ಸಾಸ್ತಾನದಲ್ಲಿ ಎಟಿಎಂ ಧ್ವಂಸಗೊಳಿಸಿದ ಕಳ್ಳರು

ಸಾಸ್ತಾನ: ಪಾಂಡೇಶ್ವರದಲ್ಲಿನ ಕಾರ್ಪೊರೇಶನ್ ಬ್ಯಾಂಕ್‌ಗೆ ಸೇರಿದ ಎಟಿಎಂನಿಂದ ಹಣ ಕಳವು ಮಾಡಲು ಯತ್ನಿಸಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. 

ಈ ಎಟಿಎಂ ಕೇಂದ್ರವು ರಾಷ್ಟ್ರೀಯ ಹೆದ್ದಾರಿಯಿಂದ ಅನತಿ ದೂರದಲ್ಲೇ ಇದ್ದು, ದರೋಡೆ ಯತ್ನ ಯಾರಿಗೂ ತಿಳಿಯದೇ ಇರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ದರೋಡೆಕೋರರು ಮುಂಜಾಗ್ರತೆ ಕ್ರಮವಾಗಿ ಭದ್ರತೆಗೆ ಅಳವಡಿಸಿದ ಸಿಸಿ ಕ್ಯಾಮೆರಾ, ಬ್ಯಾಂಕ್ ಎದುರಿನ ಟ್ಯೂಬ್‌ಲೈಟ್ ಹಾಗೂ ಎಟಿಎಂ ಯಂತ್ರವನ್ನು ಸಂಪೂರ್ಣ ಹಾನಿಗೊಳಿಸಿದ್ದಾರೆ. ತಿಂಗಳ ಹಿಂದಷ್ಟೆ ಈ ಬ್ಯಾಂಕ್ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಸಕಲ ವ್ಯವಸ್ಥೆ ಒದಗಿಸಲಾಗಿತ್ತು. ಎಟಿಎಂನಿಂದ ಹಣ ದೋಚಿದ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿಲ್ಲ. 

ಘಟನೆ ಬೆಳಕಿಗೆ ಬಂದದ್ದು ಹೀಗೆ 

ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಸಾಸ್ತಾನದ ನಿವಾಸಿ ಅರುಣ್ ಲೂಯಿಸ್ ಅವರು ಈ ಎಟಿಎಂಗೆ ಹಣ ಡ್ರಾ ಮಾಡಲು ಬಂದಾಗ ಎಟಿಎಂನ ರೋಲಿಂಗ್ ಶಟರ್ ಅರ್ಧಕ್ಕೆ ತೆರೆದಿದ್ದುದನ್ನು ಕಂಡು, ಪಕ್ಕದ ಅಂಗಡಿ ಮಾಲೀಕರಲ್ಲಿ ವಿಷಯ ತಿಳಿಸಿದರು. ತದನಂತರ ತಾವೇ ರೋಲಿಂಗ್ ಶಟರ್ ಎತ್ತಿ ನೋಡಿದಾಗ ದರೋಡೆ ಯತ್ನ ಬಯಲಾಯಿತು. 

ರಾತ್ರಿ ಸುಮಾರು 10 ಗಂಟೆವರೆಗೆ ಎಟಿಎಂ ಕೇಂದ್ರದಲ್ಲಿ ವ್ಯವಹಾರ ನಡೆದ ಬಗ್ಗೆ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ರಾತ್ರಿ 2.02 ನಿಮಿಷಕ್ಕೆ ಎಟಿಎಂನ ಸಿಸಿ ಕ್ಯಾಮೆರವನ್ನು ಹಾನಿಗೊಳಿಸಿದ್ದು, 02.10ಕ್ಕೆ ಎಟಿಎಂ ಯಂತ್ರಕ್ಕೆ ಹಾನಿ ಮಾಡಿರಬಹುದು ಎಂದು ಎಟಿಎಂ ಯಂತ್ರದ ಕಾರ್ಯಾಚರಣೆಯ ವಿವರಗಳಿಂದ ಗೊತ್ತಾಗಿದೆ. 

