ಹೆಮ್ಮಾಡಿ: ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಗೊಂಡ ನರೇಂದ್ರ ಮೋದಿ ಅವರ ಅಭಿಮಾನಿ ಬಳಗದ ಹೆಮ್ಮಾಡಿಯ ಯುವಕರು ಹೆಮ್ಮಾಡಿ ಪೇಟೆಯಲ್ಲಿ ಮೋದಿಯವರ ಕಟೌಟ್ ಹಾಕಿಸಿದ್ದಕ್ಕೆ ಅಸಮಾಧಾನಗೊಂಡ ಕೆಲವರು ಯುವಕನೋರ್ವನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಹೆಮ್ಮಾಡಿಯಲ್ಲಿ ಬುಧವಾರ ರಾತ್ರಿ ವರದಿಯಾಗಿದೆ.
ಹೆಮ್ಮಾಡಿಯ ಹೋಟೆಲೊಂದರಲ್ಲಿ ಊಟ ಮಾಡುತ್ತಿದ್ದಾಗ ಮಾತನಾಡಲಿಕ್ಕಿದೆ ಎಂದು ಕರೆದು ಮೂವರು ವ್ಯಕ್ತಿಗಳು ಸುರೇಂದ್ರ ಗಾಣಿಗ ಎಂಬ ಯುವಕನಿಗೆ ಹಲ್ಲೆ ನಡೆಸಿದ್ದಾರೆ. ತಲೆಗೆ ಗಂಭೀರವಾಗಿ ಗಾಯಗೊಂಡ ಅವರು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಮ್ಮಾಡಿ ಪೇಟೆಯಲ್ಲಿ ಮೋದಿಯವರ ಕಟೌಟ್ ಹಾಕಿದ್ದಕ್ಕೆ ಕಳೆದ ಕೆಲವು ದಿನಗಳಿಂದ ಹೆಮ್ಮಾಡಿಯ ಕೆಲವು ವ್ಯಕ್ತಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಕಟೌಟ್ ತೆಗೆಯಲು ಒತ್ತಾಯಿಸಿದ್ದರು. ಇದೇ ಹಿನ್ನೆಲೆಯಲ್ಲಿ ತನಗೆ ಹಲ್ಲೆ ನಡೆಸಿದ್ದಾಗಿ ಸುರೇಂದ್ರ ಗಾಣಿಗ ಅವರು ತಿಳಿಸಿದ್ದು, ಪೋಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಅ. 14ರಂದು ಸಂಜೆ ನಡೆದ ಹೆಮ್ಮಾಡಿ ಶಾರದಾ ಮೂರ್ತಿ ಜಲಸ್ತಂಭನ ಮೆರವಣಿಗೆ ಸಂದರ್ಭದಲ್ಲಿಯೂ ಕಟ್ಟು ಎಂಬಲ್ಲಿ ರಾಜೇಂದ್ರ ದೇವಾಡಿಗ ಅವರ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದ್ದಾರೆನ್ನಲಾದ ಪ್ರಕಾಶ್ ಸುಳೆÕಕ್ರಾಸ್, ರಂಜು ಕುಲಾಲ್ ಮತ್ತು ಹರೀಶ್ ಚಂದನ್ ಎಂಬುವವರ ವಿರುದ್ಧ ಕುಂದಾಪುರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೆಮ್ಮಾಡಿಯಲ್ಲಿ ಮೋದಿ ಕಟೌಟ್ ಹಾಕಿಸಿದ ಹಿನ್ನೆಲೆಯಲ್ಲಿ ಈ ಹಲ್ಲೆ ಪ್ರಕರಣವೂ ನಡೆದಿದೆ ಎಂದು ಹೇಳಲಾಗಿದ್ದು, ಇದೀಗ ಮತ್ತೆ ಯುವಕನ ಮೇಲೆ ಹಲ್ಲೆ ನಡೆದಿದ್ದರಿಂದ ಹೆಮ್ಮಾಡಿ ಪೇಟೆ ಪರಿಸರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನೆಲೆಸಿದೆ.