ಮರವಂತೆ: ತ್ರಾಸಿ ಮರವಂತೆ ಬೀಚ್ ಬಳಿ ರಾ.ಹೆ.66ರಲ್ಲಿ ಕ್ವಾಲೀಸ್ ಹಾಗೂ ಲಾರಿ ನಡುವೆ ಸಂಭವಿಸಿದ ಢಿಕ್ಕಿಯಲ್ಲಿ ಸುಳ್ಯ ಮೂಲದ ಓರ್ವರು ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಬಂಟ್ವಾಳ ಸಮೀಪದ ಮಂಚಿ ಮೊಂತಿ ಮಾರು ದುರ್ಗಾಪರಮೇಶ್ವರಿ ದೇವಸ್ಥಾನದ ಪುರೋಹಿತ ಉದಯ ಭಟ್ (42) ಎಂದು ಗುರುತಿಸಲಾಗಿದೆ. ಉಳಿದಂತೆ ಕಾರನ್ನು ಚಲಾಯಿಸುತ್ತಿದ್ದ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಗಳೂರು ಬಲ್ಮಠದಲ್ಲಿ ವೈದ್ಯರಾಗಿರುವ ಡಾ|ಕಿಶನ್ ಸುಳ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗೋಕರ್ಣದಿಂದ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಮರವಂತೆ ಬೀಚ್ ಬಳಿ ಎದುರಿನಿಂದ ಹೋಗುತ್ತಿದ್ದ ಲಾರಿ ಚಾಲಕ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಲಾರಿಯ ಹಿಂಬದಿಯ ಬಲಭಾಗ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿತ್ತು. ಈ ಹಂತದಲ್ಲಿ ಕಾರಿನ ಎದುರಿನ ಸೀಟಿನಲ್ಲಿ ಕುಳಿತಿದ್ದ ಉದಯ ಭಟ್ ಗಂಭೀರವಾಗಿ ಗಾಯಗೊಂಡಿದ್ದರು. ಕಾರಿನಲ್ಲಿ ಸಿಲುಕಿಕೊಂಡಿರುವ ಅವರನ್ನು ಗಂಗೊಳ್ಳಿಯ ಹೆಲ್ಪ್ಲೈನ್ ಸ್ವಯಂ ಸೇವಕರು ಹೊರ ತೆಗೆದು ಕುಂದಾಪುರ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾರೆ.
ಅಪಘಾತ ಸಂಭವಿಸದ ಕೂಡಲೇ ಲಾರಿ ಸ್ಥಳದಿಂದ ಪರಾರಿಯಾಗಿದ್ದು, ಲಾರಿ ಶೋಧನೆಯಲ್ಲಿ ಪೊಲೀಸರು ತೊಡಗಿದ್ದಾರೆ. ಸ್ಥಳಕ್ಕೆ ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ. ಗಂಗೊಳ್ಳಿ ಠಾಣಾಧಿಕಾರಿ ಸಂಪತ್ ಕುಮಾರ್ ಭೇಟಿ ನೀಡಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.