ಪುತ್ತೂರು: ಸ್ವಂತ ಮಕ್ಕಳಿಬ್ಬರನ್ನು ಕೆರೆಗೆ ದೂಡಿ ಕೊಲೆ ಮಾಡಿದ ಪುತ್ತೂರು ಪಾಣಾಜೆ ಮೂಲದ ಬ್ಯಾಂಕ್ ಮ್ಯಾನೇಜರ್ ರಮೇಶ ನಾಯ್ಕನಿಗೆ ಮಂಗಳವಾರ ಪುತ್ತೂರಿನ ಐದನೇ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಮಂಗಳವಾರ ಇಳಿಸಂಜೆ ನ್ಯಾಯಾಧೀಶ ಟಿ.ಜೆ. ಶಿವಶಂಕರೇಗೌಡ ಅಪರಾಧಿಗೆ ಮರಣ ದಂಡನೆಯನ್ನು ವಿಧಿಸಿ ತೀರ್ಪು ನೀಡಿದರು. ಪುತ್ತೂರು ನ್ಯಾಯಾಲಯದ ಇತಿಹಾಸದಲ್ಲೇ ಇದು ಮೊದಲ ಮರಣ ದಂಡನೆ ಶಿಕ್ಷೆ.
ಸೋಲಾಪುರದ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್ ಆಗಿದ್ದ ರಮೇಶ್ ನಾಯ್ಕ 2010ರ ಜೂನ್ 16ರಂದು ತನ್ನಿಬ್ಬರು ಮಕ್ಕಳಾದ ಭುವನ್ರಾಜ್(10) ಮತ್ತು ಕತ್ತಿಕಾ(4)ರನ್ನು ಪಾಣಾಜೆಯ ಕೆರೆಗೆ ದೂಡಿ ಹಾಕಿ ಕೊಲೆ ಮಾಡಿದ್ದ. ತನ್ನ ಪತ್ನಿಯ ಸೋದರಿ ಸವಿತಾಳ ಮೇಲೆ ಕಣ್ಣಿಟ್ಟಿದ್ದ ರಮೇಶ್ ನಾಯ್ಕ ಆಕೆ ಪ್ರೇಮ ವಿವಾಹ ಮಾಡಿಕೊಳ್ಳಲು ಮುಂದಾದಾಗ ಸಿಟ್ಟುಗೊಂಡು ತುಮಕೂರಿನಲ್ಲಿ ದ್ದ ಆಕೆ ಮತ್ತು ಅತ್ತೆ ಸರಸ್ವತಿ ಅವರನ್ನೂ ಕೊಲೆ ಮಾಡಿದ್ದ.
ಹೀಗೆ ನಾಲ್ಕು ಕೊಲೆಗಳನ್ನು ಮಾಡಿದ್ದ ಈತನಿಗೆ ನಾದಿನಿ ಮತ್ತು ಅತ್ತೆ ಕೊಲೆ ಪ್ರಕರಣದಲ್ಲಿ ತುಮಕೂರಿನ ಫಾಸ್ಟ್ ಟ್ರಾಕ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದರ ಮಕ್ಕಳ ಕೊಲೆ ಪ್ರಕರಣದ ವಿಚಾರಣೆ ಪುತ್ತೂರಿನ ಐದನೇ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದು ಇದೀಗ ತೀರ್ಪು ಹೊರಬಿದ್ದಿದೆ.
ಕೋರ್ಟ್ ಈ ಪ್ರಕರಣದಲ್ಲಿ ಒಟ್ಟು 19 ಸಾಕ್ಷಿಗಳನ್ನು ವಿಚಾರಿಸಲಾಗಿದೆ. ಒಟ್ಟು 18 ದಾಖಲೆಗಳನ್ನು ಗುರುತಿಸಲಾಗಿದೆ.
