ಬೋಟ್ ನಿರ್ಮಾಣ ಕೇಂದ್ರ ಬೆಂಕಿ ತಗುಲಿ ಕೋಟ್ಯಂತರ ರೂ. ನಷ್ಟ

ಕುಂದಾಪುರ: ಇಲ್ಲಿನ ಚರ್ಚ್ ರಸ್ತೆಯ ಹೆಂಚಿನ ಕಾರ್ಖಾನೆ ಸಮೀ ಪದ ಕೋಡಿ ಹಿನ್ನೀರು ಪ್ರದೇಶದ ತಟದಲ್ಲಿರುವ ಮಾತೋಶ್ರೀ ಬೋಟ್ ಬಿಲ್ಡಿಂಗ್ಸ್ ಎಂಬ ಬೋಟ್ ನಿರ್ಮಾಣ ಕೇಂದ್ರದಲ್ಲಿ ಶನಿವಾರ ಅಪರಾಹ್ನ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದ್ದು, ಕೋಟ್ಯಂತರ ರೂ. ನಷ್ಟ ಅಂದಾಜಿಸಲಾಗಿದೆ. 
         ಮಧ್ಯಾಹ್ನ 3.30ರ ಸುಮಾರಿಗೆ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಕೈಗಾರಿಕಾ ಕೇಂದ್ರಕ್ಕೆ ಏಕಾಏಕಿ ಬೆಂಕಿ ಹಬ್ಬಿದೆ. ಮುಂಬಯಿ ರತ್ನಗಿರಿಗೆ ಸಾಗಲು ಸನ್ನದ್ಧವಾಗಿದ್ದ ನೂತನ ಸ್ಟೀಲ್ ಬೋಟ್ ಬೆಂಕಿಯ ಪ್ರಕೋಪಕ್ಕೆ ತುತ್ತಾಗಿದೆ. ಸ್ಟೀಲ್ ಬೋಟ್‌ನ ಎಂಜಿನ್, ಮೇಲ್ಗಡೆಯ ಕ್ಯಾಬಿನ್ ಸೇರಿದಂತೆ ಬಹುತೇಕ ಭಾಗಗಳು ಸುಟ್ಟು ಹೋಗಿವೆ. ಮುಂಬಯಿ ರತ್ನಗಿರಿಗೆ ಈ ಬೋಟ್‌ನ್ನು ಶನಿವಾರ ಅಪರಾಹ್ನ ರವಾನಿಸಲು ತೀರ್ಮಾನಿಸಲಾಗಿತ್ತು. ಕಾರ್ಖಾನೆಯ ಮಾಲೀಕರ ಬರುವಿಕೆಗಾಗಿ ಕಾಯುತ್ತಿರುವ ವೇಳೆ ದುರ್ಘಟನೆ ಸಂಭವಿಸಿದೆ. 
      ಸ್ಟೀಲ್ ಬೋಟ್‌ನ ಒಳಗಡೆ ಮೂವರು ಕಾರ್ಮಿಕರು ಸ್ವಚ್ಚತಾ ಕಾರ್ಯ ನಡೆಸುತ್ತಿದ್ದ ವೇಳೆ ದಟ್ಟ ಹೊಗೆ ಆವರಿಸಿದ್ದು, ಹೊರ ಬಂದು ನೋಡುವಾಗ ಬೆಂಕಿ ಆವರಿಸಿತ್ತು. ಕೇಂದ್ರದಲ್ಲಿ ನಿರ್ಮಾಣ ಹಂತದಲ್ಲಿರುವ ಸಣ್ಣ ಪುಟ್ಟ ಇತರೆ ದೋಣಿಗಳಿಗೂ ಬೆಂಕಿ ತಗುಲಿದೆ. ಕೈಗಾರಿಕಾ ಕೇಂದ್ರದ ಚಾವಣಿ, ಯಂತ್ರೋಪಕರಣಗಳು, ಬೋಟ್ ತಯಾರಿಕೆಯ ಕಚ್ಚಾ ವಸ್ತುಗಳು, ವಿದ್ಯುತ್ ವಯರಿಂಗ್ ಸುಟ್ಟು ಹೋಗಿದೆ. ಸತತ ಎರಡು ಗಂಟೆಯ ಕಾರ್ಯಾಚರಣೆಯ ಬಳಿಕ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಬೆಂಕಿ ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. 
         ಬೋಟ್ ತಯಾರಿಕಾ ಕೇಂದ್ರದ ಪಕ್ಕದಲ್ಲಿಯೇ ಹೆಂಚಿನ ಕಾರ್ಖಾನೆ, ಮನೆ ನಿವೇಶನಗಳಿದ್ದು ಹೆಚ್ಚಿನ ಅನಾಹುತ ತಪ್ಪಿದೆ. ಬೆಂಕಿ ನಂದಿಸು ವಲ್ಲಿ ಸ್ಥಳೀಯರು ಸಹಕರಿಸಿದರು. ಬೋಟ್ ತಯಾರಿಕೆ ಕೇಂದ್ರ ರಾಮಚಂದ್ರ ಬಿ. ಶಿರೂರ್‌ಕರ್ ಎಂಬವರಿಗೆ ಸೇರಿದ್ದಾಗಿದ್ದು, ಒಂದು ಕೋಟಿ ರೂ.ಗೂ ಮಿಕ್ಕಿ ನಷ್ಟ ಅಂದಾಜಿಸಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com