ಕುಂದಾಪುರ: ಕೊಲ್ಲೂರು ಠಾಣಾ ವ್ಯಾಪ್ತಿಯ ವಂಡ್ಸೆ ಗ್ರಾಮದ ಕೈಕಣ ಎಂಬಲ್ಲಿನ ಅರಣ್ಯದಲ್ಲಿ ಆ.10ರ ರಾತ್ರಿ ಮಿತ್ರದೊಡನೆ ಬೇಟೆಗಾಗಿ ತೆರಳಿದ್ದ ಯುವಕನೋರ್ವ ಬಂದೂಕಿನ ಗುಂಡಿಗೆ ಬಲಿಯಾಗಿ ಮೃತಪಟ್ಟ ಘಟನೆ ಸಂಭವಿಸಿದೆ.
ನೂಜಾಡಿ ನಿವಾಸಿ ದಿ| ಶೀನ ಆಚಾರ್ಯ ಅವರ ಆರು ಮಕ್ಕಳಲ್ಲಿ ಕೊನೆಯವರಾದ ಪ್ರಭಾಕರ ಆಚಾರ್ಯ (29) ಅವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಅವರು ಮನೆಯಲ್ಲಿರುವಾಗ ಶನಿವಾರ ರಾತ್ರಿ 8ಗಂಟೆಗೆ ತನ್ನ ಮೊಬೈಲ್ ಬಂದ ಕರೆಯಂತೆ ಮನೆಯಿಂದ ಬರ್ಮುಡ ಹಾಗೂ ಸಹೋದರನ ಜರ್ಕಿನ್ ಧರಿಸಿ ಈಗ ಬರುತ್ತೆನೆಂದು ಬೈಕ್ನಲ್ಲಿ ಹೊರಟು ಹೋಗಿದ್ದರು. ಮುಂಜಾನೆಯ ತನಕ ಆತ ಮನೆಗೆ ಹಿಂತಿರುಗಿ ಬಾರದಿದ್ದಾಗ ಗಾಬರಿಗೊಂಡ ಮನೆಯವರು ಆತನಿಗಾಗಿ ಹುಡುಕಲು ತೆರಳುವ ವೇಳೆ ಅಲ್ಲಿಗೆ ಆಗಮಿಸಿದ ಪೋಲೀಸರು ಆತ ಬಂದೂಕಿನ ಗುಂಡಿಗೆ ಬಲಿಯಾಗಿ ಮೃತಪಟ್ಟ ವಿಚಾರ ತಿಳಿಸಿದರು.
ಆಕಸ್ಮಿಕವಾಗಿ ತಗಲಿದ ಗುಂಡು : ಆರೋಪಿಗಳಾದ ನೂಜಾಡಿಯ ನಾಗರಾಜ ಯಾನೆ ನಾಗ ಪೂಜಾರಿ ಹಾಗೂ ಸುಂದರ ಪೂಜಾರಿಯವರು ಘಟನೆ ನಡೆದ ಕೆಲವು ಗಂಟೆಗಳ ನಂತರ ಕುಂದಾಪುರ ಪೋಲೀಸ್ ಠಾಣೆಗೆ ತೆರಳಿ ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿ ಮಿತ್ರ ಮೃತಪಟ್ಟಿರುವುದಾಗಿ ಹೇಳಿಕೆ ನೀಡಿ ಪೋಲೀಸರಿಗೆ ಶರಣಾಗಿದ್ದರು.