ತನ್ನ ಪುಟ್ಟ ಮಕ್ಕಳನ್ನು ಕೊಂದಿರುವ ಈ ನಿರ್ದಯಿ ಹಂತಕನಿಗೆ ಮರಣದಂಡನೆಯನ್ನೇ ನೀಡಬೇಕು. ಈ ಪ್ರಕರಣ ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ನ್ಯಾಯಾಲಯ ಪರಿಗಣಿಸಬೇಕು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಪ್ರಸಾದ ಆಳ್ವ ವಾದ ಮಂಡಿಸಿದ್ದರು. ಈತ ನಾದಿನಿಯ ಪ್ರೇಮ ಪ್ರಕರಣದಲ್ಲಿ ಏನೇನೂ ಸಂಬಂಧವೇ ಇಲ್ಲದ ತನ್ನ ಮಕ್ಕಳನ್ನು ಕೊಲೆ ಮಾಡಿದ ಉದ್ದೇಶ ಮರ್ಯಾದಾ ಹತ್ಯೆಗಿಂತಲೂ ಭೀಕರವಾಗಿದೆ ಎಂದು ಪ್ರಾಸಿಕ್ಯೂಶನ್ ವಕೀಲ ಶಿವಪ್ರಸಾದ ಆಳ್ವ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು.
ಕಣ್ಣುಮುಚ್ಚಿ ಕುಳಿತಿದ್ದ: ಮಂಗಳವಾರ ಬೆಳಗ್ಗೆ ನ್ಯಾಯಾಲಯಕ್ಕೆ ಕರೆತರಲಾಗಿದ್ದ ರಮೇಶ ನಾಯ್ಕ ಆಗಾಗ್ಗೆ ಕಣ್ಣುಮುಚ್ಚಿ ಕೂರುತ್ತಿದ್ದ. ತನಗೆ ಮರಣದಂಡನೆ ವಿಧಿಸಬೇಡಿ ಎಂದು ಆತ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಿದ್ದ.
ತೀರ್ಪು ಪ್ರಕಟವಾಗುವ ವೇಳೆಗೆ ಕಟಕಟೆಯಲ್ಲಿ ನಿಂತಿದ್ದ ರಮೇಶ ನಾಯ್ಕ ಭಾವಶೂನ್ಯನಾಗಿದ್ದ. ಆತ ಏನೂ ಪ್ರತಿಕ್ರಿಯೆ ತೋರಿದ್ದು ಕಂಡುಬರಲಿಲ್ಲ. ತೀರ್ಪು ಘೋಷಣೆಯಾದ ಬಳಿಕ ಆತ ಪೊಲೀಸರ ಜತೆ ಸಾಗಿದ.ಆ ವೇಳೆ ಆತನ ಬಳಿ ಯಾವುದೇ ಪ್ರತಿಕ್ರಿಯೆ ಇರಲಿಲ್ಲ.
ತೀರ್ಪು ಪ್ರಕಟವಾಗುವ ಸಂದರ್ಭದಲ್ಲಿ ಆತನ ಪತ್ನಿ ಸುಂದರಿ ಕೋರ್ಟ್ನಲ್ಲಿ ಹಾಜರಿದ್ದರು. ಆಕೆ ಈ ತೀರ್ಪಿನ ಬಗ್ಗೆ ಏನೂ ಹೇಳಲು ನಿರಾಕರಿಸಿದರು.
ನಾದಿನಿ ಮೋಹಕ್ಕೆ 4 ಜೀವ ಬಲಿ ಪಡೆದ..
