ಕುಂದಾಪುರ: ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಲ್ಯಾಡಿ ಮಾರ್ಗದ ಅನತಿ ದೂರದಲ್ಲಿರುವ ಕೊಜೆ ಹೊಂಡಕ್ಕೆ ಸ್ಥಳೀಯ ವೃದ್ದೆಯೋರ್ವರು ಹಸುಗಳಿಗೆ ಹುಲ್ಲು ತರಲು ಹೋದಾಗ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಆ.13 ರಂದು ಸಂಭವಿಸಿದೆ.
ಮೃತ ಮಹಿಳೆಯನ್ನು ಮೂಡು ತೆಕ್ಕಟ್ಟೆ ನಿವಾಸಿ ಗಿರಿಜಾ ಆಚಾರ್ಯ( 63) ಎಂದು ಗುರುತಿಸಲಾಗಿದೆ. ಶವ ಕೊಜೆ ಹೊಂಡದ ನೀರಿನ ಮಧ್ಯದಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದು ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಗುರುತಿಸಲಾಗದ ಸ್ಥಿತಿಯಲ್ಲಿತ್ತು.
ಘಟನೆಯ ವಿವರ: ಮೂಡು ತೆಕ್ಕಟ್ಟೆ ನಿವಾಸಿ ಜಲಜಾ ಆಚಾರ್ಯ ಹಲವು ವರ್ಷಗಳಿಂದಲೂ ಅತ್ಯಂತ ಬಡತನದಿಂದ ಕೂಲಿ ಮಾಡಿ ಜೀವನ ನಿರ್ವಹಿಸುತ್ತಾ ಒಬ್ಬರೇ ಮನೆಯಲ್ಲಿ ವಾಸವಾಗಿದ್ದರು ಆದರೆ ಕಳೆದ ಎರಡು ದಿನಗಳಿಂದಲೂ ಇವರು ಮನೆಯಲ್ಲಿದ್ದಿರುವುದು ಪರಿಸರದಲ್ಲಿ ಯಾರಿಗೂ ಗೋಚರವಾಗಲಿಲ್ಲ ಆದರೆ ಆ.13 ಮಂಗಳವಾರ ಮುಂಜಾನೆ ಮನೆಯ ಸ್ವಲ್ಪವೇ ದೂರದ ಗದ್ದೆಯ ಬದಿಯಲ್ಲಿರುವ ಕೊಜೆ ಹೊಂಡದಲ್ಲಿ ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಶವವನ್ನು ಗುರುತಿಸಿ ಕೋಟ ಸರಕಾರಿ ಶವಗಾರಕ್ಕೆ ಕೊಂಡೊಯ್ಯುವ ಮೂಲಕ ದಫನ್ ಮಾಡಿದರು.
ಸಾರ್ವಜನಿಕರ ಸ್ಪಂದನ : ಅಪಾಯಕಾರಿ ಕೊಜೆ ಹೊಂಡದ ನೀರಿನಲ್ಲಿ ತೇಲುತ್ತಿರುವ ಶವವನ್ನು ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಸ್ಥಳೀಯ ಯುವ ಕೃಷಿಕ ಶ್ರೀನಾಥ ಶೆಟ್ಟಿ ಸ್ಥಳೀಯರ ಸಹಕಾರದೊಂದಿಗೆ ಆಳವಾದ ನೀರಿನಲ್ಲಿ ಈಜಿಕೊಂಡು ಹೋಗುವ ಮೂಲಕ ಶವವನ್ನು ದಡಕ್ಕೆ ತರುವಲ್ಲಿ ಮಾನವೀಯವಾಗಿ ಸ್ಪಂದಿಸಿದರು. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯ ನೂರಾರು ಗ್ರಾಮಸ್ಥರು ಘಟನಾ ಸ್ಥಳದಲ್ಲಿ ನೆರೆದಿರುವ ದೃಶ್ಯ ಕಂಡುಬಂತು.
ಕೃಷಿ ಭೂಮಿ ಮಧ್ಯದಲ್ಲಿಯೇ ಗಣಿಗಾರಿಕೆ : ಅಪಾರ ಪ್ರಮಾಣದ ಫಲವತ್ತಾದ ಕೃಷಿ ಭೂಮಿಗಳ ಮಧ್ಯದಲ್ಲಿಯೇ ಕೊಜೆ ಗಣಿಗಾರಿಕೆ ನಡೆದಿದ್ದು ಮಳೆಗಾಲದಲ್ಲಿ ಹದಿನೈದು ಅಡಿ ಆಳವಾದ ಹೊಂಡಗಳು ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಗೋಚರವಾಗದ ರೀತಿಯಲ್ಲಿದೆ ಅಲ್ಲದೇ ಯಾವುದೇ ರೀತಿಯ ತಡೆ ಬೇಲಿಗಳಿಲ್ಲದ ಕಾರಣ ಇಂತಹ ಘಟನೆಗೆ ಕಾರಣವಾಗುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಕೋಟ ಪೋಲಿಸ್ ಠಾಣಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.