮೀಪದ ಶಾರ್ಕೆ ಕ್ರಾಸ್ ಹತ್ತಿರ ಗದ್ದೆಯಲ್ಲಿ ಮಾರುತಿ ಸ್ವಿಫ್ಟ್ ಕಾರೊಂದು ನಿಂತಿದ್ದು ಮುಂಭಾಗ ನಜ್ಜುಗುಜ್ಜಾಗಿತ್ತು. ಜೀಪು ನಿಲ್ಲಿಸಿ ಕಾರಿನ ತಪಾಸಣೆ ನಡೆಸಿದ ಪಿಎಸ್‌ಐ ದೇವೇಂದ್ರ ವಿಚಾರಣೆ ನಡೆಸಿದಾಗ ಕಾರಿನಲ್ಲಿದ್ದ ಐವರು ಯಾವುದೋ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ತಿಳಿಸಿದ್ದಾರೆ. 

ಸಂಶಯ ತಳೆದ ಪೊಲೀಸರು ಕಾರನ್ನು ಪರಿಶೀಲಿಸಿದಾಗ ತಲವಾರು ಪತ್ತೆಯಾಗಿದೆ. ಎಚ್ಚೆತ್ತ ಪಿಎಸ್‌ಐ ಮತ್ತು ಸಿಬ್ಬಂದಿ ಐವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ವೇಳೆ ದರೋಡೆಗೆ ಯತ್ನಿಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. 

ಕೊಲ್ಲೂರು-ಹೆಮ್ಮಾಡಿ ಮಾರ್ಗವಾಗಿ ರಾತ್ರಿ ವೇಳೆ ಸಂಚರಿಸುವ ಯಾತ್ರಿಕರನ್ನು ಗುರಿಯಾಗಿರಿಸಿಕೊಂಡು ಕೆಲ ದಿನಗಳಿಂದ ದರೋಡೆಗೆ ಸಂಚು ರೂಪಿಸಿದ್ದರು ಎನ್ನುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಕಾರು, ಮಾರಕಾಯುಧ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ದರೋಡೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ವಿಚಾರಣೆ ಮುಂದುವರಿಸಲಾಗಿದೆ. ಆರೋಪಿಗಳು ಹಿಂದೆಯೂ ಕೆಲವೊಂದು ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಉಗ್ರ ಯಾಸಿನ್ ಭಟ್ಕಳ ಸಹವರ್ತಿಗಳೆಂಬ ವದಂತಿ: ಆರೋಪಿಗಳು ಕಾರನ್ನು ದುರಸ್ತಿ ಮಾಡಿಕೊಂಡು ತೆರಳುವ ಸನ್ನಾಹದಲ್ಲಿರುವಾಗಲೆ ವದಂತಿಯೊಂದು ತಾಲೂಕಿನ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ವಂಡ್ಸೆಯಲ್ಲಿ ಉಗ್ರ ಯಾಸಿನ್ ಭಟ್ಕಳ ಸಹವರ್ತಿಗಳನ್ನು ಬಂಧಿಸಲಾಗಿದೆ ಎಂಬ ಪುಕಾರು ಹಬ್ಬಿಸಲಾಗಿತ್ತು. ತನಿಖೆ ವೇಳೆ ಇದು ಕೇವಲ ವದಂತಿ ಎಂಬುದು ಖಚಿತವಾದ ಬಳಿಕ ನಾಗರಿಕರು ನಿಟ್ಟಿಸಿರು ಬಿಡುವಂತಾಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com