ಕುಂದಾಪುರ: ಬಸ್ರೂರು ಮೂರು ಕೈ ಬಳಿಯ ಹುಣ್ಸೆಕಟ್ಟೆ ಕಿರು ಸೇತುವೆ ಬಳಿ ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಢಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಗಾಯಗೊಂಡ ವ್ಯಕ್ತಿಯನ್ನು ಸಮೀಪದ ನೇರಂಬಳ್ಳಿ ನಿವಾಸಿ ವಿನಯ್(25) ಎಂದು ಗುರುತಿಸಲಾಗಿದೆ. ಇವರು ಕೋಟೇಶ್ವರ ಮೆಜೆಸ್ಟಿಕ್ ಸಭಾಂಗಣದ ಬಳಿಯ ಬ್ಯಾಂಕ್ ಉದ್ಯೋಗಿಯಾಗಿದ್ದು, ಹುಣ್ಸೆಕಟ್ಟೆ ಸಮೀಪದ ಅಂಗಡಿಯೊಂದರಿಂದ ಹಾಲು ಖರೀದಿಸಿಕೊಂಡು ಮನೆಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಕುಂದಾಪುರದಿಂದ ಕೋಣಿಯತ್ತ ಸಾಗುತ್ತಿದ್ದ ಟಿಪ್ಪರ್ ಸೇತುವೆಗೆ ಢಿಕ್ಕಿಯಾಗಿ ಪಲ್ಟಿಯಾಗಿದೆ. ವಿನಯ್ ಅವರು ಸೇತುವೆ ಕೆಳಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಪ್ಪರ್ ಚಾಲಕ ಸಿದ್ದಾಪುರದ ರಮೇಶ್ ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.