ರಮೇಶ ನಾಯ್ಕ ಮೂಲತಃ ಪಾಣಾಜೆಯ ಅರ್ಧಮೂಲೆಯವನು. ಆತನಿಗೆ ಪುತ್ತೂರಿನಿಂದ ಮದುವೆಯಾಗಿತ್ತು. ಗಂಡ ಹೆಂಡತಿ ಇಬ್ಬರೂ ಬೇರೆ ಬೇರೆ ಬ್ಯಾಂಕ್ನಲ್ಲಿ ಉದ್ಯೋಗಿಗಳು. ರಮೇಶ ನಾಯ್ಕ ಸೋಲಾಪುರದಲ್ಲಿ ರಾಷ್ಟ್ರೀಕತ ಬ್ಯಾಂಕ್ ಒಂದರಲ್ಲಿ ಮೆನೇಜರ್ ಆಗಿದ್ದ. ಆತನ ಮಡದಿ ಸುಂದರಿ ಮಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿ. ಆತನ ನಾದಿನಿ ಸವಿತಾ ಬೆಂಗಳೂರಿನಲ್ಲಿ ಭವಿಷ್ಯನಿಧಿ ಕಚೇರಿಯಲ್ಲಿ ಉದ್ಯೋಗದಲ್ಲಿದ್ದರು. ತುಮಕೂರಿನಲ್ಲಿ ರಮೇಶ ನಾಯ್ಕ ಸ್ವಂತ ಮನೆ ಹೊಂದಿದ್ದ. ಆ ಮನೆಯಲ್ಲಿ ತನ್ನ ತಾಯಿ ಜತೆ ಸವಿತಾ ವಾಸ ಮಾಡುತ್ತಿದ್ದಳು.
ಸವಿತಾ ಜತೆ ರಮೇಶ ನಾಯ್ಕನಿಗೆ ಅದೆಂಥದ್ದೋ ಅನುರಾಗ. ಸವಿತಾ ತನ್ನ ಸಹೋದ್ಯೋಗಿ ಮೋಹನ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಲು ಸಿದ್ಧಳಾದಾಗ ರಮೇಶ್ ನಾಯ್ಕ ಅದನ್ನು ಆಕ್ಷೇಪಿಸುತ್ತಾನೆ. ಆದರೆ ಅದಕ್ಕೆ ಯಾರೂ ಸೊಪ್ಪು ಹಾಕುವುದಿಲ್ಲ. ಕೊನೆಗೊಮ್ಮೆ ಈ ವಿಚಾರದಲ್ಲಿ ಕ್ರುದ್ಧನಾದ ಆತ ತುಮಕೂರಿಗೆ ತೆರಳುತ್ತಾನೆ. ಅಲ್ಲಿ ಸವಿತಾಳನ್ನು ಕೊಲೆ ಮಾಡಿ ನೀರಿನ ಸಂಪಿನಲ್ಲಿ ಹಾಕುತ್ತಾನೆ. ಆಗ ತಡೆಯಲು ಬಂದ ತನ್ನ ಅತ್ತೆ ಸರಸ್ವತಿಯನ್ನೂ ಮುಗಿಸುತ್ತಾನೆ. ಬಳಿಕ ಮಂಗಳೂರಿಗೆ ಬರುತ್ತಾನೆ. ಮಧ್ಯಾಹ್ನ ಶಾಲೆ ಬಿಟ್ಟು ಬಂದ ಭುವನ್ರಾಜ್(10) ಮತ್ತು ಮನೆಯಲ್ಲಿದ್ದ ಕತ್ತಿಕಾ(4)ರನ್ನು ಐಸ್ಕ್ರೀಂ ಕೊಡಿಸುವುದಾಗಿ ಹೇಳಿ ಬಾಡಿಗೆ ಕಾರಲ್ಲಿ ಪಾಣಾಜೆಗೆ ಕರೆ ತರುತ್ತಾನೆ.ಅಲ್ಲಿಗೆ ಬರುವಾಗ ಇಳಿ ಸಂಜೆ ಆಗಿತ್ತು. ಅರ್ಧಮೂಲೆಯಲ್ಲಿ ತಾನು ಮಾರಾಟ ಮಾಡಿದ್ದ ಜಮೀನಿನ ಪಕ್ಕದ ತೋಟಕ್ಕೆ ಮಕ್ಕಳನ್ನು ಕರೆದೊಯ್ದು ತುಂಬಿದ ನೀರಿಗೆ ಇಬ್ಬರನ್ನೂ ದೂಡಿ ಹಾಕಿ ಕೊಂದು ಸೀದಾ ಬಸ್ ಹತ್ತಿ ಪುತ್ತೂರಿನ ವಸತಿಗಹವೊಂದರಲ್ಲಿ ಬಿಡಾರ ಹೂಡುತ್ತಾನೆ.