ಕಾವಲುಗಾರ ಇಲ್ಲ: ಇತ್ತೀಚಿಗೆ ಬೆಂಗಳೂರಿನಲ್ಲಿ ಎಟಿಎಂನಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಪಟ್ಟಂತೆ ರಾಜ್ಯದ ಎಲ್ಲ ಎಟಿಎಂ ಕೇಂದ್ರಗಳಿಗೆ ಕಡ್ಡಾಯ ಭದ್ರತಾ ಸಿಬ್ಬಂದಿ ನೇಮಿಸುವಂತೆ ಸರಕಾರ ಆದೇಶ ನೀಡಿತ್ತು. ಆದರೆ ಈ ಎಟಿಎಂ ಕೇಂದ್ರದಲ್ಲಿ ಯಾವುದೇ ಭದ್ರತಾ ಸಿಬ್ಬಂದಿಯನ್ನು ಇನ್ನೂ ನೇಮಕ ಮಾಡಿಕೊಂಡಿಲ್ಲ ಎನ್ನಲಾಗಿದೆ. 

ಬ್ಯಾಂಕ್ ಎದುರಿಗೆ ಸರಿಯಾದ ಬೆಳಕಿನ ವ್ಯವಸ್ಥೆ ಕೂಡ ಇಲ್ಲದೇ ಇರುವುದು ದರೋಡೆಕೋರರಿಗೆ ದರೋಡೆ ನಡೆಸಲು ಸಹಕಾರಿಯಾಗಿರಬಹುದು. ಎಟಿಎಂ ಕೇಂದ್ರದಲ್ಲಿ ಮಾತ್ರ ಸಿಸಿ ಟಿವಿಯಿದ್ದು, ಬ್ಯಾಂಕ್‌ನ ಎದುರಿನಲ್ಲಿ ಸಿಸಿ ಕ್ಯಾಮೆರಾ ಇದ್ದಿದ್ದರೆ ಆರೋಪಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿತ್ತು. 

ಸಿಸಿ ಕ್ಯಾಮೆರಾದಲ್ಲಿ ಅಸ್ಪಷ್ಟ ಚಿತ್ರ: ಘಟನೆ ಬೆಳಗ್ಗೆ ಗೊತ್ತಾದರೂ ಎಟಿಎಂನ ಸಿಸಿ ಕ್ಯಾಮೆರ ತಜ್ಞರು ಸಂಜೆ 5 ಗಂಟೆ ಸುಮಾರಿಗೆ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಕ್ಯಾಮೆರಾದಲ್ಲಿರುವ ಚಿತ್ರಗಳನ್ನು ಪರಿಶೀಲಿಸಿದಾಗ ಅಸ್ಪಷ್ಟ ಚಿತ್ರಗಳು ಗೋಚರವಾಗುತ್ತಿದೆ ಎನ್ನಲಾಗಿದೆ. ಎಟಿಎಂನಿಂದ ಹಣ ಕಳವಾಗಿದೆಯೇ ಎಂದು ಪರಿಶೀಲಿಸಲು ಮುಂಬಯಿಯಿಂದ ತಂಡ ಬರಬೇಕಾಗಿದ್ದು, ಆ ತಂಡ ಬುಧವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಬರುವ ನಿರೀಕ್ಷೆ ಇದೆ. 

ಉನ್ನತ ತನಿಖೆಗಾಗಿ ಸ್ಥಳಕ್ಕೆ ವಿಧ್ವಂಸಕ ಕೃತ್ಯಗಳ ಪತ್ತೆ ದಳ, ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿದ್ದು, ಸ್ಥಳ ತಪಾಸಣೆ ನಡೆಸಿದ ಶ್ವಾನದಳ ಎಟಿಎಂ ಸಮೀಪದ ಪಕ್ಕದ ರಸ್ತೆಯಲ್ಲಿ ರಾಡೊಂದನ್ನು ಪತ್ತೆ ಹಚ್ಚಿದ್ದು, ಇದು ಕೃತ್ಯಕ್ಕೆ ಬಳಸಿರಬಹುದಾದದ್ದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. 

ಘಟನಾ ಸ್ಥಳಕ್ಕೆ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅರುಣ್ ಬಿ. ನಾಯಕ್, ಕೋಟ ಠಾಣಾಕಾರಿ ಕೆ.ಆರ್. ನಾಯಕ್ ಸಿಬ್ಬಂದಿಗಳೊಂದಿಗೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com