ಕುಂದಾಪುರ: ಖಾತೆಯಲ್ಲಿ ಸಾಕಷ್ಟು ಹಣವಿಲ್ಲ ಎಂಬ ಕಾರಣಕ್ಕಾಗಿ ಚೆಕ್ ಅಮಾನ್ಯಗೊಂಡ ಪ್ರಕರಣದಲ್ಲಿ ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಲಯ ಆರೋಪಿ ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ನೇರಳಕಟ್ಟೆಯ ಅನಿಲ್ ಕುಮಾರ್ ಶೆಟ್ಟಿ ಯನ್ನು ಬಿಡುಗಡೆಗೊಳಿಸಿದೆ.
ಆರೋಪಿಯು ಶ್ರೀರಾಮ ಟ್ರಾನ್ಸ್ಪೊರ್ಟ್ ಫೈನಾನ್ಸ್ ಕಾರ್ಪೋರೇಶನ್ ಅವರಿಗೆ ವಿಜಯಾ ಬ್ಯಾಂಕ್ ಕಂಡೂರಿನ ರೂ.6.35 ಲಕ್ಷ ಮೌಲ್ಯದ ಚೆಕ್ನ್ನು ನೀಡಿದ್ದು, ಅದು ಅಮಾನ್ಯವಾಗಿತ್ತು.
ಸಾಲ ಪಡೆದುಕೊಳ್ಳುವಾಗ ಫಿರ್ಯಾದು ಸಂಸ್ಥೆಯವರು ತನ್ನಿಂದ ಖಾಲಿ ಚೆಕ್ನ್ನು ಪಡೆದು ನಂತರ ಅದನ್ನು ದುರುಪಯೋಗ ಮಾಡಿಕೊಂಡದ್ದಾಗಿ ಆರೋಪಿ ಸಾಧಿಸಿದ್ದನು. ಸಂಸ್ಥೆಯು ಸಂಬಂಧಿಸಿದ ಲೆಕ್ಕಪತ್ರಗಳನ್ನು ಹಾಜರು ಮಾಡಿರಲಿಲ್ಲ. ವಿಚಾರನೆಯ ಸಂದರ್ಭ ಸಾಲಕ್ಕೆ ಸಂಬಂಧಿಸಿದ ವಾಹನವನ್ನು ಫಿರ್ಯಾದು ಸಂಸ್ಥೆಯವರು ಸ್ವಾಧೀನ ಪಡೆದು ಮಾರಾಟ ಮಾಡಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಉಡುಪಿಯ ನ್ಯಾಯಾಧೀಶ ಚಂದ್ರಶೇಖರ ಅವರು ಆರೋಪಿಯನ್ನು ದೋಷಮುಕ್ತಿಗೊಳಿಸಿದ್ದಾರೆ. ಆರೋಪಿಯ ಪರವಾಗಿ ಕುಂದಾಪುರ ನ್ಯಾಯವಾದಿ ರವಿಕಿರಣ್ ಮುರ್ಡೆàಶ್ವರ ವಾದಿಸಿದ್ದರು.