ಈ ನಡುವೆ ತುಮಕೂರಿನಲ್ಲಿ ತನ್ನ ತಂಗಿ ಅಥವಾ ತಾಯಿ ಸಂಪರ್ಕಕ್ಕೆ ಸಿಗದೇ ಇರುವುದರಿಂದ ಗಾಬರಿಗೊಂಡಿದ್ದ ಸುಂದರಿಗೆ ತುಮಕೂರಿನ ಪರಿಚಿತಸ್ಥರು ಆಕೆಯ ಗಂಡ ರಮೇಶ ನಾಯ್ಕ ತುಮಕೂರಿಗೆ ಬಂದ ಸುದ್ದಿ ತಿಳಿಸುತ್ತಾರೆ. ಇದರಿಂದ ಗಲಿಬಿಲಿಗೊಂಡ ಆಕೆ ಮನೆಗೆ ಬರುತ್ತಾರೆ. ಅಷ್ಟರಲ್ಲಿ ಗಂಡ ಮಕ್ಕಳನ್ನು ಕರೆದುಕೊಂಡು ಹೋದ ಸುದ್ದಿ ತಿಳಿಯುತ್ತದೆ. ಸುಂದರಿ ಆತನ ಮೊಬೆಲ್ಗೆ ಸಂಪರ್ಕ ಮಾಡಿದರೆ ಅದು ಸ್ವಿಚ್ಡ್ ಆಫ್. ಆಮೇಲೆ ಬಾಡಿಗೆ ಕಾರಿನ ಚಾಲಕನನ್ನು ಸಂಪರ್ಕಿಸಿದಾಗ ರಮೇಶ ನಾಯ್ಕ ಅರ್ಧಮೂಲೆಗೆ ಬಂದ ಸಂಗತಿ ಗೊತ್ತಾಗುತ್ತದೆ.ಅಷ್ಟರಲ್ಲಾಗಲೇ ಮಕ್ಕಳ ಕೊಲೆ ಆಗಿ ಹೋಗಿರುತ್ತದೆ. ರಮೇಶ ನಾಯ್ಕ ಅದಾದ ಮೇಲೆ ಹೆಂಡತಿಗೆ ಒಂದೇ ಸಮನೇ ಮೆಸೇಜು ಕಳುಹಿಸುತ್ತಾನೆ.'' ನನಗೆ,ಭುವಿಗೆ,ಕತಿಗೆ,ಸವಿಗೆ,ಅತ್ತೆಗೆ ಯಾರೂ ಹುಡುಕಬೇಡಿ, ನಾವೆಲ್ಲಾ ಒಂದು ಕಡೆ ಸ್ವರ್ಗ ಸೇರಿದ್ದೇವೆ. ನಿನದ್ನನ್ನೂ ಕರೆದುಕೊಂಡು ಹೋಗಬೇಕು ಎಂದಿದ್ದೆ. ಆದರೆ ಆಗಲಿಲ್ಲ. ನೀನು ನೀರು ಇರುವ ಬಾವಿಯನ್ನು ನೋಡಿ ಹಾರು '' ಎಂದು ಮಡದಿಗೆ ಸೂಚಿಸುತ್ತಾನೆ.
