ಮಲ್ಪೆ: ಪ್ರೀತಿಸು ಎಂದು ನೆರೆಮನೆಯ ಯುವತಿಯನ್ನು ಕಾಡುತ್ತಿದ್ದ ವಿಕೃತ ಮನಸ್ಸಿನ ಯುವಕನೊಬ್ಬ ಹಾಡುಹಗಲೇ ಯುವತಿಗೆ ಚೂರಿಯಿಂದ ಇರಿದು ಕೊಲೆಗೈದ ಘಟನೆಯು ಬುಧವಾರ ಬೆಳಗ್ಗೆ ಕಡೆಕಾರು ಬಡಗುತೋಟ ಎಸ್ಸಿ ಕಾಲನಿಯ ಬಳಿ ನಡೆದಿದೆ. ಆರೋಪಿ ಪರಾರಿಯಾಗಿದ್ದಾನೆ.
ಕೊಲೆಯಾದ ರಂಜಿತಾ.
ಕಡೆಕಾರು ಗ್ರಾಮದ ಶೇಖರ ಅವರ ಮಗಳು ರಂಜಿತಾ ಎಸ್. (19) ಕೊಲೆಯಾದ ಯುವತಿ. ಈಕೆ ಉಡುಪಿ ಅಜ್ಜರಕಾಡಿನ ಮಹಿಳಾ ಪ್ರ.ದರ್ಜೆ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿ. ಆಕೆಗೆ ಚೂರಿಯಿಂದ ಇರಿದ ಯುವಕ ನೆರೆಮನೆಯ ರಾಜು ಪಟೇಲ್ ಅವರ ಮಗ ಯೋಗೀಶ (26). ಈತ ಎಲೆಕ್ಟೀಶಿಯನ್, ಪೈಂಟಿಗ್ ಇನ್ನಿತರ ಕೆಲಸ ಮಾಡಿಕೊಂಡಿದ್ದ. ಈತನಿಗಾಗಿ ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದಾರೆ.
ಕೊಲೆಗೈದ ಯುವಕ ಯೋಗೀಶ ಬೆನ್ನಿಗೆ ಚೂರಿ ಹಾಕಿದ!
ಬುಧವಾರ ಬೆಳಗ್ಗೆ ರಂಜಿತಾ ತನ್ನ ಸಹಪಾಠಿ ಗೆಳತಿಯ ಮನೆಗೆ ಬಂದಿದ್ದಳು. ಈ ವೇಳೆ ಚೂರಿ ಇರಿತಕ್ಕೊಳಗಾಗಿದ್ದಾಳೆ. ಯೋಗೀಶನ ಮನೆ ಕೂಡ ಅದೇ ಮನೆಯ ಪಕ್ಕದಲ್ಲೆ ಇದೆ. ಗೆಳತಿಯೊಂದಿಗೆ ನಿಂತು ಮಾತನಾಡುತ್ತಿದ್ದ ವೇಳೆ ಹಿಂದಿನಿಂದ ಬಂದ ಯೋಗೀಶ ಯುವತಿಯ ಬೆನ್ನಿನ ಭಾಗದಲ್ಲಿ ಸೊಂಟದ ಕೆಳಭಾಗಕ್ಕೆ ಚೂರಿಯಿಂದ ಇರಿದು ಬಳಿಕ ಪರಾರಿಯಾಗಿದ್ದಾನೆ. ಇರಿತದ ತೀವ್ರತೆಗೆ ಚೂರಿಯು ಸುಮಾರು ಅರ್ಧ ಅಡಿಗಳಷ್ಟು ದೇಹದೊಳಕ್ಕೆ ಹೊಕ್ಕಿದೆ. ಸ್ಥಳೀಯರ ಪ್ರಕಾರ ಆತ ಮೂರು ಬಾರಿ ಇರಿದಿದ್ದ ಎನ್ನಲಾಗಿದೆ. ಇದರಿಂದ ಆಕೆಗೆ ವಿಪರೀತ ರಕ್ತಸ್ರಾವವಾಗಿದೆ. ಇದನ್ನು ಕಂಡ ಗೆಳತಿಯು ಜೋರಾಗಿ ಬೊಬ್ಬೆ ಹಾಕಿದಾಗ ಅಕ್ಕಪಕ್ಕದವರು ಓಡಿ ಬಂದು ತತ್ಕ್ಷಣ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಯುವತಿಯನ್ನು ಕರೆದೊಯ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಯುವತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಎಚ್ಚರಿಸಿದ್ದರೂ ಕಿರುಕುಳ ನೀಡುತ್ತಿದ್ದ
ಯೋಗೀಶ ಮತ್ತು ರಂಜಿತಾ ಪ್ರೇಮಿಗಳಲ್ಲ. ಇದು ಪಕ್ಕಾ ಒನ್ಸೈಡ್ ಲವ್. ಯೋಗೀಶನು ಸ್ಥಳೀಯವಾಗಿ ರಂಜಿತಾಳನ್ನು ತಾನು ಲವ್ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದ. ತನ್ನನ್ನು ಪೀÅತಿಸುವಂತೆ ಆಕೆಯನ್ನು ಪದೇ ಪದೇ ಪೀಡಿಸುತ್ತಿದ್ದರೂ ಆಕೆ ಒಪ್ಪಿರಲಿಲ್ಲ. ಪ್ರೀತಿ ನಿರಾಕರಿಸಿದ್ದರೂ ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದ. ಕಾಲೇಜು, ಇನ್ನಿತರ ಕಡೆಗಳಿಗೆ ಹೋದಾಗಲೆಲ್ಲ ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಈ ಕಿರುಕುಳವನ್ನು ತಾಳಲಾರದೆ ತನ್ನ ಮನೆಯಲ್ಲಿ ಯುವತಿ ವಿಷಯ ತಿಳಿಸಿದ್ದಳು. ಮನೆಯವರು ಯುವಕನಿಗೆ ಬುದ್ದಿವಾದ ಹೇಳಿ ಇನ್ನು ಮುಂದೆ ಆಕೆಯ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿದ್ದರು. ಆದರೂ ಆತ ಆಕೆಯ ಬೆನ್ನು ಹಿಡಿಯುವುದನ್ನು ಮಾತ್ರ ನಿಲ್ಲಿಸಲಿಲ್ಲ.
