ಹೆಮ್ಮಾಡಿ: ಅಮ್ಮಾ ತಾಯಿ, ಅಣ್ಣಾ, ಅಕ್ಕಾ ದಾನ-ಧರ್ಮ ಮಾಡಿ ಎನ್ನುತ್ತಾ ಭಿಕ್ಷೆ ಬೇಡಲು ಬಂದಿದ್ದ ಮಹಿಳೆಯರ ತಂಡವೊಂದು ದೇವರ ಹೆಸರಿನಲ್ಲಿ ಸಾರ್ವಜನಿಕರನ್ನು ಮರಳುಮಾಡಿ ಹಣ ಲಪಟಾಯಿಸಲು ಯತ್ನಿಸಿದ ಘಟನೆ ನಾಡಾ-ಗುಡ್ಡೆಅಂಗಡಿಯಲ್ಲಿ ಶುಕ್ರವಾರ ವರದಿಯಾಗಿದೆ.
ನಾಡಾ-ಗುಡ್ಡೆಅಂಗಡಿ ಮಾರುಕಟ್ಟೆ ಬಳಿ ಸಂಜೆ ವೇಳೆ ಕಾಣಿಸಿಕೊಂಡ ಘಟ್ಟದವರೆನ್ನಲಾದ ಮೂವರು ಮಹಿಳೆಯರು ಯಾವುದೋ ದೇವರ ಚಿತ್ರವನ್ನು ಹಿಡಿದುಕೊಂಡು ಇಲ್ಲಿನ ಅಂಗಡಿ, ಮನೆಗಳಲ್ಲಿ ಭಿಕ್ಷೆಯನ್ನು ಸಂಗ್ರಹಿಸಿದ್ದು, ಜನರು ಕೊಟ್ಟಷ್ಟು ಹಣವನ್ನು ಸ್ವೀಕರಿಸಿದರು. ಇದೇ ಮಹಿಳೆಯರು ಸ್ವಲ್ಪ ಹೊತ್ತಿನ ಬಳಿಕ ಮಾರುಕಟ್ಟೆ ಸಮೀಪದ ಮನೆಯೊಂದಕ್ಕೆ ತೆರಳಿ ಮನೆಯಲ್ಲಿದ್ದ ಒಂಟಿ ಯುವತಿಯ ಬಳಿ ಹಣವನ್ನು ಕೇಳಿದ್ದಾರೆ. ಯುವತಿ ಹತ್ತು ರೂ. ನೀಡಿದ್ದಾಳೆ. ಆಕೆಯ ಮುಗ್ಧತೆಯನ್ನು ಗಮನಿಸಿದ ಮಹಿಳೆಯರು ನೂರು ರೂ. ಕೊಡು, ದೇವರ ಪ್ರಸಾದವನ್ನು ಮುಟ್ಟಿಸಿ ಹಿಂತಿರುಗಿಸುತ್ತೇವೆ. ಇಂದು ಶುಕ್ರವಾರವಾದ್ದರಿಂದ ನಿನಗೆ ಒಳ್ಳೇದಾಗುತ್ತದೆ ಎಂದು ಹೇಳಿ ಹಣ ಪಡೆದು ತಮ್ಮ ಚೀಲದಲ್ಲಿ ಸೇರಿಸಿದರು.
ಬಳಿಕ ಆ ಮಹಿಳೆಯರು ನೂರು ರೂಪಾಯಿಯನ್ನು ಹಿಂದಿರುಗಿಸದೇ ತಾವು ವಾಪಾಸು ಹೊರಡಲು ಅನುವಾದಾಗ ಯುವತಿ ಮನೆಯಿಂದ ಹೊರಬಂದು ಸಹಾಯಕ್ಕಾಗಿ ನೆರೆಹೊರೆಯರನ್ನು ಕೂಗಿದ್ದಾಳೆ. ತಕ್ಷಣ ಆಕೆಯನ್ನು ತಡೆದ ಮಹಿಳೆಯರು ಯಾರನ್ನಾದರೂ ಕೂಗಿ ಕರೆದರೆ ನಿನಗೆ ಕೆಟ್ಟದಾಗುತ್ತದೆ ಎಂದು ಹೆದರಿಸಿದ್ದು, ಕ್ಷಣಮಾತ್ರದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಯುವತಿ ಕೂಡಲೇ ನಾಡಾ ಮಾರುಕಟ್ಟೆಗೆ ಬಂದು ಅಲ್ಲಿನ ರಿಕ್ಷಾ ಚಾಲಕರಿಗೆ ವಿಷಯವನ್ನು ತಿಳಿಸಿದ್ದಾಳೆ.
ಈ ಮೋಸಗಾತಿ ಮಹಿಳೆಯರನ್ನು ಹುಡುಕಿಕೊಂಡು ಹೋದ ರಿಕ್ಷಾ ಚಾಲಕರಿಗೆ ಮಾರುಕಟ್ಟೆಯಿಂದ ಅನತಿದೂರದ ಶ್ರೀನಿವಾಸ ನಾಯಕರ ಮನೆಯಲ್ಲಿ ಮಹಿಳೆಯರು ಭಿಕ್ಷೆ ಕೇಳುತ್ತಿರುವ ಸಂಗತಿ ತಿಳಿಯಿತು. ಅಲ್ಲಿಗೆ ದೌಡಾಯಿಸಿದ ರಿûಾದ ಹುಡುಗರು ಯುವತಿಯಿಂದ ಪಡೆದ ನೂರು ರೂಪಾಯಿಯನ್ನು ಹಿಂದಿರುಗಿಸುವಂತೆ ತಾಕೀತು ಮಾಡಿದರು. ಮಹಿಳೆಯರು ಮತ್ತೆ ದೇವರ ಹೆಸರಿನಲ್ಲಿ ಸಬೂಬು ಹೇಳಲಾರಂಭಿಸಿದಾಗ ಪೋಲೀಸರಿಗೆ ದೂರು ಕೊಡುವುದಾಗಿ ರಿಕ್ಷಾ ಚಾಲಕರು ಎಚ್ಚರಿಸಿದರು. ಬೇರೆ ದಾರಿ ಕಾಣದ ಮಹಿಳೆಯರು ಹಣವನ್ನು ನೀಡಿ ಬೇಗನೆ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಈ ಮಹಿಳೆಯರು ಯುವತಿಯಿಂದ ನೂರು ರೂ. ಪಡೆದಂತೆಯೇ ಪ್ರಸಾದ ಮುಟ್ಟಿಸಿ ಕೊಡುವುದಾಗಿ ಹೇಳಿ ನಾಡಾದ ಅನೇಕರಿಂದ ನೂರು ರೂ. ಪಡೆದ ವಿಷಯ ನಿಧಾನವಾಗಿ ಗಮನಕ್ಕೆ ಬಂದಿದೆ.