ನಗರದ ಹೃದಯಭಾಗದಲ್ಲಿ ಸರಣಿ ಕಳ್ಳತನ

ಕುಂದಾಪುರ : ನಗರದ ಹೃದಯಭಾಗವಾದ ಹಳೆ ಬಸ್ಸು ನಿಲ್ದಾಣದ ಬಳಿಯಲ್ಲಿ ಪುರಸಭಾ ರಸ್ತೆಯಲ್ಲಿರುವ ಪಾಪ್ಯೂಲರ್‌ ಬಿಲ್ಡಿಂಗ್‌ನಲ್ಲಿರುವ ಚಿನ್ನಾಭರಣ ತಯಾರಕಾ ಅಂಗಡಿಗಳು, ಹರ್ಬಲ್‌ ಶಾಪ್‌ ಹಾಗೂ ಪತ್ರಿಕಾ ಕಚೇರಿ ಹಾಗೂ ಪಕ್ಕದ ಬಿಲ್ಡಿಂಗ್‌ನ ಎರಡು ಅಂಗಡಿಗಳಲ್ಲಿ ಸರಣಿ ಕಳ್ಳತನದ ಘಟನೆ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ.

ಕುಂದಾಪುರ ಹರೀಶ್‌ ನಾಯಕ್‌ ಮಾಲಕತ್ವದ ಪಾಪ್ಯೂಲರ್‌ ಬಿಲ್ಡಿಂಗ್‌ನ ಎರಡು ಹಾಗೂ ಮೂರನೇ ಮಹಡಿಯಲ್ಲಿನ ಅಭರಣ ತಯಾರಿಕರ ಸುಮಾರು ಐದು ಅಂಗಡಿಗಳು, ಒಂದು ಹರ್ಬಲ್‌ ಔಷಧ ಮಾರಾಟ ಅಂಗಡಿ ಹಾಗೂ ಸ್ಥಳೀಯ ಪತ್ರಿಕೆಯೊಂದರ ಕಚೇರಿಗೆ ನುಗ್ಗಿದ ಕಳ್ಳರು ಕೆಲವು ಅಂಗಡಿಗಳಲ್ಲಿ ಚಿನ್ನ, ಬೆಳ್ಳಿಯ ವಸ್ತುಗಳು ಸೇರಿದಂತೆ ನಗದನ್ನು ಕಳವು ಮಾಡಿದ್ದಾರೆ.

ಅಂಗಡಿ ಮಾಲಕರಿಂದ ಪ್ರತ್ಯೇಕ ದೂರುಗಳನ್ನು ಪಡೆಯಲಾಗಿದು ಲಕ್ಷಾಂತರ ರೂ. ಮೌಲ್ಯದ ಚಿನ್ನ ಹಾಗೂ ನಗದು ಕಳವು ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಸಂಕೀರ್ಣದ ಮುಖ್ಯ ದ್ವಾರದ ಬೀಗವನ್ನು ಒಡೆದು ವಿಶ್ವಶ್ರೀ ಜೆಮ್ಸ್‌ ಮತ್ತು ಜುವೆಲ್ಲರ್, ಗುರುಪ್ರಸಾದ್‌ ಜ್ಯುವೆಲ್ಲರಿ, ಇತರ ಚಿನ್ನಾಭರಣ ತಯಾರಕಾ ಕೊಠಡಿಗಳು, ಚಾಲುಕ್ಯ ಪತ್ರಿಕಾ ಕಚೇರಿಗೆ ನುಗ್ಗಿ ಕಳವು ನಡೆಸಲಾಗಿದೆ.

ಸಿ.ಸಿ.ಟಿ.ಯಲ್ಲಿ ಕಳವು ದೃಶ್ಯದ ದಾಖಲು:

