ಒಂದೇ ತಿಂಗಳಲ್ಲಿ 17 ದನಗಳ ಅಪಹರಣ

ಕುಂದಾಪುರ: ನಾಡಾ ಗ್ರಾಮ ಪಂಚಾಯತ್‌ ವ್ಯಾಪ್ತಿಯ ನಾಡಾ, ಗುಡ್ಡೆಹೋಟೆಲ್‌, ಕೋಣಿ ಮೊದಲಾದೆಡೆ ಹಾಡಹಗಲೇ ದನಗಳನ್ನು ಕದ್ದೊಯ್ಯುವವರ ಹಾವಳಿ ಹೆಚ್ಚಿದ್ದು, ಜನತೆ ತಲ್ಲಣಗೊಂಡಿದ್ದಾರೆ.

ಮೇಯಲು ಬಿಟ್ಟಿರುವ ದನಗಳ ಅಪಹರಣ, ಮನೆಯ ಹಟ್ಟಿಗೇ ಬಂದು ದನಗಳನ್ನು ತಮಗೆ ಮಾರಾಟ ಮಾಡುವಂತೆ ಒತ್ತಾಯಿಸುವುದು. ಕೊಡದಿದ್ದಲ್ಲಿ ರಾತ್ರಿ ವೇಳೆ ಬಂದು ದನಗಳನ್ನು ಕದ್ದೊಯ್ಯುವುದು, ದನಸಾಗಾಟ ತಡೆಯಲು ಬಂದವರಿಗೆ ಬೆದರಿಸುವುದು ಮುಂತಾದ ವಿದ್ಯಮಾನಗಳಿಂದ ನಾಡಾ ಸುತ್ತಮುತ್ತಲಿನ ಜನತೆ ಭಯಭೀತರಾಗಿದ್ದಾರೆ.

ಒಂದು ತಿಂಗಳಿನಿಂದ ನಾಡಾದಲ್ಲಿ ದನ ಕಳ್ಳರು ರಾಜಾರೋಷವಾಗಿ ದನಗಳನ್ನು ಕದ್ದು ಸಾಗಿಸುತ್ತಿದ್ದು, ಇದುವರೆಗೆ ಇಲ್ಲಿಂದ ಹದಿನೇಳಕ್ಕೂ ಹೆಚ್ಚು ದನಗಳನ್ನು ಅಪಹರಿಸಲಾಗಿದೆ ಎಂದು ದನಗಳ ಮಾಲಕರು ತಿಳಿಸಿದ್ದಾರೆ.

ತಲವಾರು ತೋರಿಸಿ ಬೆದರಿಕೆ

ಆಗಸ್ಟ್‌ 1ರಂದು ಕೋಣಿಯ ಬೇಬಿ ಶೆಟ್ಟಿ ಅವರಿಗೆ ಸೇರಿದ ಹಸುವೊಂದನ್ನು ಮೇಯುತ್ತಿದ್ದಾಗ ಅಪಹರಿಸಲಾಗಿದೆ. ಹಾಲು ನೀಡುವ ಈ ಹಸು ಕರು ಹಾಕಿ ಕೇವಲ ಐದು ದಿನಗಳಾಗಿದ್ದು, ಕರುವಿಗೆ ಹಾಲಿಲ್ಲದಂತಾಗಿದೆ. ಗುಡ್ಡೆಹೋಟೆಲ್‌ ಪರಿಸರದಲ್ಲಿನ ಒಂಬತ್ತು ಹಸುಗಳು ದನಗಳ್ಳರ ಪಾಲಾಗಿವೆ. ಗುಡ್ಡೆಹೋಟೆಲ್‌ನಲ್ಲಿ ದನಗಳನ್ನು ಕದ್ದು ಸಾಗಿಸುತ್ತಿದ್ದವರನ್ನು ತಡೆಯಲು ಯತ್ನಿಸಿದ ಸ್ಥಳೀಯ ರಿûಾ ಚಾಲಕರಿಗೆ ದನಗಳ್ಳರು ತಲವಾರು ತೋರಿಸಿ ಬೆದರಿಸಿದ ಘಟನೆಯೂ ನಡೆದಿದೆ ಎನ್ನಲಾಗಿದೆ.

