ಕುಂದಾಪುರ: ಹೆಮ್ಮಾಡಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಜಾಲಾಡಿ ಬಳಿ ಶಾಲಾ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ.
ಕುಂದಾಪುರದಿಂದ ಹೆಮ್ಮಾಡಿಗೆ ತಮ್ಮ ಮನೆಗೆ ಬರುತ್ತಿದ್ದ ಕಾರು ಚಾಲಕ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಶಾಲಾ ಮಕ್ಕಳನ್ನು ಮನೆಗೆ ತಲುಪಿಸಿ ಕುಂದಾಪುರದತ್ತ ಹಿಂದಿರುಗುತ್ತಿದ್ದ ಶಾಲಾ ಬಸ್ಸು ಮುಂದೆ ಚಲಿಸುತ್ತಿದ್ದ ವಾಹನವೊಂದನ್ನು ಹಿಂದಿಕ್ಕಲು ಯತ್ನಿಸಿದ್ದಾಗ ಚಾಲಕನ ನಿಯಂತ್ರಣ ತಪ್ಪಿ, ಎದುರಿನಲ್ಲಿ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಅಪಘಾತ ನಡೆದ ವೇಳೆ ಬಸ್ಸಿನಲ್ಲಿ ಶಾಲಾ ಮಕ್ಕಳು ಇಲ್ಲದಿದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.