ಗ್ಯಾಸ್ ಸಿಲಿಂಡರ್ ಲಾರಿ ಅಗ್ನಿಗಾಹುತಿ: ತಪ್ಪಿದ ಅನಾಹುತ

ಕುಂದಾಪುರ: ಮಂಗಳೂರಿನಿಂದ ಹಾವೇರಿ ಜಿಲ್ಲೆ ರಾಣೆಬೆನ್ನೂರು ದೀಕ್ಷಾ ಹಿಂದೂಸ್ತಾನ್(ಎಚ್.ಪಿ) ಕಂಪೆನಿಯ ಅಡುಗೆ ಅನಿಲ ದಾಸ್ತಾನು ಗೋದಾಮಿಗೆ ಅಡುಗೆ ಅನಿಲ ಜಾಡಿಗಳನ್ನು  ಹೊತ್ತು ಸಾಗುತ್ತಿದ್ದ ಲಾರಿ­ಯೊಂದರಿಂದ ಅನಿಲ ಸೋರಿಕೆಯಿಂದ  ಲಾರಿಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಲಾರಿ ಸುಟ್ಟು ಹೋಗಿದೆ.
    ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಅಮಾಸೆಬೈಲು ಠಾಣೆಯ ಬಾಳೆಬರೆ ಘಾಟಿಯ 3ನೇ ತಿರುವಿನಲ್ಲಿ ಈ ಘಟನೆ ನಡೆದಿದ್ದು, ಲಾರಿಯಲ್ಲಿದ್ದ ಸಿಲಿಂಡರ್‌ಗಳು ಸ್ಫೋಟ­ಗೊಂಡಿವೆ.
      ಮಂಗಳೂರಿನಿಂದ ಅನಿಲಜಾಡಿಗಳನ್ನು ಹೇರಿಕೊಂಡು ಸಾಗುತ್ತಿದ್ದಾಗ ಸಂಜೆ 4.30ರ ವೇಳೆಗೆ ಹೊಸಂಗಡಿ ಗ್ರಾಮಪಂಚಾಯಿತಿಯ 3ನೇ ‘ಯು’ ತಿರುವಿನಲ್ಲಿ ಅನಿಲ ಸೋರಿಕೆ­ಯಾಗಿದೆ. ಸೋರಿಕೆಯಿಂದ ಶಾರ್ಟ್‌ ಸರ್ಕ್ಯುಟ್‌ ಉಂಟಾಗಿ ಲಾರಿಯ ತಳಭಾಗಕ್ಕೆ ಬೆಂಕಿ ತಗುಲಿದೆ. ಇದನ್ನು ಗಮನಿಸಿದ ಲಾರಿ ಚಾಲಕ ರಾಣೆಬೆನ್ನೂರಿನ ಅಜಯ್ ಲಾರಿಯನ್ನು ನಿಲ್ಲಿಸಿದ್ದು, ಸೋರಿಕೆಯಾಗುತ್ತಿದ್ದ ಅನಿಲ ಜಾಡಿಯಿಂದ ಸೋರಿಕೆ ನಿಲ್ಲಿಸಲು ಯತ್ನಿಸಿದರು. ಲಾರಿಯಲ್ಲಿ ನಿರ್ವಾಹಕ ಇಲ್ಲದೆ ಇದ್ದುದರಿಂದ ಅನಿಲ ಜಾಡಿಗಳನ್ನು ಹೊರಗೆಸೆಯಲು ಸಾಧ್ಯವಾಗಿಲ್ಲ. ಸೋರಿಕೆ ನಿಲ್ಲದೆ ಇದ್ದುದರಿಂದ ಚಾಲಕ ಲಾರಿಯಿಂದ ಜಿಗಿದು ಪ್ರಾಣಾ­ಪಾಯದಿಂದ ಪಾರಾಗಿದ್ದಾರೆ. ಲಾರಿಯ ಇಂಧನ ಟ್ಯಾಂಕ್‌ಗೂ  ಬೆಂಕಿ ತಗುಲಿದೆ.
     ಬಳಿಕ ಚಾಲಕ ಗ್ಯಾಸ್ ಏಜೆನ್ಸಿಯ ಅನಿಲ ಗೋದಾಮಿಗೆ ಮಾಹಿತಿ ನೀಡಿದ್ದಾರೆ. ಅಡುಗೆ ಅನಿಲ ದಾಸ್ತಾನು ಕೊಠಡಿಯಿಂದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದು, ಕೂಡಲೇ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬಂದು ಬೆಂಕಿ ಹತೋಟಿಗೆ ತರಲು ಪ್ರಯತ್ನಿಸಿದರು. ಕುಂದಾಪುರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರೂ ದಳದ ವಾಹನ ಘಟನಾ ಸ್ಥಳಕ್ಕೆ ಹೋಗುವ ಮಾರ್ಗ ಮಧ್ಯೆ ಕೆಟ್ಟು ತಲುಪಲು ವಿಳಂಬವಾಯಿತು. ಸಂಜೆ 7 ಗಂಟೆ ಸುಮಾರಿಗೆ ಬೆಂಕಿ ಹತೋಟಿಗೆ ಬಂದಿದೆ.
