ಸಿದ್ದಾಪುರ: ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿ ನಕ್ಸಲ್ ಚಳುವಳಿ ಹಿಮ್ಮೆಟ್ಟಿಸಲು ಶೋಧ ಕಾರ್ಯಾಚರಣೆ ಚುರುಕುಗೊಳಿಸಿರುವ ನಡುವೆಯೊ ಸಿದ್ದಾಪುರ ಸಮಿಪದ ಹೆನ್ನಾಬೈಲು ಹಾಗೂ ಹೆಂಗವಳ್ಳಿ ಪರಿಸರದಲ್ಲಿ ಶನಿವಾರ ಬೆಳಗ್ಗೆ ನಕ್ಸಲರು ಕಾಣಿಸಿಕೊಂಡಿದ್ದಾರೆ ಎನ್ನುವ ಬಗ್ಗೆ ಪರಿಸರದಲ್ಲಿ ವದಂತಿ ಹರಡಿದೆ.
ಕ್ರಾಂತಿಕಾರಿ ಸಶಸ್ತ್ರ ಹೋರಾಟದಲ್ಲಿ ಇದುವರೆಗೆ ಹುತಾತ್ಮರಾಗಿರುವವರ ನೆನಪಿಗಾಗಿ ನಕ್ಸಲರು ಪ್ರತಿವರ್ಷ ಜು. 28ರಿಂದ ಅಗಸ್ಟ್ 3ರ ವರೆಗೆ 'ನಕ್ಸಲ್ ಹುತಾತ್ಮರ ಸಪ್ತಾಹ' ಆಚರಿಕೊಂಡು ಬರುತ್ತಿದ್ದು, ಪ್ರತಿ ವರ್ಷ ಈ ಅವಧಿಯಲ್ಲಿ ನಕ್ಸಲರು ಒಂದಲ್ಲ ಒಂದು ರೀತಿ ಗಮನ ಸೆಳೆಯುವ ಕೃತ್ಯ ನಡೆಸುತ್ತಲೇ ಬಂದಿದ್ದಾರೆ. ಸಪ್ತಾಹಕ್ಕೆ 15 ದಿನಗಳು ಬಾಕಿ ಇರುವಂತೆಯೇ ನಕ್ಸಲ್ ಪಶ್ಚಿಮಘಟ್ಟದ ವ್ಯಾಪ್ತಿಯ ಈ ಪ್ರದೇಶದಲ್ಲಿ ಇರುವಿಕೆ ಸಾಬೀತುಪಡಿಸಿರುವುದು ಆತಂಕ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.
ಕಟ್ಟೆಚ್ಚರ: ಸಿದ್ದಾಪುರ ಸಮಿಪದ ಹೆನ್ನಾಬೈಲು, ಅಮಾಸೆಬೈಲು ಮತ್ತು ಹೆಂಗವಳ್ಳಿ ಪರಿಸರದಲ್ಲಿ ಮೂರು ಮಂದಿ ಪುರುಷರು ಹಾಗೂ ಓರ್ವ ಮಹಿಳೆ ಶನಿವಾರ ಕಾಣಿಸಿಕೊಂಡಿದ್ದಾರೆ ಎನ್ನುವ ವಂದತಿ ಇದೆ. ಈ ಬೆಳವಣಿಗೆ ಪೊಲೀಸರಿಗೆ ಮತ್ತೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮಳೆ ಲೆಕ್ಕಿಸದೆ ಶಂಕರನಾರಾಯಣ, ಜಡ್ಡಿಗದ್ದೆ, ಕಾರ್ಕಳ, ಹೆಬ್ರಿಯ ಎಎನ್ಫ್ ಪಡೆಗಳು ಐದು ತಂಡಗಳಾಗಿ ಹಾಗೂ ಸ್ಥಳೀಯ ಪೊಲೀಸರು ಬಿರುಸಿನ ಶೋಧ ಕಾರ್ಯಾಚರಣೆ ನಡೆಸಿದರು. ಆದರೆ ನಕ್ಸಲ್ ಇರುವಿಕೆ ಬಗ್ಗೆ ಯಾವುದೇ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿಲ್ಲ ಎಂದು ತಿಳಿದು ಬಂದಿದೆ.
ವಂದತಿ ಹಬ್ಬುತ್ತಿದಂತೆ ನಕ್ಸಲ್ ಪಡೆಯ ಡಿಐಜಿ ಸೀಮಂತ್ ಕುಮಾರ, ಉಡುಪಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್, ಕುಂದಾಪುರ ವೃತ್ತ ನೀರಿಕ್ಷಕ ಮಂಜುನಾಥ ಕೌರಿ, ಶಂಕರನಾರಾಯಣ ಪಿಎಸ್ಐ ಎಸ್.ಎಂ. ರಾಣೆ, ಅಮಾಸೆಬೈಲು ಠಾಣೆಯ ಪಿಎಸ್ಐ ನಾಸೀರ್ ಮೊದಲಾದವರು ಶೋಧ ಕಾರ್ಯಚರಣೆಯಲ್ಲಿ ಪಾಲ್ಗೊಂಡರು.