ಕುಂದಾಪುರ: ಹೊಸಂಗಡಿಯ ಹೋಟೆಲೊಂದಕ್ಕೆ ಊಟಕ್ಕೆ ಆಗಮಿಸಿದ ಸ್ಥಳೀಯರಾದ ಅವಿನಾಶ್ ಹಾಗೂ ಅಭಿಜಿತ್ ಎನ್ನುವವರು ಊಟವಾದ ನಂತರ ಪರಸ್ಪರ ಜಗಳನಿರತರಾದಾಗ ಅವರನ್ನು ತಪ್ಪಿಸಲು ಹೋದ ಹೋಟೇಲ್ ಮಾಲಕ ಹಾಗೂ ಆವರ ಪತ್ನಿಯ ಮೇಲೆ ಹಲ್ಲೆ ನಡೆಸಿದ ಪರಿಣಾಮ ಪತ್ನಿ ಗಂಭೀರವಾಗಿ ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂಲತಃ ಬೈಂದೂರು ನಿವಾಸಿಗಳಾದ ಶಂಭು ಶೆಟ್ಟಿ ಹಾಗೂ ಅವರ ಪತ್ನಿ ಶ್ರೀಮತಿ ಶೆಟ್ಟಿ ಅವರು ಕಳೆದ 8 ವರ್ಷಗಳಿಂದ ಹೊಸಂಗಡಿಯಲ್ಲಿ ಹೋಟೇಲ್ ವೃತ್ತಿ ನಡೆಸುತ್ತಿದ್ದರು. ಬುಧವಾರ ಸಂಜೆ ಊಟಕ್ಕೆ ಬಂದ ಅವಿನಾಶ್ ಹಾಗೂ ಅಭಿಜಿತ್ ಸಹೋದರರಿಬ್ಬರು ಪರಸ್ಪರ ಗಲಾಟೆ ನಿರತರಾಗಿದ್ದಾಗ ದಂಪತಿಗಳು ತಪ್ಪಿಸಲು ಹೋಗಿದ್ದರು. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ಪತ್ರೆಗೆ ಆಗಮಿಸಿದ ತಾ.ಪಂ.ಅಧ್ಯಕ್ಷೆ ದೀಪಿಕಾ ಶೆಟ್ಟಿ, ಉಪಾಧ್ಯಕ್ಷೆ ಹೇಮಾವತಿ ಆರ್. ಪೂಜಾರಿ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆ ಶ್ರೀಮತಿ ಮೊಗವೀರ ಅವರು ಮಹಿಳೆಗೆ ಸಾಂತ್ವಾನ ಹೇಳಿದ್ದಾರೆ.
ಘಟನೆಯನ್ನು ಮಹಿಳಾ ಮಂಡಲಗಳ ತಾಲೂಕು ಒಕ್ಕೂಟದ ಅಧ್ಯಕ್ಷೆ ರಾಧಾದಾಸ್ ಅವರು ಖಂಡಿಸಿದ್ದು, ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.