ಬೈಂದೂರು: ಶಿರೂರು ಗ್ರಾಮದ ಮೇಲ್ಪೇಟೆಯಲ್ಲಿ ಬ್ಯಾಂಕ್ವೊಂದರ ಬಳಿಯ ಕಟ್ಟಡಕ್ಕೆ ದಾಳಿ ನಡೆಸಿದ ಬೈಂದೂರು ಪೊಲೀಸರು ಕಟ್ಟಡದಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಪೆಟ್ರೋಲಿಯಂ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಮೋಹನ್ ಪೂಜಾರಿಯನ್ನು ಬಂಧಿಸಿ ಕೋಣೆಯಲ್ಲಿ ಅಕ್ರಮವಾಗಿ ಇರಿಸಲಾಗಿದ್ದ ಸೀಮೆ ಎಣ್ಣೆ ತುಂಬಿದ ಕ್ಯಾನುಗಳನ್ನು ಆಹಾರ ಉಪ ತಹಶೀಲ್ದಾರರು ಹಾಗೂ ಪಂಚಾಯತ್ದಾರರ ಸಮಕ್ಷಮದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಕೋಣೆಯಲ್ಲಿರಿಸಲಾಗಿದ್ದ ನೀಲಿ ಬಣ್ಣದ ಸೀಮೆ ಎಣ್ಣೆ ತುಂಬಿದ 35 ಲೀಟರ್ 21 ಬಿಳಿ ಬಣ್ಣದ ಕ್ಯಾನುಗಳು, ಕಬ್ಬಿಣದ ಬ್ಯಾರೆಲ್ಗಳು, ಪೈಬರ್ ಬ್ಯಾರೆಲ್ಗಳು ಅಳತೆ ಮಾಪನಗಳು ತಳಭಾಗದಲ್ಲಿ ರಂಧ್ರವಿರುವ ಕಬ್ಬಿಣದ ಬಕೆಟ್ ಸೇರಿದಂತೆ ಒಟ್ಟು ರೂ.40 ಸಾವಿರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.