ದೂರು ನೀಡಲು ಹಿಂಜರಿಕೆ

ನಾಡಾದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ದನಗಳ ಕಳ್ಳತನ ನಡೆದಿದ್ದರೂ ದನಗಳನ್ನು ಕಳೆದುಕೊಂಡ ಯಾರೊಬ್ಬರೂ ಸ್ಥಳೀಯ ಪೊಲೀಸರಿಗೆ ದೂರು ನೀಡಿಲ್ಲ. ಈ ಬಗ್ಗೆ ಜನರನ್ನು ವಿಚಾರಿಸಿದರೆ ದೂರು ನೀಡಲು ಹೋದರೆ ಪೊಲೀಸರು ನೂರಾರು ಪ್ರಶ್ನೆ ಕೇಳುತ್ತಾರೆ. ಸಾಕ್ಷಿ ಸಮೇತ ಬನ್ನಿ ಎನ್ನುತ್ತಾರೆ. ಎಲ್ಲಕ್ಕಿಂತ ವಿಚಿತ್ರವೆಂದರೆ ಜುಲೈ 26ರಂದು ನಾಡಾ ಪೇಟೆಯಲ್ಲಿ ದನಗಳನ್ನು ಕದ್ದು ಸಾಗಿಸುವವರ ಬಗ್ಗೆ ಪೊಲೀಸರಿಗೆ ನಿಖರ ಮಾಹಿತಿ ನೀಡಿದವರನ್ನೇ ಗಂಗೊಳ್ಳಿ ಪೊಲೀಸರು ಠಾಣೆಗೆ ಕರೆಯಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ದನ ಕಳ್ಳರಿಗೇ ಸಹಕರಿಸುತ್ತಿದ್ದಾರೇನೋ ಎಂಬ ಅನುಮಾನ ಮೂಡಿಸುವ ಗಂಗೊಳ್ಳಿ ಪೊಲೀಸರ ಮರ್ಜಿಯಿಂದ ನಾಡಾ ಪರಿಸರದ ಜನರು ತಮ್ಮ ಕಳವಾದ ದನಗಳನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು ನೀಡದೇ ಸುಮ್ಮನೆ ಉಳಿದಿದ್ದಾರೆ.

ಸೈರನ್‌ ಅಳವಡಿಕೆಗೆ ಚಿಂತನೆ

ಏತನ್ಮಧ್ಯೆ ದನಗಳ್ಳರ ಹಾವಳಿ ತಡೆಯಲು ನಾಡಾ ಪರಿಸರದ ಜನತೆ ತಮ್ಮದೇ ಆದ ರಕ್ಷಣಾ ಉಪಾಯ ಕಂಡುಕೊಂಡಿದ್ದಾರೆ. ಗೋ ಅಪಹರಣಕಾರರ ಭೀತಿಯಿಂದ ಕಂಗಾಲಾದ ಸುರತ್ಕಲ್‌ ಸಮೀಪದ ಮುಕ್ಕದ ಹೈನುಗಾರರು ತಮ್ಮ ಹಟ್ಟಿಗಳ ಭದ್ರತೆಗೆ ಬೀಗ ಅಳವಡಿಸಿದ್ದು, ಹಸುಗಳ ಕೊರಳಿಗೆ ಸರಪಳಿ ಬಿಗಿದಿದ್ದಾರೆ. ನಾಡಾದ ಹೈನುಗಾರರು ತಮ್ಮ ಹಟ್ಟಿಗಳಿಗೆ ಸೈರನ್‌ ವ್ಯವಸ್ಥೆ ಅಳವಡಿಸುವ ಕುರಿತು ಚಿಂತನೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಕೃಪೆ: ಚಂದ್ರ ಕೆ. ಹೆಮ್ಮಾಡಿ, ಉದಯವಾಣಿ

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com