ಪತ್ನಿ ಜತೆ ಸೇರಿ ತಂಗಿಗೇ ಕಿರುಕುಳ ನಿಡುತ್ತಿದ್ದ ಅಣ್ಣ

ಕಾಪು: ಒಡಹುಟ್ಟಿದ ಅಣ್ಣನೇ ತನ್ನ ಹೆಂಡತಿಯೊಂದಿಗೆ ಸೇರಿ ತನ್ನ ತಂಗಿಗೆ ಹೊಡೆದು ಬಡಿದು, ಕೈಕಾಲಿಗೆ ಬಿಸಿ ಬರೆ ಹಾಕಿ, ಊಟ ಕೊಡದೇ ಉಪವಾಸ ಕೆಡವಿ ಅಮಾನುಷವಾಗಿ ನಡೆಸಿಕೊಂಡ ಘಟನೆ ಕಾಪು ಠಾಣೆ ವ್ಯಾಪ್ತಿಯ ಇನ್ನಂಜೆ ಗ್ರಾಮದ ಮಡುಂಬು ಎಂಬಲ್ಲಿ ಬೆಳಕಿಗೆ ಬಂದಿದೆ.
 ಈ ವಿಷಯ ತಿಳಿದ ಸ್ಥಳೀಯ ಗ್ರಾಮಸ್ಥರು ಸಂತ್ರಸ್ತ ಮಹಿಳೆ ರೇವತಿ (35)ಯನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಹೋದರ ನಿತ್ಯಾನಂದ ಮತ್ತು ಅತ್ತಿಗೆ ಭವಾನಿ ವಿರುದ್ಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವಿವಾಹಿತ ನತದೃಷ್ಟೆ: ಮಡುಂಬು ನಿವಾಸಿ ದಿವಂಗತ ಕೆ.ಪಿ. ಸುವರ್ಣ- ಗುಡ್ಡಿ ಸುವರ್ಣ ದಂಪತಿಯ 3 ಗಂಡು ಮತ್ತು 4 ಹೆಣ್ಣು ಮಕ್ಕಳಲ್ಲಿ ರೇವತಿ ಕೊನೆಯವರು. 8ನೇ ತರಗತಿಯವರೆಗೆ ಶಿಕ್ಷಣ ಪಡೆದಿರುವ ರೇವತಿ ಅವರನ್ನು ಹೊರತು ಪಡಿಸಿ ಉಳಿದವರೆಲ್ಲರಿಗೂ ಮದುವೆಯಾಗಿದೆ. ಕಟ್ಟಡ ಮೇಸ್ತ್ರಿ ಕೆಲಸ ಮಾಡುವ ಸಹೋದರ ನಿತ್ಯಾನಂದ ಅವರೊಂದಿಗೆ ರೇವತಿ ವಾಸಿಸುತ್ತಿದ್ದಾರೆ. ಎಲ್ಲ 7 ಮಂದಿ ಮಕ್ಕಳಿಗೂ ಹೆತ್ತವರ ಆಸ್ತಿ ಪಾಲಾಗಿದ್ದು, ರೇವತಿ ಪಾಲಿಗೆ ಬಂದ ಆಸ್ತಿಯನ್ನೂ ನಿತ್ಯಾನಂದರೇ ಅನುಭವಿಸುತ್ತಿದ್ದಾರೆ.
ಅತ್ತಿಗೆ ಬಂದ ಮೇಲೆ ಶುರುವಾಯ್ತು ನರಕದ ಬದುಕು: 'ಆರಂಭದಲ್ಲಿ ಅಣ್ಣ- ತಂಗಿ ಅನ್ಯೋನ್ಯವಾಗಿಯೇ ಇದ್ದು ಯಾವುದೇ ತೊಂದರೆ ಇರಲಿಲ್ಲ. ಆದರೆ ಏಳೆಂಟು ವರ್ಷಗಳ ಹಿಂದೆ ಅಣ್ಣ ಮದುವೆಯಾದ ಮೇಲೆ ತನಗೆ ಕಿರುಕುಳ ಆರಂಭವಾಯಿತು. ಆದರೂ ನನಗ್ಯಾರೂ ಇಲ್ಲ ಎಂಬ ಕಾರಣಕ್ಕೆ ಅದನ್ನೆಲ್ಲ ಸಹಿಸಿಕೊಂಡೆ, ಕೆಲಸದವರಿಗಿಂತಲೂ ಹೆಚ್ಚಾಗಿ ಮನೆಯ ಎಲ್ಲ ಕೆಲಸವನ್ನು ಮಾಡುತ್ತಿದ್ದೆ. ಇತ್ತೀಚೆಗೆ 2 ವರ್ಷಗಳಿಂದ ಅಣ್ಣ- ಅತ್ತಿಗೆ ದೈಹಿಕ ಹಿಂಸೆ ನೀಡಲಾರಂಭಿಸಿದರು. ಕೆಲ ದಿನಗಳ ಹಿಂದೆ ಬಿಸಿ ದೋಸೆ ಕಾವಲಿಯಿಂದ ಮೈಕೈ ಸುಟ್ಟಿದ್ದಾರೆ' ಎಂದು ರೇವತಿ ತಮ್ಮ ಮೈಮೇಲಿನ ಗಾಯಗಳನ್ನು ತೋರಿಸುತ್ತಾರೆ.
