ಕುಂದಾಪುರ: ಮರವಂತೆಯ ಬೀಚ್ ಹತ್ತಿರ ಶನಿವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಖಾಸಗಿ ಬಸ್ಸು ಢಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಮುಂಭಾಗ ಜಖಂಗೊಂಡ ಘಟನೆ ಸಂಭವಿಸಿದೆ. ಶುಕ್ರವಾರ ರಾತ್ರಿ ಊಟಕ್ಕೆಂದು ಲಾರಿನ್ನು ನಿಲ್ಲಿಸಲಾಗಿತ್ತು. ಆದರೆ ಮರಳಿ ಬಂದು ಚಾಲಕ ಲಾರಿಯನ್ನು ಚಾಲನೆ ಮಾಡಿದರೆ ಚಲಿಸದೇ ಕೆಟ್ಟುಹೋಗಿರುತ್ತು. ಮುಂಬೈನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ಸು ಲಾರಿಯೊಂದನ್ನು ಒವರ್ಟೇಕ್ ಮಾಡುವ ಭರದಲ್ಲಿ ರಸ್ತೆಯಿಂದ ಕೆಳಕ್ಕಿಳಿದಾಗ ನಿಂತ ಲಾರಿಗೆ ಬಡಿಯಿತು. ಬಸ್ಸಿನ ಗಾಜು ಒಡೆದುದಲ್ಲದೆ, ಒಂದು ಬದಿ ಜಖಂಗೊಂಡಿತು.
ಬಸ್ನಲ್ಲಿದ್ದ ಒಂದು ಮಗುವಿಗೆ ಗಾಜಿನ ಚೂರು ತಗಲಿ ಪುಟ್ಟ ಗಾಯವಾಗಿರುವುದು ಬಿಟ್ಟರೆ ಬೇರೆ ಯಾರಿಗೂ ಅಪಾಯ ಸಂಭವಿಸಿಲ್ಲ. ಲಾರಿಯ ಬದಿಯಲ್ಲಿ ದುರಸ್ತಿ ಕಾರ್ಯ ನಿರತರಾಗಿದ್ದ ಮೂವರು ಬಸ್ ಧಾವಿಸಿ ಬರುತ್ತಿರುವುದನ್ನು ಕಂಡು ಲಾರಿಯ ಅಡಿಯಿಂದ ನುಸುಳಿ ಪಾರಾದರು. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಬಂದು ಬಸ್ಸನ್ನು ಬದಿಗೆ ಸರಿಸಿ ಸಂಚಾರ ಸುಗಮಗೊಳಿಸಿದರು. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.