ಸಂಕೀರ್ಣದ ಮೂರನೇ ಮಹಡಿಯ ಉತ್ತರದ ತುದಿಯಲ್ಲಿರುವ ವಿಶ್ವಶ್ರಿ ಜೆಮ್ಸ್‌ ಮತ್ತು ಜುವೆಲ್ಲರ್ನಲ್ಲಿ ಸಿ.ಸಿ.ಕ್ಯಾಮರಾವನ್ನು ಅಳವಡಿಲಾಗಿದ್ದು , ಈ ಕ್ಯಾಮರಾದಲ್ಲಿ ಇಬ್ಬರು ಕಳವು ಆರೋಪಿಗಳ ಚಿತ್ರ ಸ್ಪಷ್ಟವಾಗಿ ಕಂಡು ಬಂದಿದೆ. ಅಲ್ಲದೇ ಈ ಘಟನೆ ಬೆಳಗ್ಗಿನ ಜಾವ 4.15ಕ್ಕೆ ನಡೆದಿರುವ ಬಗ್ಗೆ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಆರೋಪಿಗಳಲ್ಲಿ ಒರ್ವ ಯುವಕನಾಗಿದ್ದು, ಮತ್ತೋರ್ವ 45ರಿಂದ 50ರ ವಯಸ್ಸಿನವವರಾಗಿದ್ದಾರೆ ಎಂದು ಊಹಿಸಲಾಗಿದೆ. ಈ ಅಂಗಡಿಯಲ್ಲಿ ಸಿಸಿ ಕೆಮರಾವನ್ನು ಅಳವಡಿಸಿರುವುದು ಗೊತ್ತಿರದ ಕಳ್ಳರು ಕಳ್ಳತನಕ್ಕೆ ಮುಂದಾಗಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.

ಜ್ಯುವೆಲ್ಲರಿ ಅಂಗಡಿ ಕಳವು ಮುಖ್ಯ ಗುರಿ:

ಚಿನ್ನಾಭರಣ ತಯಾರಕಾ ಅಂಗಡಿಗಳ ಕಳವು ನಡೆಸುವ ಗುರಿ ಕಳ್ಳರದಾಗಿತ್ತು ಎನ್ನುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿರುತ್ತದೆ. ಆದರೆ ಭಾಷಾ ಜ್ಞಾನ ಅರಿವಿಲ್ಲದೇ ಅವರು ಪತ್ರಿಕಾ ಕಚೇರಿ ಹಾಗೂ ಔಷಧ ಮಾರಾಟ ಅಂಗಡಿಗೆ ನುಗ್ಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಅಲ್ಲದೇ ಜ್ಯುವೆಲ್ಲರಿ ಅಂಗಡಿಗಳಲ್ಲಿ ಜಾಲಾಡಿಸಿದ ಕಳ್ಳರು ಅಂಗಡಿ ನೆಲಕ್ಕೆ ಹಾಸಿದ ಕಾಪೆìಟ್‌ನ ಕೆಳಗಿರುವ ಕಸ ಮತ್ತು ದೂಳುಗಳನ್ನು ಕಧ್ದೋಯ್ದ ಬಗ್ಗೆ ಕುರುಹುಗಳು ಕಂಡು ಬಂದಿದೆ.

ಹೇಗೆ ಬಂದರು?

ಕಳ್ಳರು ಪಾಪ್ಯೂಲರ್‌ ಬಿಲ್ಡಿಂಗ್‌ನ ಮೂರನೇ ಮಹಡಿಗೆ ಪ್ರವೇಶಿಸಿ ಮುಖ್ಯ ದ್ವಾರದಲ್ಲಿ ಹಾಕಲಾದ ಬೀಗವನ್ನು ಮುರಿದಿದ್ದಾರೆ. ನಂತರ ಗುರುಪ್ರಸಾದ್‌ ಶೇಟ್‌ ಅವರ ಜ್ಯುವೆಲ್ಲರಿ ತಯಾರಕಾ ಕೊಠಡಿಗೆ ನುಗ್ಗಿ ಅಲ್ಲಿಂದ ಚಿನ್ನ ಹಾಗೂ ಬೆಳ್ಳಿಯನ್ನು ಕಳವು ಮಾಡಿದ್ದಾರೆ. ನಂತರ ನವೀನ್‌ ಅವರಿಗೆ ಸಂಬಂಧಿಸಿದ ಮಿಶಿನ್‌ ಕಟ್ಟಿಂಗ್‌ ಕೊಠಡಿಗೆ ನುಗ್ಗಿ ಚಿನ್ನ ಕಳವು ಮಾಡಿದ್ದಾರೆ. ನಂತರ ಪತ್ರಿಕಾ ಕಚೇರಿ, ಹರ್ಬಲ್‌ ಅಂಗಡಿಗೆ , ನಂತರ ವಿಶ್ವಶ್ರೀ ಜಿಮ್ಸ್‌ ಮತ್ತು ಜುವೆಲ್ಲರ್ ಅಂಗಡಿಗೆ ನುಗ್ಗಿದ್ದಾರೆ. ಅಲ್ಲಿಂದ ನೇರವಾಗಿ ಪಾಪ್ಯೂಲರ್‌ ಬಿಲ್ಡಿಂಗ್‌ನ ಪಕ್ಕದ ಸ್ವಪ್ನ ಜ್ಯುವೆಲ್ಲರ್ನ ಚಿನ್ನಾಭರಣ ತಯಾರಕಾ ಕೊಠಡಿಯಲ್ಲಿ ಜಾಲಾಡಿಸಿದ್ದಾರೆ.