ಐವರು ಮಿತ್ರರು ಶಿಕಾರಿಗೆಂದು ವಂಡ್ಸೆ ಸಮೀಪದ ಕೈಕಣ ಎಂಬಲ್ಲಿನ ಕಾಡಿಗೆ ತೆರಳಿದ್ದ ಸಂದರ್ಭದಲ್ಲಿ ಹಾಡಿಯ ಇಳಿಜಾರಿನಲ್ಲಿ ಸಾಗುತಿದ್ದಂತೆ ಬಂದೂಕು ಹಿಡಿದವನ ಕಾಲುಜಾರಿ ಆ ಸಂದರ್ಭದಲ್ಲಿ ಆತನಿಂದ ಟ್ರಿಗರ್ ಅದಮುಲ್ಪಟ್ಟು ಅದರಿಂದ ಸಿಡಿದ ಗುಂಡು ಎದುರಿನಲ್ಲಿ ಸಾಗುತ್ತಿದ್ದ ಪ್ರಭಾಕರ ಆಚಾರ್ಯ ಅವರ ಸೊಂಟದ ಹಿಂಭಾಗ ಹಾಗೂ ಎದೆ ಪ್ರವೇಶಿಸಿದ ಕಾರಣ ಆತ ಮೃತಪಟ್ಟಿರುತ್ತಾನೆ ಎಂದು ಆರೋಪಿಗಳು ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಖಾಸಗಿ ಮೊಬೈಲ್ ಕಂಪೆನಿ ಉದ್ಯೋಗಿ : ಮೃತ ಪ್ರಭಾಕರ ಆಚಾರ್ಯ ನೂಜಾಡಿ ಹಾಗೂ ಹಕ್ಲಾಡಿಯಲ್ಲಿ ಪ್ರಾಥಮಿಕ -ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ, ನಾಡ ಐಟಿಐನಲ್ಲಿ ತಾಂತ್ರಿಕ ಶಿಕ್ಷಣ ಪೂರೈಸಿದ್ದರು. ಪ್ರಸುÂತ ಖಾಸಗಿ ಮೊಬೈಲ್ ಕಂಪೆನಿಯ ಉದ್ಯೋಗಿಯಾಗಿದ್ದು ಕಳೆದ ಹಲವು ವರ್ಷಗಳಿಂದ ಮೊಬೈಲ್ ಟವರ್ನ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.ಆತ ಕೆಲಸದ ವೇಳೆ ಮಧ್ಯರಾತ್ರಿ ಮನೆಗೆ ಬರುವುದು ಸಾಮಾನ್ಯವಾಗಿತ್ತು.
ಮದ್ಯದ ಬಾಟಲಿ ಪತ್ತೆ : ಅಲ್ಲೆ ಪಕ್ಕದಲ್ಲಿ ಮದ್ಯದ ಬಾಟಲಿ ಪತ್ತೆಯಾಗಿದ್ದು ಸ್ನೇಹಿತರು ಶಿಕಾರಿಗೆ ಅಣಿಯಾಗತ್ತಿದ್ದಂತೆ ಮದ್ಯ ಸೇವಿಸಿ ಕುಡಿತದ ಅಮಲಿನಲ್ಲಿ ಗುಂಡು ಹಾರಿತೆ? ಅಥವಾ ಆಕಸ್ಮಿಕವಾಗಿ ಗುಂಡು ತಗಲಿತೆ ಎಂಬುವುದು ಪೋಲೀಸ್ ಸಮಿತಿಯಿಂದ ತಿಳಿಯ ಬೇಕಾಗಿದೆ.
ಮತ್ತಿಬ್ಬರ ಬಂಧನ : ಈ ಘಟನೆಗೆ ಸಂಬಂಧಿಸಿದಂತೆ ಅವರೊಡನೆ ಶಿಕಾರಿಗೆ ತೆರಳಿದ್ದ ಆಲೂರಿನ ನಾಗರಾಜ ಯಾನೆ ರಾಜು ಪೂಜಾರಿ ಹಾಗೂ ನೂಜಾಡಿಯ ಸಂತೋಷ್ ಪೂಜಾರಿಯನ್ನು ಕೊಲ್ಲೂರು ಪೋಲೀಸರು ಬಂಧಿಸಿರುತ್ತಾರೆ. ಹದಿನೈದು ಫೀಟ್ ದೂರದಿಂದ ಗುಂಡು ಹಾರಿರುವುದಾಗಿ ಶಂಕಿಸಲಾಗಿದ್ದು ಸಿಂಗಲ್ ಬ್ಯಾರಲ್ ಮಜಲ್ ಲೋಡ್ ಬಂದೂಕನ್ನು ಬಳಸಲಾಗಿತ್ತು.
