ಉಡುಪಿ: ಎರಡು ತಿಂಗಳ ಹಿಂದೆ ಮಣಿಪಾಲ ವಿವಿ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಮೂವರು ಆರೋಪಿಗಳ ಪರ ವಾದ ಮಂಡಿಸಲು ಉಡುಪಿಯ ಯಾವ ವಕೀಲರು ಮುಂದೆ ಬಂದಿಲ್ಲ.
ಆರೋಪಿಗಳಾದ ಯೋಗೀಶ್ ಪೂಜಾರಿ, ಹರಿಪ್ರಸಾದ್ ಪೂಜಾರಿ ಹಾಗೂ ಆನಂದ ಪಾಣಾರ ಜೂ.20ರಂದು ಮಧ್ಯರಾತ್ರಿ ಮಣಿಪಾಲ ವಿವಿ ಪರಿಸರದಿಂದ ವೈದ್ಯ ವಿದ್ಯಾರ್ಥಿನಿಯನ್ನು ಆಟೋದಲ್ಲಿ ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು. ಇಬ್ಬರು ಆರೋಪಿಗಳು ತಪ್ಪಿಸಿಕೊಳ್ಳುವುದಕ್ಕೆ ಬಾಲಚಂದ್ರ ಪೂಜಾರಿ ಮತ್ತು ಹರೀಂದ್ರ ಪೂಜಾರಿ ಸಹಾಯ ಮಾಡಿದ್ದರು ಎಂದು ದೂರು ದಾಖಲಾಗಿದೆ.
ಈ ಪೈಕಿ ಬಾಲಚಂದ್ರ ಮತ್ತು ಹರೀಂದ್ರ ಪರವಾಗಿ ವಕೀಲರೊಬ್ಬರು ವಾದ ನಡೆಸುತ್ತಿದ್ದಾರೆ. ಆದರೆ ಘಟನೆ ನಡೆದು ಎರಡು ತಿಂಗಳು ಕಳೆದಿದ್ದರೂ ಅತ್ಯಾಚಾರ ಆರೋಪಿಗಳ ಪರವಾಗಿ ವಾದ ಮಾಡುವುದಕ್ಕೆ ಯಾವ ವಕೀಲರು ಅರ್ಜಿ ಸಲ್ಲಿಸಿಲ್ಲ.
ಮತ್ತೆ ನ್ಯಾಯಾಂಗ ಬಂಧನ: ಎಲ್ಲ ಆರೋಪಿಗಳನ್ನು ತನಿಖಾಧಿಕಾರಿ, ಮಣಿಪಾಲ ಎಸ್ಐ ಸದಾನಂದ ತಿಪ್ಪಣ್ಣನವರ್ ಸೋಮವಾರ ಮತ್ತೆ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ನಾಗಜ್ಯೋತಿ ಅವರು ಆರೋಪಿಗಳಿಗೆ 5 ದಿನಗಳ ಕಾಲ (ಆ.30ರವರೆಗೆ) ನ್ಯಾಯಾಂಗ ಬಂಧನ ವಿಧಿಸಿದರು. ಇದು ಈ ಆರೋಪಿಗಳಿಗೆ ವಿಧಿಸಲಾದ 5ನೇ ನ್ಯಾಯಾಂಗ ಬಂಧನವಾಗಿದೆ.
ಪ್ರಕರಣದ ಬಗ್ಗೆ ಆ.22ರಂದು ತನಿಖಾಧಿಕಾರಿ ಸದಾನಂದ ತಿಪ್ಪಣ್ಣನವರ್ ವಿವರವಾದ 600 ಪುಟಗಳಿಗೂ ಮೀರಿದ ಚಾರ್ಜ್ಶೀಟನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಸ್ತುತ ಪ್ರಕರಣ ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ವಿಚಾರಣೆಗಾಗಿ ಜಿಲ್ಲಾ ಸತ್ರ (ಸೆಷನ್ಸ್) ನ್ಯಾಯಾಲಯಕ್ಕೆ ವರ್ಗಾವಣೆಗೊಳ್ಳಬೇಕಾಗಿದೆ. ಆ.30ರಂದು ಆರೋಪಿಗಳನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿದ್ದು, ಅಂದು ಪ್ರಕರಣ ಸತ್ರ ನ್ಯಾಯಾಲಯಕ್ಕೆ ವರ್ಗವಾಗಬಹುದು ಎಂದು ಸರ್ಕಾರಿ ಅಭಿಯೋಜಕ ಜಿ. ಎಸ್. ಜಿತೂರಿ ಅಭಿಪ್ರಾಯಪಟ್ಟಿದ್ದಾರೆ.
ಆರೋಪಿಗಳ ಮುಖ ದರ್ಶನ
ತನಿಖೆಯ ಪ್ರಕ್ರಿಯೆಗೆ ಅತ್ಯಗತ್ಯವಾಗಿದ್ದ ಐಡೆಂಟಿಟಿ ಪರೇಡ್ (ಆರೋಪಿಗಳನ್ನು ಅತ್ಯಾಚಾರಕ್ಕೊಳಗಾಗಿದ್ದ ವಿದ್ಯಾರ್ಥಿನಿ ಗುರುತಿಸುವ) ಪ್ರಕ್ರಿಯೆ ಆಗದ ಹಿನ್ನೆಲೆಯಲ್ಲಿ ಈ ಹಿಂದೆ 2 ತಿಂಗಳಲ್ಲಿ 5 ಬಾರಿ ನ್ಯಾಯಾಲಯಕ್ಕೆ ಅತ್ಯಾಚಾರ ನಡೆಸಿದ 3 ಮಂದಿ ಆರೋಪಿಗಳನ್ನು ಕರೆ ತಂದಾಗಲೂ ಆರೋಪಿಗಳ ಮುಖವನ್ನು ಸಾರ್ವಜನಿಕರಿಗೆ ತೋರಿಸದೆ ಕಪ್ಪು ಬಟ್ಟೆಯಿಂದ ಮುಚ್ಚಲಾಗುತ್ತಿತ್ತು. ಆದರೆ ಐಡೆಂಟಿಟಿ ಪರೇಡ್ಗೆ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ಒಪ್ಪದಿರುವುದರಿಂದ, ಪೊಲೀಸರು ವೈಜ್ಞಾನಿಕವಾಗಿ (ಡಿಎನ್ಎ ಪರೀಕ್ಷೆ ಮೂಲಕ) ಆರೋಪಿಗಳ ಗುರುತು ಪತ್ತೆ ಮಾಡಿದ್ದು, ಆ ವರದಿಯನ್ನು ಚಾರ್ಜ್ಶೀಟಿನೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಆರೋಪಿಗಳನ್ನು ಮುಖಕ್ಕೆ ಬಟ್ಟೆ ಮುಚ್ಚದೆ ಮುಕ್ತವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.