ಜನವಸತಿ ಸ್ಥಳ: ಕಳವು ನಡೆದ ಸ್ಥಳದಲ್ಲಿ ಹಲವಾರು ಬಾಡಿಗೆ ಮನೆಗಳ ಸಂಕಿರ್ಣದಿಂದ ಕೂಡಿದ್ದರೂ ಈ ಕಳವು ನಡೆದಿದೆ. ಅಕ್ಕಪಕ್ಕದಲ್ಲಿ ಮನೆ ನಿವೇಶನಗಳು ಇದ್ದು ಕಳ್ಳರು ಬೀಗ ಒಡೆದ ಸದ್ದು ಕೇಳಿಸದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಲಾಗಿದೆ.

ಸ್ಥಳೀಯರ ಕೈವಾಡದ ಬಗ್ಗೆ ಶಂಕೆ:

ಘಟನೆಯ ಹಿಂದೆ ಸ್ಥಳೀಯರ ಕೈ ವಾಡವಿರಬೇಕು ಹಾಗೂ ಬಹುತೇಕ ಚಿನ್ನಾಭರಣ ತಯಾರಿಕಾ ಅಂಗಡಿಗಳ ಮಾಹಿತಿಯನ್ನು ಪಡೆದುಕೊಂಡೇ ಈ ಕಳವನ್ನು ನಡೆಸಲಾಗಿತ್ತೆ ಎನ್ನುವ ಶಂಕೆ ಸಾರ್ವಜನಿಕರದ್ದಾಗಿದೆ. ಆದರೆ ಒಂದು ಮೂಲದ ಪ್ರಕಾರ ಅನ್ಯ ರಾಜ್ಯದ ದರೋಡೆಕೋರರ ಕೈವಾಡವಿರಬಹುದು ಎಂದು ಹೇಳಲಾಗಿದೆ.

ಘಟನಾ ಸ್ಥಳಕ್ಕೆ ಶ್ವಾನ ದಳ ಆಗಮಿಸಿದ್ದು, ಶ್ವಾನ ಪಕ್ಕದ ಬಾಡಿಗೆ ಮನೆಯ ತನಕ ಹೋಗಿ ವಾಪಾಸು ಬಂದಿರುತ್ತದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿದ್ದು ತನಿಖೆ ಮುಂದುವರಿದಿದೆ. ಕುಂದಾಪುರ ಡಿವೈಎಸ್‌ಪಿ ಯಶೋದಾ ವಂಟಗೋಡಿ, ವೃತ್ತ ನಿರೀಕ್ಷಕ ಮಂಜುನಾಥ ಕೌರಿ, ಅಪರಾಧ ವಿಭಾಗದ ಎಸ್‌.ಐ. ರೇವತಿ ಸ್ಥಳ ಪರಿಶೀಲನೆ ನಡೆಸಿದರು.

ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಸಂಕೀರ್ಣದ ಮಾಲಕ ಹರೀಶ್‌ ನಾಯಕ್‌ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ.

ನಗರದ ಹೃದಯಭಾಗದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಸರಣಿ ಕಳ್ಳತನ ಮಾಡಿದ ಕಳ್ಳರು ಗಸ್ತು ಪೊಲೀಸರ ಕಣ್ಣು ತಪ್ಪಿಸಲು ಯಶಸ್ವಿಯಾದರೂ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗುವುದು ತಪ್ಪಲಿಲ್ಲ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com