     ಮಂಗಳೂರಿನಿಂದ ಶಿವಮೊಗ್ಗ ಜಿಲ್ಲೆಗೆ ಅಡುಗೆ ಅನಿಲ ಜಾಡಿಗಳನ್ನು ಹೊಸಂಗಡಿ ಗ್ರಾಮ ಪಂಚಾಯಿತಿಯ ಬಾಳೆಬರೆ ಘಾಟಿಯ ಮೂಲಕ ಸಾಗಿಸಲಾಗುತ್ತಿದೆ. ಲಾರಿಯಲ್ಲಿ ಗೃಹಬಳಕೆ ಮತ್ತು ವಾಣಿಜ್ಯ ಉಪಯೋಗದ ಜಾಡಿಗಳನು್ನ ಸಾಗಾಟ ಮಾಡಲಾಗುತ್ತಿತ್ತು. ಅಪಘಾತ­ಕ್ಕೀಡಾದ ಲಾರಿಯಲ್ಲಿ 300 ಕ್ಕೂ ಮಿಕ್ಕಿ ಜಾಡಿಗಳಿದ್ದು, ಅವುಗಳು ಸರತಿಯಂತೆ ಸ್ಫೋಟಗೊಂಡಿವೆ. ಲಾರಿಯು ಅಗ್ನಿಗಾಹುತಿ­ಯಾದ ಬಾಳೆಬರೆ ಘಾಟಿಯ ಪ್ರದೇಶ ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯಲ್ಲಿದ್ದು ಇದು ಜನವಸತಿ ರಹಿತ ಪ್ರದೇಶವಾದ್ದರಿಂದ ಜೀವ ಹಾನಿಯಾಗಿಲ್ಲ. ಲಾರಿಯು ಅಗ್ನಿಗಾಹುತಿ­ಯಾದ ಪ್ರದೇಶ ಜನ ಸಂಚಾರಕ್ಕೆ ಅಮಾಸೆಬೈಲು ಪೊಲೀಸರು ಮತ್ತು ನಗರ ಪೊಲೀಸರು ಸ್ಥಳಕ್ಕೆ ಬಂದು ಘಟನಾ ಸ್ಥಳದಿಂದ 1 ಕಿ.ಮೀ. ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ವಾಹನಗಳನ್ನು ನಿಟ್ಟೂರು ಘಾಟಿ–ಕೊಲ್ಲೂರು ಮೂಲಕ ಕಳುಹಿಸಲಾಗಿತ್ತು. ಘಟನಾ ಸ್ಥಳಕ್ಕೆ ಅಮಾಸೆಬೈಲು ಪೊಲೀಸ್ ಠಾಣಾಧಿಕಾರಿ ನಾಸೀರ್ ಹುಸೇನ್, ನಗರ ಪೊಲೀಸ್ ಠಾಣಾಧಿಕಾರಿ ಗಣಪತಿ  ಸಿಬ್ಬಂದಿ ಆಗಮಿಸಿದ್ದರು.
    ಘಟನೆ ನಡೆದ ಪ್ರದೇಶ ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಗಡಿ ಪ್ರದೇಶವಾಗಿ­ರುವುದರಿಂದ ಎರಡು ಜಿಲ್ಲೆಯ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಪ್ರಯತ್ನಿ­ಸುತ್ತಿದ್ದಾರೆ.

ಬೇಜವಾಬ್ದಾರಿ ಕಾರಣ
ಸ್ಫೋಟವು ಸಾರ್ವಜನಿಕರನ್ನು ತಲ್ಲಣ­ಗೊಳಿಸಿದ್ದು, ಅಡುಗೆ ಅನಿಲ ಜಾಡಿಗಳು ಹಳೆಯದಾಗಿದ್ದು ಅವುಗಳನ್ನು ಏಜೆನ್ಸಿಗಳು ಬದಲಿಸಿಲ್ಲ. ಇದರಿಂದ ಹಳೆಯ ಅನಿಲಜಾಡಿಗಳು ಸೋರಿಕೆಯಾಗಿದ್ದು ಪ್ರಕರಣವನ್ನು  ಅನಿಲ ವಿತರಕ ಏಜೆನ್ಸಿಗಳು ಮತ್ತು ಅಧಿಕಾರಿಗಳು ನೇರ ಹೊಣೆಯಾಗಿದ್ದಾರೆ. ಬಹುತೇಕ ಲಾರಿಗಳಲ್ಲಿ ನಿರ್ವಾಹಕರು ಇರುವುದಿಲ್ಲ. ಇದರಿಂದಾಗಿ ದುರಂತ ತಪ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com