ಬೈಂದೂರು: ಕಾಲೇಜಿಗೆ ಹೋಗುವ ನೀನು ಓದೋದು ಬಿಟ್ಟು ಯಾವಾಗಲೂ ಟಿ.ವಿ. ನೋಡ್ತಾ ಇರ್ತಿಯಾ? ಓದ್ಕೋ ಹೋಗು ಅಂತಾ ಹೆತ್ತಮ್ಮ ಹೇಳಿದ್ದೇ ತಪ್ಪಾಯ್ತೋ ಏನೋ..? ಕಾಲೇಜು ವಿದ್ಯಾರ್ಥಿನಿಯೋರ್ವಳು ಇದಕ್ಕೆ ಅಸಮಾಧಾನಪಟ್ಟುಕೊಂಡು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬೈಂದೂರು ಸಮೀಪದ ನಾವುಂದದಲ್ಲಿ ಬುಧವಾರ ಸಂಜೆ ನಡೆದಿದೆ.
ಪ್ರಭಾಕರ ಶೆಟ್ಟಿ ಹಾಗೂ ಹೇಮಾ ಶೆಟ್ಟಿ ದಂಪತಿಗಳ ಪುತ್ರಿ ದೀಪಾ ಶೆಟ್ಟಿ (21) ನೇಣಿಗೆ ಶರಣಾದ ವಿದ್ಯಾರ್ಥಿನಿ. ಈಕೆ ನಾವುಂದದ ರಿಚರ್ಡ್ ಅಲ್ಮೇಡಾ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಮ್ ವ್ಯಾಸಂಗ ಮಾಡುತ್ತಿದ್ದಳು.
ಘಟನೆ ವಿವರ: ಕಾಲೇಜಿಗೆ ರಜೆ ಇರುವ ಈ ಸಂದರ್ಭದಲ್ಲಿ ದೀಪಾ ಶೆಟ್ಟಿ ಟಿವಿ. ನೋಡುವುದರಲ್ಲಿಯೇ ಮಗ್ನಳಾಗಿದ್ದಳಂತೆ. ಓದುವುದು ಬಿಟ್ಟು ಸದಾ ಟಿ.ವಿ. ವೀಕ್ಷಣೆ ಮಾಡುವ ಮಗಳ ವರ್ತನೆ ಸಹಿಸದ ತಾಯಿ ಓದುವಂತೆ ಮಗಳಿಗೆ ಹೇಳಿದ್ದರಂತೆ. ಇದಕ್ಕೆ ಸಿಟ್ಟು ಮಾಡಿಕೊಂಡ ಈಕೆ ಬುಧವಾರ ಸಂಜೆ ಸುಮಾರು 5 ಗಂಟೆಗೆ ಕೋಣೆಗೆ ಹೋಗಿ ಒಳ ಚಿಲಕ ಹಾಕಿಕೊಂಡಿದ್ದಳಂತೆ. ಕೊಂಚ ಹಠ ಸ್ವಭಾವದವಳಾಗಿದ್ದ ದೀಪಾ ಹೀಗೆ ಮುನಿಸಿಕೊಂಡು ಬಾಗಿಲು ಹಾಕಿಕೊಳ್ಳುವುದು ಮನೆಯವರಿಗೆ ಹೊಸತನವಲ್ಲವಾದ್ದರಿಂದ ಕೆಲ ಹೊತ್ತು ಸುಮ್ಮನಿದ್ದರು.
ಆದರೆ ಅರ್ಧ ಗಂಟೆಯಾದರೂ ಬಾಗಿಲು ತೆಗೆದು ಹೊರಬಾರದಿದ್ದಾಗ ತಾಯಿ ಹಾಗೂ ಅಕ್ಕ ಇಬ್ಬರೂ ಬಾಗಿಲು ತೆರೆಯುವಂತೆ ಗೋಗರೆದಿದ್ದಾರೆ. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಸ್ಥಳಿಯರನ್ನು ಕೂಗಿಕೊಂಡು ಕಿಟಕಿ ಒಡೆದು ಒಳ ನೋಡಿದಾಗ ಆತ್ಮಹತ್ಯೆ ಮಾಡಿಕೊಂದ ಘಟನೆ ಬೆಳಕಿಗೆ ಬಂದಿದೆ. ಅಷ್ಟೋತ್ತಿಗಾಗಲೇ ದೀಪಾ ಚೂಡಿದಾರದ ದುಪ್ಪಟ್ಟ ಬಿಗಿದುಕೊಂಡು ಮನೆಯ ಫ್ಯಾನಿನ ಹುಕ್ಗೆ ನೇಣು ಹಾಕಿಕೊಂಡಿದ್ದಳು. ಬಳಿಕ ಸ್ಥಳೀಯರು ಬಾಗಿಲು ಒಡೆದು ಪೊಲೀಸರಿಗೆ ಸುದ್ಧಿ ಮುಟ್ಟಿಸಿದ್ದಾರೆ.
ಮಧ್ಯಮ ವರ್ಗದ ಕುಟುಂಬದವರಾದ ಪ್ರಭಾಕರ ಶೆಟ್ಟಿ ಹಾಗೂ ಹೇಮಾ ದಂಪತಿಗಳ ಮೂವರು ಮಕ್ಕಳಲ್ಲಿ ಮೂರನೇಯವಳೇ ಈ ದೀಪಾ ಶೆಟ್ಟಿ. ಓರ್ವ ಮಗ ಬುಧಿಮಾಂಧ್ಯನಾಗಿದ್ದು ಈತನ ಚಾಕರಿಯನ್ನು ಮನೆಮಂದಿಯೇ ನೋಡಿಕೊಳ್ಳಬೇಕು. ಇನ್ನು ದೀಪಾಳ ಅಕ್ಕ ಅರೆಹೊಳೆಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ. ಮೂಲತಃ ಕುಂದಾಪುರ ಸಮೀಪದ ಆನಗಳ್ಳಿ ನಿವಾಸಿಗಳಾದ ಇವರು ದೀಪಾಳ ಸಹೋದರಿ ಅರೆಹೊಳೆಯಲ್ಲಿ ಶಿಕ್ಷಕಿಯಾಗಿರುವ ಕಾರಣ ಅಲ್ಲಿಯೇ ಸಮೀಪ ನಾವುಂದದಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ಕಳೆದ ಒಂದೂವರೆ ವರ್ಷದಿಂದ ವಾಸಿಸುತ್ತಿದ್ದರು.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.