ವಿಟ್ಲ : ಕರಾವಳಿ ಅಲೆ ಪತ್ರಿಕೆಯ ವಿಟ್ಲ ಪತ್ರಕರ್ತ ವಿ.ಟಿ. ಪ್ರಸಾದ್(38) ಮೇಲೆ ಬುಧವಾರ ಬೆಳಗ್ಗೆ ಸುಮಾರು 40ಕ್ಕೂ ಅಧಿಕ ಮಂದಿ ತಂಡ ಯದ್ವಾ ತದ್ವಾ ಬಡಿದು, ತುಳಿದು, ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ತಲೆ, ಮುಖ, ಸೊಂಟಕ್ಕೆ ಮಾತ್ರವಲ್ಲ, ಎಲ್ಲೆಂದರಲ್ಲಿ ತುಳಿದು, ವಿ.ಟಿ.ಪ್ರಸಾದ್ ಅವರನ್ನು ಮಲಗಿಸಿ, ಮೈಮೇಲೆ ಅನೇಕ ಮಂದಿ ನಿಂತು, ಕುಣಿದು ಅಮಾನವೀಯವಾಗಿ ವರ್ತಿಸಿದ್ದಾರೆ.
ಬೆಳಗ್ಗೆ ಸುಮಾರು ಗಂಟೆ 11.45ರ ಸಮಯ ಇವರು ಮನೆ ಪಕ್ಕದಲ್ಲೇ ಇದ್ದ ಶಾಲೆಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಗಳ ಜತೆ ಹರಟೆ ಹೊಡೆಯುತ್ತಿದ್ದರು. ಇದೇ ಸಂದರ್ಭದಲ್ಲಿ ಎರಡು ರಿಕ್ಷಾಗಳಲ್ಲಿ ಬಂದ ಪಿಎಫ್ಐ ಎಂಬ ಮುಸ್ಲಿಮ್ ಮೂಲಭೂತವಾದಿ ಸಂಘಟನೆಯ ಕಾರ್ಯಕರ್ತರು ಪ್ರಸಾದ್ ಅವರನ್ನು ಹೊರಗೆ ಕರೆದಿದ್ದರು. ಇವರು ಧೈರ್ಯದಿಂದ ಮುನ್ನುಗ್ಗಿದಾಗ ಸುಮಾರು 40ಕ್ಕೂ ಅಧಿಕ ಮಂದಿ ಪ್ರಸಾದ್ ಅವರ ಮೈಮೇಲೆ ಕೈಮಾಡಿದ್ದಾರೆ. ಅವರನ್ನು ಬಡಿದು ಉರುಳಿಸಿದ ತಂಡ ರಿಕ್ಷಾದಲ್ಲಿ ಹಾಕಿ, ಅಲ್ಲೇ ಪಕ್ಕದಲ್ಲಿದ್ದ ಅಲೀಮಾ ಎಂಬವರ ಮನೆಗೆ ಕರೆದುಕೊಂಡು ಸಾಗಿದ್ದಲ್ಲದೆ ಅಲ್ಲಿ ಒಟ್ಟಾಗಿ ಏಕಮಾತ್ರ ವ್ಯಕ್ತಿಯ ಮೇಲೆ ಮತ್ತೆ ಹಲ್ಲೆ ನಡೆಸಿದ್ದಾರೆ. ಪಕ್ಕಾಸು ತುಂಡುಗಳಿಂದ, ಕೈಯಿಂದ ಹೊಡೆದಿದ್ದು, ಶೂ ಹಾಕಿ ತುಳಿದಿದ್ದಾರೆ. ಪ್ರಸಾದ್ ತಲೆ ಮೇಲೆ ಶೂವಿನ ಅಚ್ಚೊತ್ತಿರುವುದು ಕಂಡುಬರುತ್ತದೆ. ಸಂಪೂರ್ಣ ಪ್ರಜ್ಞೆ ತಪ್ಪಿ ಬಿದ್ದಿದ್ದ ಪ್ರಸಾದ್ ಅವರನ್ನು ಪೊಲೀಸರು ಮತ್ತು ಫ್ರೆಂಡ್ಸ್ ವಿಟ್ಲ ತಂಡದ ಆ್ಯಂಬುಲೆನ್ಸ್ ಮೂಲಕ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸಿದ್ದು ಹೆಚ್ಚಿನ ಮಾಹಿತಿಗಾಗಿ ತಲೆ, ಸೊಂಟ ಮೊದಲಾದ ಅಂಗಾಂಗಗಳನ್ನು ಸ್ಕ್ಯಾನಿಂಗ್ ನಡೆಸಲಾಗಿದೆ. ಇದೇ ಸಂದರ್ಭ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ತಿಳಿಸಿದ ಪ್ರಕಾರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಒಯ್ಯಲಾಗಿದೆ.