ಅಂಗಾತ ಬಿದ್ದ ಸ್ಥಿತಿಯಲ್ಲಿ ಶವಪತ್ತೆ : ಮುಖ್ಯರಸ್ಥೆಯ ಪಕ್ಕದಲ್ಲೇ ಕಾಡಿನಲ್ಲಿ ಶವಪತ್ತೆಯಾಗಿರುವುದು ಶವ ಅಂಗಾತ ಸ್ಥಿತಿಯಲ್ಲಿ ಬಿದ್ದಿರುವುದು ನಾನ ಊಹಪೋಹಗಳಿಗೆ ಕಾರಣವಾಗಿದೆ. ಅಸಹಜ ಸಾವಿನ ಸಂದರ್ಭದಲ್ಲಿ ಸುದ್ದಿಯಾಗಿರುವ ಗಾಳಿ ಸುದ್ದಿ ಇಲ್ಲಿಯು ಸಹ ತೆವಳಲು ಆರಂಭಿಸಿದ್ದು ಯುವತಿ ವಿಚಾರ ಹಣದ ಲೇವಾದೇವಿ ವಿಚಾರ ಹತ್ಯೆಗೆ ಕರಣವಾಗಿರಬಹುದೆಂಬ ರೋಚಕ ಗಾಳಿ ಮಾತು ಸದ್ದು ಮಾಡುತ್ತಿದೆ.
ಮಣಿಪಾಲದ ಫಾರೆನ್ಸಿಕ್ ತಜ್ಞರ ಆಗಮನ : ಈ ಒಂದು ಸಾವಿನ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಮಣಿಪಾಲದ ಫಾರೆನ್ಸಿಕ್ ವಿಭಾಗದ ವೈದ್ಯರು ಸ್ಥಳಕ್ಕೆ ಆಗಮಿಸಿ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಮಹಾಜರು ನಡೆಸಲು ಮಣಿಪಾಲಕ್ಕೆ ಒಯ್ಯಲಾಗಿದೆ.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ| ಬೋರಲಿಂಗಯ್ಯ , ಡಿವೈಎಸ್ಪಿ ಯಶೋಧಾ ಒಂಟಗೋಡಿ, ಸರ್ಕಲ್ ಇನ್ಸ್ಪೆಕ್ಟರ್ಗಳಾದ ಮಂಜುನಾಥ್ ಕೌರಿ, ಅರುಣ್ ನಾಯಕ್, ಎಸ್ಐಗಳಾದ ದೇವೇಂದ್ರ ಸಂಪತ್ಕುಮಾರ್ ಹಾಗೂ ಕ್ರೈ ಪೋಲಿಸ್ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ.
ಮೃತ ಶರೀರದ ಆಸುಪಾಸು ರಕ್ತ ಸಿಕ್ತ ಗುರುತು ಕಂಡು ಬರದೇ ಇರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಕೊಲೆ ಶಂಕೆ -ಸಂಬಂಧಿಕರ ದೂರು:
ಮೃತರ ಸಹೋದರ ಮಂಜುನಾಥ ಆಚಾರ್ಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತನ್ನ ತಮ್ಮ ಪ್ರಭಾಕರ ರಾತ್ರಿ ಮನೆಯಲ್ಲಿರುವಾಗ ಬಂದ ದೂರವಾಣಿ ಕರೆಯನ್ನು ಸ್ವಿಕರಿಸಿ ಬೈಕ್ನಲ್ಲಿ ಹೊರಟುಹೋಗಿದ್ದ . ಈತನಿಗೆ ಶಿಕಾರಿ ತೆರಳುವ ಹವ್ಯಾಸವಿತ್ತು. ಮರುದಿನ ಆತ ಗುಂಡು ತಗುಲಿ ಸಾವನ್ನಪ್ಪಿದ ಸುದ್ದು ದಿಗ್ಬÅಮೆ ಗೊಳಿಸಿದೆ. ನೆರಮನೆಯ ನಾಗರಾಜ ಪೂಜಾರಿ ಹಾಗೂ ಸುಂದರ ಪೂಜಾರಿ ಕೋವಿ ಹಿಡಿದುಕೊಂಡು ಕಾಡಿಗೆ ಶಿಕಾರಿ ಹೋಗಿದ್ದು, ವ್ಯಯಕ್ತಿಕ ದ್ವೇಷದಿಂದ ರಾತ್ರಿ ಕೋವಿಯಿಂದ ತಮ್ಮನನ್ನು ಗುಂಡಿಕ್ಕಿ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಸುಂದರ ಪೂಜಾರಿ ಬಂದೂಕು ಚಲಾಯಿಸಿದಾಗ ಗುಂಡು ತಗುಲಿ ಪ್ರಬಾಕರ ಆಚಾರ್ಯ ಮೃತಪಟ್ಟಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಪೊಲೀಸ್ ವಿಶೇಷ ತಂಡ ಆರೋಪಿಗಳ ತನಿಖೆ ನಡೆಸುತ್ತಿದ್ದಾರೆ.