ಕೆದೂರು: ಕೆದೂರು ಗ್ರಾ.ಪಂ ವ್ಯಾಪ್ತಿಯ ರೈಲ್ವೆ ಮೇಲ್ಸೇತುವೆ ಬಳಿ ಶನಿವಾರ ಕಳೆದ ರಾತ್ರಿ ಚಲಿಸುತ್ತಿದ್ದ ರೈಲಿನಡಿಗೆ ಸಿಲುಕಿ ಓರ್ವ ಮೃತಪಟ್ಟ ಘಟನೆ ರವಿವಾರ ಮುಂಜಾನೆ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಅಂಪಾರು ಸಮೀಪದ ಹಳ್ನಾಡು ನಿವಾಸಿ ಸುರೇಶ್ ಶೆಟ್ಟಿ ( 39) ಎಂದು ಗುರುತಿಸಲಾಗಿದ್ದು , ತನ್ನ ಪತ್ನಿ ಮನೆ ಮೂಡು ಕೆದೂರಿಗೆ ಹೋಗುವಾಗ ಆಕಸ್ಮಿಕವಾಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. .
ರೈಲು ಢಿಕ್ಕಿಯಾದ ತೀವ್ರತೆಗೆ ಮುಖ ಹಾಗೂ ಕೈ ಕಾಲು ಸಂಪೂರ್ಣ ಛಿದ್ರವಾಗಿದ್ದು ಗುರುತಿಸಲಾಗದ ರೀತಿಯಲ್ಲಿ ರಕ್ತಸಿಕ್ತವಾಗಿ ರೈಲ್ವೆ ಹಳಿಯ ಬದಿಯಲ್ಲಿ ಬಿದ್ದಿತ್ತು .ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ನೆರೆದಿದ್ದ ಗ್ರಾಮಸ್ಥರು : ಘಟನೆ ತಿಳಿಯುತ್ತಿದ್ದ ಗ್ರಾಮ ನೂರಾರು ಗ್ರಾಮಸ್ಥರು ಘಟನಾ ಸ್ಥಳಕ್ಕೆ ಧಾವಿಸಿ ದಿಗ್ಬಾಂತರಾಗಿ ವೀಕ್ಷಿಸುತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕುಂದಾಪುರ ತಾ.ಪಂ ಸದಸ್ಯ ಕೆದೂರು ಸದಾನಂದ ಶೆಟ್ಟಿ, ಕೆದೂರು ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಹೆಗ್ಡೆ, ಸೀತಾರಾಮ ಶೆಟ್ಟಿ, ಸತೀಶ್ ಕುಮಾರ್ ಶೆಟ್ಟಿ, ಸ್ಥಳೀಯ ಯುವಕ ಮಮಡಲದ ಅಧ್ಯಕ್ಷ ಸುಕುಮಾರ ಶೆಟ್ಟಿ ಮೊದಲಾದವರು ಭೇಟಿ ನೀಡಿದರು.
ಕೋಟ ಪೋಲಿಸ್ ಠಾಣಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಅತ್ಯಂತ ಅಪಾಯಕಾರಿ ಸ್ಥಳ : ಕೆದೂರು ರೈಲ್ವೆ ಬ್ರಿಜ್ ಸಮೀಪದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗು ನೂರಾರು ಗ್ರಾಮಸ್ಥರು ರೈಲ್ವೆ ಹಳಿ ಮೇಲೆ ದಿನ ನಿತ್ಯ ಹಾದು ಹೋಗಬೇಕಾದ ಅನಿವಾರ್ಯತೆ ಇದೆ. ಇಲ್ಲಿನ ಪರಿಸರ ಗ್ರಾಮೀಣ ಭಾಗದ ನೂರಾರು ಮುಗ್ಧ ವಿದ್ಯಾರ್ಥಿಗಳು ರೈಲು ಸಂಚರಿಸುವ ಈ ಅಪಾಯಕಾರಿ ಮಾರ್ಗದ ನಡುವೆ ಶಾಲೆಗೆ ತೆರಳಬೇಕಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕಾದ ಅನಿವಾರ್ಯತೆ ಇದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.