ಪೊಲೀಸರೂ ನಿರ್ಲಕ್ಷಿಸಿದರೇ?
ದೂರು ನೀಡಿದ ಸಮಯದಲ್ಲಿ ಯುವಕನ ಮನೆಯವರು ಇನ್ನು ಮುಂದೆ ಈ ಮನೆಯಲ್ಲಿ ಆತನನ್ನು ಕೂರಿಸಿಕೊಳ್ಳುವುದಿಲ್ಲ. ದೂರದ ಅಜ್ಜಿ ಮನೆಗೆ ಕಳುಹಿಸುತ್ತೆವೆ ಎಂದು ಹೇಳಿದ್ದರು. ಆದರೆ ಆತ ಎಲ್ಲಿಗೂ ಹೋಗದೆ ಮನೆಯಲ್ಲಿಯೇ ಇದ್ದ. ದೂರು ನೀಡಿದ್ದಕ್ಕೆ ಯುವಕನ ಮನೆಯವರು ಆಗಾಗ್ಗೆ ನಮ್ಮ ಮೇಲೆ ರೇಗಿ ಬರುತ್ತಿದ್ದರು. ಯೋಗೀಶ್ ನನಗೆ ಅನಗತ್ಯ ಪೀಡಿಸುತ್ತಿದ್ದಾನೆ. ನನಗೆ ಓದಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಆತನ ಪೀಡನೆಯಿಂದ ನನ್ನನ್ನು ರಕ್ಷಿಸಿ ಎಂದು ಉಡುಪಿ ಪೊಲೀಸ್ ವರಿಷ್ಟಾಧಿಕಾರಿಯವರಲ್ಲಿ ರಂಜಿತಾ ವಿನಂತಿಸಿಕೊಂಡಿದ್ದಳು. ಆದರೂ ನಮ್ಮಿಂದ ದೂರವಾದಳು ಎಂದು ಕೊಲೆಯಾದ ರಂಜಿತಾಳ ಚಿಕ್ಕಮ್ಮ ಜಯಂತಿ ಕೊರಗಿನಿಂದ ಹೇಳುತ್ತಾರೆ.
ಅಜ್ಜಿ ಮನೆಗೆ ಹೋಗುವವಳಿದ್ದಳು...
ರಂಜಿತಾಳ ಕಾಲೇಜಿನ ಪರೀಕ್ಷೆ ಸೋಮವಾರವಷ್ಟೆ ಮುಗಿದಿತ್ತು. ಒಂದು ವಾರ ಕಾಲೇಜಿಗೆ ರಜೆಯಿದ್ದುದರಿಂದ ಆಕೆ ಕಪ್ಪೆಟ್ಟು ಬಳಿಯಿರುವ ತನ್ನ ಅಜ್ಜಿ ಮನೆಗೆ ಹೋಗಲು ತನ್ನ ಸಂಬಂಧಿ ಸೇ°ಹಿತೆಯ ಮನೆಗೆ ಬಂದು ಮಾತನಾಡುತ್ತಿದ್ದಳು. ರಂಜಿತಾಳ ತಂದೆ ಶೇಖರ ಅವರು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಏಲಂ ಮಾಡುವ ಕಾಯಕವನ್ನು ಮಾಡಿಕೊಂಡಿದ್ದು ಈಕೆ ಒಬ್ಬಳೇ ಮಗಳು. ಮತ್ತಿಬ್ಬರು ಗಂಡು ಮಕ್ಕಳೂ. ಅಕ್ಕರೆಯಿಂದ ಸಾಕಿದ ಏಕೈಕ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಸ್ಥಳೀಯರ ಹೃದಯವನ್ನು ಕಲಕಿತ್ತು.
ಹಿಂದೆಯೂ ಒಮ್ಮೆ ನಡೆದಿತ್ತು ಹಲ್ಲೆ?
ಈ ಹಿಂದೆ ಒಂದು ದಿನ ಆಕೆ ನಡೆದುಕೊಂಡು ಹೋಗುವಾಗ ಅಕೆಯ ಮೇಲೆ ಯೋಗೀಶ ಹಲ್ಲೆ ನಡೆಸಿದ್ದ ಎಂದು ತಿಳಿದುಬಂದಿದೆ. ಕಳೆದ 2-3 ತಿಂಗಳ ಹಿಂದೆ ಆತನ ವಿರುದ್ಧ ಯುವತಿಯ ಮನೆಯವರು ಮಲ್ಪೆ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಯುವಕನಲ್ಲಿ ಮುಚ್ಚಳಿಕೆ ಬರೆಯಿಸಿಕೊಂಡಿದ್ದರು ಎನ್ನುವುದು ಗೊತ್ತಾಗಿದೆ.
Udayavani | Nov 27, 2013