ಕುಂಭಾಶಿ: ರಾ.ಹೆ 66 ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಸ್ವಾಗತ ಗೋಪುರ ಎದುರು ಬೈಕ್ಗೆ ಬಸ್ ಡಿಕ್ಕಿ ಯಾದ ಪರಿಣಾಮ ಬೈಕ್ ಚಾಲಕ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿ ಸಾವನಪ್ಪಿದ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ.
ಆನೆಗುಡ್ಡೆ ದೇವಸ್ಥಾನಕ್ಕೆ ತೆರಳುವ ಸಂದರ್ಭದಲ್ಲಿ ಹೈದರಾಬಾದ್ ನಿಂದ ಮಂಗಳೂರಿನತ್ತ ಸಾಗುತ್ತಿದ್ದ ವೋಲ್ವೋ ಬಸ್ ನೇರವಾಗಿ ಬಂದು ಬೈಕ್ಗೆ ಢಿಕ್ಕಿಯಾದ ಪರಿಣಾಮವಾಗಿ ಬೈಕ್ ಚಾಲಕ ವಿ.ಎನ್. ನಾಗರಾಜ ( 40) ತಲೆ ರಸ್ತೆ ದ್ವಿಭಾಜಕಕ್ಕೆ ಹೊಡೆದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ತೀವ್ರತೆಗೆ ಬೈಕ್ ನುಜ್ಜು ಗುಜ್ಜಾಗಿದ್ದು ದುರದೃಷ್ಟವಶಾತ್ ಬೈಕ್ ಚಾಲಕನ ರಕ್ಷಾ ಕವಚ ( ಹೆಲ್ಮೆಟ್) ತಲೆಗೆ ತಲೆಗೆ ಗಂಭೀರ ಗಾಯಗೊಳ್ಳುವ ಮುನ್ನವೇ ರಸ್ತೆ ಬದಿಗೆ ಎಸೆಯಲ್ಪಟ್ಟಿತು.
ಮೃತ ದುರ್ದೈವಿ ವಿ.ಎನ್.ನಾಗರಾಜ್ ಬ್ರಹ್ಮಾವರದ ಪೇತ್ರಿ ಸಮೀಪದ ಕನ್ನಾರು ನಿವಾಸಿಯಾಗಿದ್ದು ಪ್ರಸ್ತುತ ಪೌರೋಹಿತ್ಯ ವೃತ್ತಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ಕನ್ನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಬಳಿಯ ಕೋಗೊಡುವಿನರಾದ ಇವರು ಪತ್ನಿ, ಇಬ್ಬರು ಪುತ್ರಿಯರು ಹಾಗು ಪುತ್ರನನ್ನು ಅಗಲಿದ್ದಾರೆ.
ಅರೆ ಬರೆ ಚತುಷ್ಪಥ ರಸ್ತೆ ಕಾಮಗಾರಿ ಪರಿಣಾಮ : ಕಳೆದ ವರ್ಷಗಳಿಂದಲೂ ಅರೆ ಬರೆ ಚತುಷ್ಪಥ ರಸ್ತೆ ಕಾಮಗಾರಿ ಪರಿಣಾಮವಾಗಿ ನೂರಾರು ವಾಹನ ಚಾಲಕರು ಈ ಪ್ರದೇಶದಲ್ಲಿ ಅಪಾಯದ ನಡುವೆ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದ್ದು ಈ ಹಿಂದೆ ಉದಯವಾಣಿಯಲ್ಲಿ ವಿಸ್ತ್ರತ ವರದಿ ಪ್ರಕಟಿಸಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷé ಧೋರಣೆ ತೋರಿರುವುದು ಈ ಘಟನೆಗೆ ಕಾರಣ ಎನ್ನಲಾಗಿದೆ
ಸಹಾಯಕ್ಕೆ ಬಾರದ ಸಾರ್ವಜನಿಕರು : ಬೈಕ್ ಚಾಲಕ ವಿ.ಎನ್.ನಾಗರಾಜ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿ ರಸ್ತೆಯ ಬದಿಯಲ್ಲಿ 20 ನಿಮಿಷಗಳ ಕಾಲ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಕೂಡಾ ಆ ಕ್ಷಣದಲ್ಲಿ ಯಾರೊಬ್ಬರು ಸಾರ್ವಜನಿಕರು ಸಹಾಯಕ್ಕೆ ಬಾರದಿರುವುದು ಅಮಾನವೀಯತೆಯನ್ನು ತೋರ್ಪಡಿಸುತ್ತಿತ್ತು .
ವರದಿ ಕೃಪೆ: ಲೋಕೆಶ್ ಆಚಾರ್ಯ