ಕುಂದಾಪುರ: ಊರು ಬಿಟ್ಟು ಪರ ಊರಿಗೆ ಬಂದ ವ್ಯಕ್ತಿಯೋರ್ವ ವಿಪರೀತ ಮಳೆಯಿಂದಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ರಾತ್ರಿ ಸಂಭವಿಸಿದ್ದು ಶುಕ್ರವಾರ ಬೆಳಿಗ್ಗೆ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಕೊಮೆ ಶಾಲೆ ರಸ್ತೆಯ ಸಮೀಪವೊಂದರ ಕೆರೆಯಲ್ಲಿ ಘಟನೆ ಸಂಭವಿಸಿದೆ.ಕೋಡಿ-ಕನ್ಯಾನ(ಪಾರಂಪಳ್ಳಿ) ನಿವಾಸಿ ಬಾಬಣ್ಣ ಪೂಜಾರಿ (೫೬) ಮೃತ ದುರ್ದೈವಿ.
ಘಟನೆ ವಿವರ: ಕೋಡಿ-ಕನ್ಯಾನದ ತಮ್ಮ ನಿವಾಸದಿಂದ ಬಾಬಣ್ಣ ಪೂಜಾರಿ ಬುಧವಾರ ಸಂಜೆ ಗಣೇಶ ವಿಸರ್ಜನಾ ಮೆರವಣಿಗೆಗೆ ತೆರಳುವುದಾಗಿ ಪತ್ನಿಯ ಬಳಿ ತಿಳಿಸಿ ಬಂದಿದ್ದರು ಎನ್ನಲಾಗಿದ್ದು, ಆ ದಿನ ರಾತ್ರಿಯಿಂದ ಪುನಃ ಮನೆಗೆ ತೆರಳದೇ ಕಾಣೆಯಾಗಿದ್ದು ಪತ್ನಿ ಹಾಗೂ ಸಂಭಂದಿಕರು ಎಲ್ಲೆಡೇ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಶುಕ್ರವಾರ ಕೊಮೆ ಶಾಲೆಗೆ ತೆರಳುವ ರಸ್ತೆ ಸಮೀಪದಲ್ಲಿನ ಕೆರೆಯೊಂದರಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬಂದು ಪರಿಶೀಲಿಸಿದ ಬಳಿಕ ಮೃತಪಟ್ಟ ವ್ಯಕ್ತಿಯೇ ಬಾಬಣ್ಣ ಪೂಜಾರಿ ಎಂದು ಖಚಿತವಾಗಿದೆ.
ಜನಪ್ರತಿನಿಧಿಯ ಮಾನವೀಯತೆ: ಕೆರೆಯಲ್ಲಿ ಶವ ತೇಲುತ್ತಿರುವುದನ್ನು ಸ್ಥಳೀಯರು ಕುತೂಹಲದಿಂದ ವೀಕ್ಷಿಸುತ್ತಿದ್ದರೇ ಹೊರತು ಅದನ್ನು ಮೇಲಕ್ಕೆತ್ತುವ ಕಾರ್ಯಕ್ಕೆ ಯಾರು ಮುಂದಾಗಲಿಲ್ಲ, ಇದೇ ಕ್ಷಣಕ್ಕೆ ಸ್ಥಳಕ್ಕಾಗಮಿಸಿದ ಜಿಲ್ಲಾಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್ ಕೆರೆಗಿಳಿದು ಶವವನ್ನು ಮೇಲಕ್ಕೆತ್ತಿದರು. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.