ಅಕ್ಕನ ಗಂಡನ ಕೊಲೆ, ಆರೋಪಿ ಬಂಧನ

ಕಮಲಶಿಲೆ : ಸದಾ ಕುಡಿದು ಬಂದು ತಗಾದೆ ತೆಗೆಯುತ್ತಿದ್ದ ಅಕ್ಕನ ಗಂಡನನ್ನು ಕೊಲೆ ಮಾಡಿದ ಘಟನೆ ಸೋಮವಾರ ರಾತ್ರಿ ಕಮಲಶಿಲೆ ಗ್ರಾಮದ ಯಳಬೇರು ಎಂಬಲ್ಲಿ ನಡೆದಿದೆ. 

ಶಾನ್ಕಟ್ಟು ನಿವಾಸಿ ಚಂದ್ರ ಆಚಾರ್ಯ(35) ಕೊಲೆಯಾದ ವ್ಯಕ್ತಿ. ಕಮಲಶಿಲೆ ಗ್ರಾಮದ ಯಳಬೇರು ನಿವಾಸಿ ವಿಶ್ವನಾಥ್ ಆಚಾರ್ಯ (18) ಬಂಧಿತ. ಆರೋಪಿ ವಿಶ್ವನಾಥ ಆಚಾರ್ಯ ಕೊಲೆಯಾದ ವ್ಯಕ್ತಿಯ ಭಾವನೆಂಟ( ಚಂದ್ರ ಆಚಾರ್ಯರ ಪತ್ನಿಯ ತಮ್ಮ). 

ಘಟನೆ ವಿವರ: ಚಂದ್ರ ಆಚಾರ್ಯ ಕಮಲಶಿಲೆ ಗ್ರಾಮದ ಯಳಬೇರು ನಿವಾಸಿ ಜ್ಯೋತಿ ಆಚಾರ್ಯ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಮರದ ಕೆಲಸ ಮಾಡಿಕೊಂಡಿದ್ದ ಚಂದ್ರ ಆಚಾರ್ಯ ಮದ್ಯವ್ಯಸನಿಯಾಗಿದ್ದರು ಎನ್ನಲಾಗಿದೆ. ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುವುದು ಮಾಮೂಲಿಯಾಗಿತ್ತು. ಸೋಮವಾರ ರಾತ್ರಿಯೂ ಇದೇ ಪರಿಸ್ಥಿತಿ. ಮಧ್ಯರಾತ್ರಿ ವೇಳೆ ಕುಡಿದ ಮತ್ತಿನಲ್ಲಿ ತಗಾದೆ ತೆಗೆದಿದ್ದು, ಚಂದ್ರ ಆಚಾರ್ಯ ಮತ್ತು ಮನೆಯವರ ನಡುವೆ ಜಗಳ ಉಂಟಾಗಿದೆ. ಜಗಳ ತಾರಕಕ್ಕೇರಿ ಮನೆಯಲ್ಲಿ ರಂಪಾಟವೇ ನಡೆದಿದೆ. 

ಏತನ್ಮಧ್ಯೆ ತಾಳ್ಮೆ ಕಳೆದುಕೊಂಡ ಭಾವನೆಂಟ ವಿಶ್ವನಾಥ್ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಕತ್ತಿಯ ಏಟಿಗೆ ತೀವ್ರ ಘಾಸಿಗೊಂಡಿದ್ದ ಚಂದ್ರ ಆಚಾರ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬೋರಲಿಂಗಯ್ಯ, ಡಿವೈಎಸ್ಪಿ ಸಿ.ಬಿ. ಪಾಟೀಲ್ ಮಾರ್ಗದರ್ಶನದಲ್ಲಿ ಶಂಕರನಾರಾಯಣ ಪಿಎಸ್‌ಐ ದೇಜಪ್ಪ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ. 

ಆರೋಪಿ ವಿಶ್ವನಾಥ್ ಶಂಕರನಾರಾಯಣದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com