ಕುಂದಾಪುರ: ಭಟ್ಕಳದ ಸರ್ಪನಕಟ್ಟೆ ಬಳಿ ಖಾಸಗಿ ಬಸ್ ಚಾಲಕನ ಮೇಲೆ ಸ್ಥಳೀಯ ಕೆಲವು ವ್ಯಕ್ತಿಗಳು ಹಲ್ಲೆನಡೆಸಿದನ್ನು ಖಂಡಿಸಿ ಮಂಗಳವಾರ ಕುಂದಾಪುರ ಹಾಗೂ ಭಟ್ಕಳದಲ್ಲಿ ಖಾಸಗಿ ಬಸ್ಸಿನ ಚಾಲಕ ಹಾಗೂ ನಿರ್ವಾಹಕರು ಬಸ್ಸು ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿ ಅಧಿಕಾರಿಗಳಿಗೆ ಮನವಿ ನೀಡಿದರು.
ಹಲ್ಲೆಯಿಂದ ಗಾಯಗೊಂಡ ಚಾಲಕ ಶಿವಮೊಗ್ಗ ಜಿಲ್ಲೆಯ ಹೊಸನಗರದ ನಿವಾಸಿ ನರಸಿಂಹ ಮೂರ್ತಿ ಅವರನ್ನು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಯಾರನ್ನೂ ಈ ತನಕ ಬಂಧಿಸಿಲ್ಲ.
ಕುಂದಾಪುರದಲ್ಲಿ ಬಸ್ಸು ಬಂದ್: ಹಲ್ಲೆ ಖಂಡಿಸಿ ಕುಂದಾಪುರದಲ್ಲಿ ಬಸ್ಸು ಚಾಲಕ ಹಾಗೂ ನಿರ್ವಾಹಕರು ಬೃಹತ್ ಸಂಖ್ಯೆಯಲ್ಲಿ ಸೇರಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಕುಂದಾಪುರ ಪೊಲೀಸ್ ಉಪನಿರೀಕ್ಷಕ ಜಯರಾಮ ಗೌಡ ಅವರ ಮೂಲಕ ಮನವಿ ಸಲ್ಲಿಸಿದರು.
ಮಂಗಳವಾರ ಬೆಳಗ್ಗಿನಿಂದ ಕುಂದಾಪುರ ತಾಲೂಕಿನಾದ್ಯಂತ ಹಾಗೂ ಉಡುಪಿ ತಾಲೂಕಿನ ಕೆಲವು ಕಡೆ ಬಸ್ಸು ಸಂಚಾರ ಸ್ಥಗಿತಗೊಂಡಿತ್ತು. ಗ್ರಾಮೀಣ ಪ್ರದೇಶಗಳಿಗೂ ತೆರಳುವ ಬಸ್ಸುಗಳು ಬೆಳಗ್ಗಿನಿಂದ ಸಂಚರಿಸಲಿಲ್ಲ. ದಿಢೀರನೆ ಬಸ್ಸು ಮುಷ್ಕರದಿಂದಾಗಿ ಶಾಲಾ ವಿದ್ಯಾರ್ಥಿಗಳು ಹಾಗೂ ಕಚೇರಿಗೆ ತೆರಳುವವರು ಕಷ್ಟಪಡಬೇಕಾಯಿತು. ಬಸ್ಸು ಮುಷ್ಕರದಿಂದಾಗಿ ಹೆಚ್ಚುವರಿಯಾಗಿ ಕೆ.ಎಸ್.ಆರ್ಟಿ.ಸಿ. ಬಸ್ಸುಗಳನ್ನು ಉಡುಪಿ -ಕುಂದಾಪುರ ಹಾಗೂ ಕೆಲವು ಒಳ ಬಾಗದ ಸ್ಥಳಗಳಿಗೆ ಬಿಟ್ಟಿರುವುದರಿಂದ ಸಾರ್ವಜನಿಕರು ಪರದಾಡುವುದು ತಪ್ಪಿತು. ಭಟ್ಕಳದಲ್ಲೂ ಬಸ್ಸು ಸಿಬ್ಬಂದಿಗಳು ಪ್ರತಿಭಟನೆ ನಡೆಸಿ ಮುಷ್ಕರ ನಡೆಸಿ ಸಹಾಯಕ ಕಮಿಷನರ್ಗೆ ಮನವಿ ಸಲ್ಲಿಸಿದರು.