ಕುಂದಾಪುರ: ಖಾಸಗಿ ವೋಲ್ವೋ ಬಸ್ಸಿನಲ್ಲಿ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬಸ್ಸಿನ ಚಾಲಕ ಹಾಗೂ ನಿರ್ವಾಹಕನನ್ನು ಕುಂದಾಪುರ-ಭಟ್ಕಳ ರಾ.ಹೆ.ಯಲ್ಲಿ ಶಿರೂರು ಚೆಕ್ಪೋಸ್ಟ್ ಎದುರುಗಡೆ ಅಬಕಾರಿ ಅಧಿಕಾರಿಗಳು ಬಂಧಿಸಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ಬೆಳಗ್ಗಿನ ಜಾವ ಶಿರೂರು ಪೊಲೀಸ್ ಚೆಕ್ಪೋಸ್ಟ್ನಲ್ಲಿ ತಪಾಸಣಾ ಕಾರ್ಯ ನಡೆಸುತ್ತಿರುವಾಗ ಬಸ್ಸಿನ ಢಿಕ್ಕಿ ಹಾಗೂ ಸ್ಟೆಪ್ನಿ ಟಯರುಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 21.80 ಲೀಟರ್ ಗೋವಾ ರಾಜ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಬಸ್ಸಿನ ಚಾಲಕ ಹಾಗೂ ನಿರ್ವಾಹಕರಾದ ಗೋವಾದ ನಿವಾಸಿ ಪ್ರಕಾಶ್ ನಾಯಕ್ ಹಾಗೂ ತುಮಕೂರಿನ ಶ್ರೀನಿವಾಸ ಮೂರ್ತಿಯನ್ನು ಬಂಧಿಸಲಾಗಿದೆ. ಜೊತೆಗೆ ಖಾಸಗಿ ಬಸ್ಸನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಅಬಕಾರಿ ಉಪ ಅಧೀಕ್ಷಕ ವಿನೋದ್ ಕುಮಾರ್ ಅವರ ನೇತ್ರತ್ವ ದಲ್ಲಿ ಕುಂದಾಪುರ ಉಪವಿಭಾಗದ ಅಬಕಾರಿ ಸಬ್ ಇನ್ಸ್ಪೆಕ್ಟರ್ ಎಚ್.ಶಂಕರ್ ಹಾಗೂ ಕುಂದಾಪುರ ವಲಯದ ವಿ.ಮಂಜುನಾಥ ಅವರು ಸಿಬ್ಬಂದಿಗಳಾದ ರವಿರಾಜ್ ಅಣ್ಣೆಗೇರಿ, ಕೆ.ಶಂಕರ್, ಚಂದ್ರಶೇಖರ ಹಾಗೂ ವಾಹನ ಚಾಲಕ ಸುಧಾಕರ ಪಾಲ್ಗೊಂಡಿದ್ದರು.