ಭಟ್ಕಳ: ಇಲ್ಲಿನ ಹಳೆ ಬಸ್ಸ್ಟ್ಯಾಂಡ್ ಬಳಿ ಇರುವ ನಾಗರ ಬನದ ಪಕ್ಕದಲ್ಲಿ ದುಷ್ಕರ್ಮಿಗಳು ಶನಿವಾರ ತಡರಾತ್ರಿ ದನದ ಮಾಂಸದ ತುಂಡುಗಳನ್ನು ಎಸೆದು ಹೋಗಿದ್ದರಿಂದ ಭಾನುವಾರ ಬೆಳಗ್ಗೆಯಿಂದಲೇ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಬೆಳಗ್ಗೆ ಬನಕ್ಕೆ ಹೋದ ಸಾರ್ವಜನಿಕರು ಮಾಂಸದ ತುಂಡು ಬಿದ್ದಿರುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ನೂರಾರು ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ಪ್ರಕ್ಷುಬ್ಧ ವಾತಾವರಣ ಉಂಟಾಯಿತು. ವಿಷಯ ತಿಳಿದ ಪೊಲೀಸರು ಕೂಡಲೇ ಮಾಂಸದ ತುಂಡುಗಳನ್ನು ತೆರವುಗೊಳಿಸಿ ಸಾರ್ವಜನಿಕರನ್ನು ಚದುರಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನಾಗರಬನದ ಸುತ್ತು ಬಿಗು ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ನಗರ ಠಾಣೆಗೆ ಭೇಟಿ ನೀಡಿ ದೇವಸ್ಥಾನದ ಪಾವಿತ್ರ್ಯತೆಯನ್ನು ಹಾಳುಮಾಡಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.