 ಊಟ ಕೊಡುವುದಿಲ್ಲ, ಒಂದು ಹಿಡಿ ಅಕ್ಕಿ ಕೊಡುತ್ತಾರೆ, ಅದನ್ನು ನಾನೇ ಬೇಯಿಸಿ ತಿನ್ನಬೇಕು, ಪಲ್ಯ ನೀಡುವುದಿಲ್ಲ, ಬರಿ ಅನ್ನ ತಿನ್ನಬೇಕು, ಕೆಲವೊಮ್ಮೆ ಅದನ್ನೂ ನೀಡುವುದಿಲ್ಲ ಎಂದ ರೇವತಿ, ಬುಧವಾರ ಗ್ರಾಮಸ್ಥರು ಅವರನ್ನು ಮನೆಯಿಂದ ಬಿಡುಗಡೆಗೊಳಿಸಿದಾಗ ಆಕೆ ಮೊದಲು ಕೇಳಿದ್ದು 'ಹಸಿವಾಗಿದೆ ಊಟ ಕೊಡಿ' ಎಂದು.
 ರೇವತಿ ಅನುಭವಿಸುತ್ತಿದ್ದ ಕಷ್ಟ ನೋಡಲಾರದೆ ನಾವು ಆಕೆಗೆ ಊಟ, ಪಲ್ಯ, ತಿಂಡಿ ಕೊಟ್ಟರೆ ಅದನ್ನು ಆಕೆಯ ಅತ್ತಿಗೆ ಕಸಿದುಕೊಂಡು ಹೊರಗೆ ಎಸೆಯುತ್ತಿದ್ದರು ಎನ್ನುತ್ತಾರೆ ಮನೆಯ ಪಕ್ಕದ ಮಹಿಳೆ ಶಾಂತಮ್ಮ.
ರೇವತಿಗೆ ಮನೆಯಲ್ಲಿ ತೀರಾ ಹರಿದ, ಮೈ ತೋರುವ ಬಟ್ಟೆ ನೀಡಲಾಗುತ್ತಿತ್ತು. ಏಕೆಂದರೆ ಇಂಥ ಬಟ್ಟೆ ತೊಟ್ಟು ಆಕೆ ಎಲ್ಲಿಯೂ ಹೋಗುವುದಿಲ್ಲ, ಮನೆಯಲ್ಲಿಯೇ ಬಿದ್ದುಕೊಂಡಿರುತ್ತಾಳೆ ಎನ್ನುವುದು ಮನೆಯವರ ಉಪಾಯವಾಗಿದೆ ಎನ್ನುತ್ತಾರೆ ಆಕೆಗೆ ಸಾಂತ್ವನ ಹೇಳಲು ಆಸ್ಪತ್ರೆಗೆ ಬಂದಿದ್ದ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ. ಇದನ್ನು ರೇವತಿ ಕೂಡ ಒಪ್ಪಿಕೊಳ್ಳುತ್ತಾರೆ.
 ಮಾನಸಿಕವಾಗಿ ತೀರಾ ಕುಗ್ಗಿ ಹೋಗಿರುವ ರೇವತಿ ಮನೆಯ ಹೊರಗಿನ ಒಂದು ಕೊಠಡಿಯಲ್ಲಿ ಅನಾರೋಗ್ಯ ಪೀಡಿತರಾಗಿ ಬಿದ್ದುಕೊಂಡಿದ್ದರು ಎನ್ನುತ್ತಾರೆ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ ಸ್ಥಳೀಯರು.
 ಸ್ಥಳೀಯ ಗ್ರಾಪಂ ಅಧ್ಯಕ್ಷ ದಿನೇಶ್ ಶೆಟ್ಟಿ, ಜಿಪಂ ಸದಸ್ಯ ಅರುಣ ಕುಮಾರ್ ಶೆಟ್ಟಿ ಮುಂತಾದವರು ಆಕೆಯ ಈ ಸ್ಥಿತಿಗತಿಗೆ ಕಾರಣರಾದ ಅಣ್ಣ ನಿತ್ಯಾನಂದ ಮತ್ತು ಅತ್ತಿಗೆ ಭವಾನಿ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ. ಕಾಪು ಠಾಣಾಧಿಕಾರಿ ಅರ್ಚನಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com