ಇಬ್ಬರ ಬಂಧನ :
ಪ್ರಸಾದ್ ಅವರಿಗೆ ಹಲ್ಲೆ ನಡೆಸಿದ 40 ಮಂದಿ ತಂಡದಲ್ಲಿದ್ದ ಇಬ್ಬರನ್ನು ವಿಟ್ಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೆಳಗಿನ ಬಾರೆಬೆಟ್ಟು ಸಿದ್ಧೀಕ್, ಅಬ್ದುಲ್ಜಬ್ಟಾರ್ ಅವರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ವಿ.ಟಿ.ಪ್ರಸಾದ್ ಅವರ ಹೇಳಿಕೆ :
ಆಸ್ಪತ್ರೆಯಲ್ಲಿ ಸಂಜೆ ಹೊತ್ತು ಮಾತನಾಡಲು ಶಕ್ತರಾದ ಪ್ರಸಾದ್ ಅವರು ಪತ್ರಕರ್ತರ ಜತೆ ಮಾತನಾಡಿ ಮನೆ ಸಮೀಪದ ಬಡವರಾದ ಅಲೀಮಾ ಅವರಿಗೆ ಮನೆ ನಿರ್ಮಾಣಕ್ಕೆ ಯಾರೂ ಸಹಕರಿಸಿರಲಿಲ್ಲ. ತಾನು ಊರ ಪರವೂರ ದಾನಿಗಳನ್ನು ಸಂಪರ್ಕಿಸಿ, ಮನೆ ನಿರ್ಮಾಣಕ್ಕೆ ಸಹಕರಿಸಿದ್ದೆ. ಇದರಿಂದ ಅದೇ ಕೋಮಿನ ಕೆಲ ವ್ಯಕ್ತಿಗಳಿಗೆ ಅಸಮಾಧಾನ ಉಂಟಾಗಿರಬೇಕು. ತಾನು ಸಹಾಯ ಮಾಡಿರುವುದನ್ನು ಸಹಿಸದ ಆ ಕೋಮಿನ ವ್ಯಕ್ತಿಗಳು ಸಿಟ್ಟಾಗಿ ನಿನಗೆ ಈ ಕೆಲಸ ಯಾಕೆ ? ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ. ಅವರಲ್ಲಿ ಕೆಳಗಿನ ಬಾರೆಬೆಟ್ಟು ಸಿದ್ಧೀಕ್, ಬಾರಿಕ್ ಕುಡ್ತಮುಗೇರು, ಮದಕ ಶರೀಫ್, ಅಬ್ದುಲ್ಜಬ್ಟಾರ್, ಅಬ್ದುಲ್ಲತೀಫ್ ಮದಕ ಅವರನ್ನು ಗುರುತಿಸಿದ್ದೇನೆ. ತಂಡದಲ್ಲಿ ಒಟ್ಟು 40ಕ್ಕೂ ಅಧಿಕ ಮಂದಿ ಇದ್ದರು ಎಂದು ತಿಳಿಸಿದ್ದಾರೆ.
ಆಯಂಬುಲೆನ್ಸ್ಗೆ ಅಡ್ಡ ನಿಂತ ವ್ಯಕ್ತಿ :
ಆ್ಯಂಬುಲೆನ್ಸ್ಗೆ ಅಡ್ಡ ನಿಂತು ಓರ್ವ ಅಪರಿಚಿತ ವ್ಯಕ್ತಿ ಈತನನ್ನು ಬದುಕಿಸುವುದು ಯಾಕೆ ? ಅವನನ್ನು ಆಸ್ಪತ್ರೆಗೆ ಒಯ್ಯಬೇಡಿ. ಅವ ಇಲ್ಲೇ ಸಾಯಲಿ ಎಂದನಂತೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಆ್ಯಂಬುಲೆನ್ಸ್ ಚಾಲಕ ಪತ್ರಕರ್ತರಿಗೆ ತಿಳಿಸಿದ್ದಾರೆ.
ಪ್ರಕರಣ ತಿರುಚಲು ಯತ್ನ :
ಈ ನಡುವೆ ಈ ಪ್ರಕರಣವನ್ನು ತಿರುಚಲು ಯತ್ನ ನಡೆಯುತ್ತಿದೆಯೆನ್ನಲಾಗಿದೆ. ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ವಿ.ಟಿ.ಪ್ರಸಾದ್ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆಯೆನ್ನಲಾಗಿದೆ. ದೂರಿನ ವಿರುದ್ಧ ಪ್ರತಿದೂರು ದಾಖಲಿಸುವ ನಿಟ್ಟಿನಲ್ಲಿ ಕಾಣದ ಶಕ್ತಿಗಳ ಕೈವಾಡ ನಡೆಯುತ್ತಿದೆಯೆಂದು ತಿಳಿದುಬಂದಿದೆ.
ಇಂದು ಪ್ರತಿಭಟನೆ :
ಬಂಟ್ವಾಳ ತಾ| ಪತ್ರಕರ್ತರ ಸಂಘ ಮತ್ತು ವಿಟ್ಲದ ನಾಗರಿಕರು ಪತ್ರಕರ್ತ ವಿ.ಟಿ.ಪ್ರಸಾದ್ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳೆಲ್ಲರನ್ನು ಬಂಧಿಸಬೇಕು ಮತ್ತು ವಿನಾ ಕಾರಣ ಪ್ರಸಾದ್ ಅವರ ವಿರುದ್ಧ ಅತ್ಯಾಚಾರ ಯತ್ನ ಪ್ರಕರಣ ದಾಖಲಿಸಿ, ಇಡೀ ಪ್ರಕರಣವನ್ನು ತಿರುಚುವುದರ ವಿರುದ್ಧ ನ.28ರಂದು ಬೆಳಗ್ಗೆ 10 ಗಂಟೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಲಾಗುವುದು. ವಿ.ಟಿ.ಪ್ರಸಾದ್ ಮೇಲಿನ ಹಲ್ಲೆಯನ್ನು ಖಂಡಿಸುತ್ತೇವೆ ಎಂದು ತಾ| ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
-ಉದಯವಾಣಿ