ಸಿದ್ದಾಪುರ: ಸಿದ್ದಾಪುರ ಪರಿಸರದಲ್ಲಿ ಗುರುವಾರ ಸಂಜೆ 6ರಿಂದ 7ರ ತನಕ ಗುಡುಗು ಸಿಡಿಲು ಸಹಿತವಾಗಿ ಬೀಸಿದ ಭಾರೀ ಗಾಳಿ ಮಳೆಯಿಂದಾಗಿ ಅಪಾರ ನಷ್ಟ ಸಂಭವಿಸಿ, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಸಿದ್ದಾಪುರ, ಹೊಸಂಗಡಿ, ಹಳ್ಳಿಹೊಳೆ, ಅಮಾಸೆಬೈಲು, ಮಡಾಮಕ್ಕಿ, ಬೆಳ್ವೆ, ಗೋಳಿಯಂಗಡಿ, ಹಾಲಾಡಿ, ಶಂಕರನಾರಾಯಣ, ಅಂಪಾರು, ಆಜ್ರಿ ಮುಂತಾದ ಪರಿಸರದಲ್ಲಿ ಏಕಾಏಕಿ ಗುಡುಗು ಸಹಿತ ಭಾರೀ ಗಾಳಿ ಮಳೆ ಸುರಿಯಿತು. ಅಲ್ಲಲ್ಲಿ ಆನೆಕಲ್ಲು ಮಳೆಯಾಗಿದೆ.
ಮಚ್ಚಟ್ಟು ಗ್ರಾಮದ ಬೊಬ್ಬರ್ಯನ ಜಡ್ಡು ಚಂದ್ರ ಪೂಜಾರಿ ಹಾಗೂ ಕುಳ್ಳುಂಜೆ ಗ್ರಾಮದ ಹೆಗೋಡ್ಲು ಗುಲಾಬಿ ಪೂಜಾರಿ ಅವರಿಗೆ ಸಿಡಿಲು ಬಡಿದು ಕುಂದಾಪುರದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆಯ ಪರಿಸರದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ. ರಟ್ಟಾಡಿಯ ಉಮೇಶ್ ಹೆಗ್ಡೆ ಅವರ ಮನೆಯ ಮೇಲೆ ವಿದ್ಯುತ್ ಕಂಬವು ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ.
ಬೈಂದೂರು ವಿರಾಜಪೇಟೆಯ ರಾಜ್ಯ ಹೆದ್ದಾರಿಯ ಹೈಕಾಡಿಯಿಂದ ಮಡಾಮಕ್ಕಿಯ ತನಕ ಅಲ್ಲಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡ ಬಗ್ಗೆ ವರದಿಯಾಗಿದೆ. ಗೋಳಿಯಂಗಡಿಯಲ್ಲಿ ಮಾರ್ಕೆಟ್ ಕಟ್ಟಡ ಮಾಡಿನ ತಗಡು ಹಾರಿಹೋಗಿ ನಷ್ಟ ಸಂಭವಿಸಿದೆ.