'ನಮ್ಮ ಯಾರ ಬಾಡಿನೂ ಸಿಗಬಾರದು. ಸುಡೋಕೆ ನಮ್ದೇ ಜಾಗ ಇಲ್ಲ. ಬೊಜ್ಜ ಮಾಡಲಿಕ್ಕೆ ಯಾರೂ ಇಲ್ಲ. ಎಂತ ನತದಷ್ಟರು ನಾವು. ಅತ್ತೆ ಯಾಕಾದರೂ ಜತೆ ಇರುವ ಹಾಗಾಯಿತೋ?ಇದೂನೂ ದೇವರ ಇಚ್ಛೆ. ಸವಿತಾ ಮೇಲಿನ ಸಿಟ್ಟಿಗೆ ಅವಳು ಇಂತ ಕೆಲಸ ಮಾಡಿ ಬದುಕಬಾರದು ಅಂತ ಕೊಲ್ಲಲಿಕ್ಕೆ ಹೊರಟೆ. ಅತ್ತೆ ಬಂದರು. ಅವರನ್ನೂ ಕೊಂದೆ. ತುಂಬಾ ಬೇಜಾರಾಯಿತು. ಇರಲಿ ಬಿಡು, ಮೊನ್ನೆ ಮಂಗಳೂರಲ್ಲಿ ವಿಮಾನ ಬಿದ್ದು ಎಷ್ಟೋ ಫ್ಯಾಮಿಲಿ ಹೋಗಿದೆ. ತಿಳೀಯೋಣ ನಾವೂ ಅದರಲ್ಲಿ ಇದ್ವಿ ಅಂತ'' ಹೇಳುತ್ತಾನೆ.
ಈ ವೇಳೆಗಾಗಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸ್ ಇನ್ಸ್ಪೆಕ್ಟರ್ ಬಿ.ಕೆ.ಮಂಜಯ್ಯ ಮತ್ತು ತಂಡ ಆರೋಪಿಯನ್ನು ವಸತಿಗಹದಲ್ಲಿ ಬಂಧಿಸಿದರು.
ತುಮಕೂರು ಕೋರ್ಟ್ನಲ್ಲಿ ಜೀವಾವಧಿ: ರಮೇಶ ನಾಯ್ಕನಿಗೆ ಕಳೆದ ವರ್ಷ ಜೂನ್ನಲ್ಲಿ ತುಮಕೂರು ಫಾಸ್ಟ್ಟ್ರಾಕ್ ನ್ಯಾಯಾಲಯ ಅತ್ತೆ ಮತ್ತು ನಾದಿನಿಯನ್ನು ಕೊಲೆ ಮಾಡಿದ್ದಕ್ಕಾಗಿ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಕ್ಕಳನ್ನು ಸಿಕ್ಕಾಪಟ್ಟೆ ಮುದ್ದಿಸಿದ್ದ!
ಕಾರಿನಲ್ಲಿ ಮಕ್ಕಳನ್ನು ಕರೆತರುತ್ತಿದ್ದ ರಮೇಶ ನಾಯ್ಕ ಹಿಂದಿನ ಸೀಟಿನಲ್ಲಿ ಮಕ್ಕಳ ಜತೆ ಕುಳಿತಿದ್ದ. ಹಾದಿ ಮಧ್ಯೆ ಆತ ಮಕ್ಕಳನ್ನು ಸಿಕ್ಕಾಪಟ್ಟೆ ಮುದ್ದಿಸುತ್ತಿದ್ದ ಎಂದು ಕಾರಿನ ಚಾಲಕ ಹೇಳಿದ್ದರು. ಮಕ್ಕಳನ್ನು ಜವರಾಯನ ಕೆಗೆ ಒಪ್ಪಿಸುವ ಮುನ್ನ ಈ ನಿರ್ದಯಿ ಹಂತಕ ಆ ಮುದ್ದಾಟದಲ್ಲೂ ಮನಸ್ಸು ಬದಲಾಯಿಸಿಯೇ ಇರಲಿಲ್ಲ.
ರಮೇಶ ನಾಯ್ಕನಿಗೆ ತುಮಕೂರು ನ್ಯಾಯಾಲಯ ಅತ್ತೆ ಮತ್ತು ನಾದಿನಿಯರನ್ನು ಕೊಂದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನೀಡಿದೆ. ಆದರೆ ಶಿಕ್ಷೆ ಪ್ರಕಟಗೊಂಡು ಒಂದೂವರೆ ವರ್ಷಗಳಾದರೂ ಆತ ಹೈಕೋರ್ಟ್ಗೆ ಮೇಲ್ಮನವಿ ಮಾಡಿಲ್ಲ.
ದ.ಕ. ಜಿಲ್ಲೆಯಲ್ಲಿ ಮೂರನೇ ಗಲ್ಲು
ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಈ ಮರಣ ದಂಡನೆ ಮೂರನೆಯದ್ದು. ರಿಪ್ಪರ್ ಚಂದ್ರನಿಗೆ ನೀಡಲಾದ ಮರಣದಂಡನೆ ಮೊದಲನೆಯದ್ದು.ಅದು ಅದೆಂದೋ ಕಾರ್ಯಗತವಾಗಿದೆ. ವಾಮಂಜೂರಿನಲ್ಲಿ ಸಂಬಂಧಿಕರು ನಾಲ್ವರನ್ನು ಹತ್ಯೆ ಮಾಡಿದ ಉಪ್ಪಿನಂಗಡಿ ಪೆರಿಯಡ್ಕದ ಪ್ರವೀಣ ಸಫಲ್ಯನಿಗೆ ಮರಣ ದಂಡನೆಯನ್ನು ಜಿಲ್ಲಾ ನ್ಯಾಯಾಲಯ ವಿಧಿಸಿತ್ತು. ಸುಪ್ರೀಂಕೋರ್ಟ್ನಲ್ಲಿ ಅದು ಕಾಯಂ ಆಗಿತ್ತು. ನಂತರ ಆತನ ದಯಾಭಿಕ್ಷೆ ಕೇಳಿಕೆಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. ಆದರೆ ಆತ ಗಲ್ಲುಕಂಬವನ್ನೇರುವುದು ಸುಪ್ರೀಂಕೋರ್ಟ್ನ ತಡೆಯಾಜ್ಞೆಯಿಂದ ಮುಂದೂಡಲ್ಪಟ್ಟಿದೆ.
ಪುತ್ತೂರು ನ್ಯಾಯಾಲಯದ 101 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರೂರಿಯೊಬ್ಬನಿಗೆ ಗಲ್ಲುಕಂಬವನ್ನೇರುವ ಶಿಕ್ಷೆ ನೀಡಲಾಗಿದೆ.
*ಸ್ವಂತ ಮುಗ್ಧ ಹಸುಳೆಗಳನ್ನು ಕೊಂದ ಈತ ಘೋರ ಅಪರಾಧ ಮಾಡಿದ್ದಾನೆ.ಅದಕ್ಕಾಗಿ ನ್ಯಾಯಾಲಯ ತಕ್ಕ ಶಿಕ್ಷೆ ನೀಡಿದೆ.ರಮೇಶ ನಾಯ್ಕನಿಗೆ ಇದಕ್ಕಿಂತ ಕಡಿಮೆ ಶಿಕ್ಷೆ ನೀಡಲು ಸಾಧ್ಯವೇ ಇರಲಿಲ್ಲ. -ಶಿವಪ್ರಸಾದ ಆಳ್ಷ,ಪಬ್ಲಿಕ್ ಪ್ರಾಸಿಕ್ಯೂಟರ್
* 'ಈ ತೀರ್ಪು ಅಪರಾಧಿಗಳಿಗೆ ಎಚ್ಚರಿಕೆಯ ಕರೆಗಂಟೆ.ನ್ಯಾಯಾಂಗ ವ್ಯವಸ್ಥೆಯ ಮಹತ್ವದ ತೀರ್ಪು ಇದಾಗಿದೆ.'' - ಮಹೇಶ್ ಕಜೆ, ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು.