ನಾಪತ್ತೆ ನಾಟಕವಾಡಿದವ ಕೊನೆಗೂ ಪತ್ತೆ

ಕುಂದಾಪುರ: ತ್ರಾಸಿ ಮರವಂತೆ ಬೀಚ್‌ ಬಳಿ ತನ್ನ ಕಾರು ಹಾಗೂ ಚಪ್ಪಲಿಗಳನ್ನು ಬಿಟ್ಟು ನಾಪತ್ತೆಯಾಗಿದ್ದ ಬೆಂಗಳೂರಿನ ಬನಶಂಕರಿ ಹೊಸ್ಕೆರೆ ಹಳ್ಳಿಯ ನಿವಾಸಿ ಶ್ಯಾಮ ಪ್ರಸಾದ್‌(30) ಅವರ ನಾಪತ್ತೆ ನಾಟಕ ಪ್ರಕರಣ ಕೊನೆಗೂ ಸುಖಾಂತ್ಯ ದೊರಕಿದೆ. ಅವರನ್ನು ಗಂಗೊಳ್ಳಿ ಪೊಲೀಸರು ಬೆಂಗಳೂರಿನಲ್ಲಿ ಪತ್ತೆ ಮಾಡಿ ಗಂಗೊಳ್ಳಿಗೆ ಕರೆ ತಂದಿದ್ದಾರೆ.
     ಬನಶಂಕರಿ ಮೂರನೇ ಹಂತದ ಗಿರಿನಗರ ಹೊಸಕೆರೆ ಹಳ್ಳಿಯ ಎಂ.ಬಿ.ಎ.ಪಧವೀಧರನಾದ ಶ್ಯಾಮಪ್ರಸಾದ್‌ ಜೂ.13ರಂದು ಅಬ್ಬಿಕೆರೆ ವೆಂಕಟೆಶ್ವರ ಬಡಾವಣೆಯ ಲ್ಲಿರುವ ಭಾ ವ ಕೇಶವಮೂರ್ತಿ ಅವರ ವಮನೆಗೆ ತೆರಳಿ ಪತ್ನಿ ರಜನಿಯ ಬಳಿ ಯಾವುದೋ ಅನಿವಾರ್ಯ ಕೆಲಸದ ನಿಮಿತ್ತ ಎರಡು ದಿನ ಬಿಟ್ಟು ಬರುವುದಾಗಿ ಹೇಳಿ ತನ್ನ ಕಾರಿನಲ್ಲಿ ಹೋಗಿದ್ದರು. ಆದರೆ ಜೂ.16ರಂದು ಅವರ ಕಾರು ಹಾಗೂ ಚಪ್ಪಲಿ , ಬಟ್ಟೆ ಹಾಗೂ ವಸ್ತುಗಳು ಜೂ.15ರಂದು ತ್ರಾಸಿ ಮರವಂತೆ ಬೀಚ್‌ ಬಳಿ ಕಂಡುಬಂದಿತ್ತು. ಇದನ್ನು ವಶಪಡಿಸಿಕೊಂಡ ಗಂಗೊಳ್ಳಿ ಎಸ್‌ಐ. ಸಂಪತ್‌ ಕುಮಾರ್‌ ಕಾರಿನಲ್ಲಿ ಸಿಕ್ಕ ಮೊಬೈಲ್‌ ನಂಬ್ರವನ್ನು ಅನುಸರಿಸಿ ಸಂಬಂಧಪಟ್ಟವರಿಗೆ ಮಾಹಿತಿಯನ್ನು ನೀಡಿದ್ದರು. ಶ್ಯಾಮಪ್ರಸಾದ್‌ ಆಗಲೇ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದರು. ಈ ನಡುವೆ ಪೊಲೀಸರು ಆತ್ಮಹತ್ಯೆ ಸೇರಿದಂತೆ ಇತರ ಪ್ರಕರಣಗಳ ಸಾಧ್ಯಾಸಾಧ್ಯತೆ ಕುರಿತು ತನಿಖೆಯನ್ನು ನಡೆಸಿದ್ದರು. ಅಲ್ಲದೇ ಕರಾವಳಿಯ ಇತರ ಠಾಣೆಗಳಿಗೂ ಸಂದೇಶವನ್ನು ನೀಡಿದ್ದರು. ಆದರೆ ಯಾವುದೇ ಸುಳಿವು ದೊರಕಿರಲಿಲ್ಲ. ಬೆಂಗಳೂರಿನಿಂದ ಗಂಗೊಳ್ಳಿಗೆ ಬಂದ ಸಂಬಂಧಿಕರು ಪರಿಶೀಲನೆ ನಡೆಸಿರುತ್ತಾರೆ. ಈ ಸಂದರ್ಭದಲ್ಲಿ ನಾಪತ್ತೆಯಾದ ಬಗ್ಗೆ ಅವರ ಭಾವ ಕೇಶವಮೂರ್ತಿ ಅವರು ಗಂಗೊಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಗಂಗೊಳ್ಳಿ ಪೊಲೀಸರು ಸಮುದ್ರ ತೀರ ಹಾಗೂ ಅನೇಕ ಕಡೆಯಲ್ಲಿ ಹುಡುಕಿದರೂ , ಒಂದು ವೇಳೆ ಸ್ನಾನಕ್ಕೆ ತೆರಳಿ ಸಮುದ್ರ ಪಾಲಾಗಿದ್ದರೆ ಎನ್ನುವ ಸಂಶಯದ ನಡುವೆಯೂ ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ನಾಪತ್ತೆ ನಾಟಕ ನಡೆದದ್ದು ಹೀಗೆ: ಗಂಗೊಳ್ಳಿಯಲ್ಲಿ ಕಾರಿನಲ್ಲಿ ಸಿಕ್ಕಿದ ಬ್ಯಾಂಕ್‌ ಎಟಿಎಂ ರಶೀದಿಯೊಂದು ಪ್ರಕರಣದ ತಿರುವಿಗೆ ಕಾರಣವಾಯಿತು. ಗೋವಾದಿಂದ ಬ್ಯಾಂಕ್‌ವೊಮದರ ಎಟಿಎಂ ಮೂಲಕ ಬೆಂಗಳೂರಿನ ರಾಮಚಂದ್ರಾಪುರದ ಸಂಧ್ಯಾ ಎಂಬವರಿಗೆ ರೂ.25 ಸಾವಿರ ಹಣ ರವಾನಿಸಿದ ರಶೀದಿ ಅದಾಗಿತ್ತು. ಶ್ಯಾಮಪ್ರಸಾದ್‌ ಅವರು ಬೆಂಗಳೂರಿನಲ್ಲಿ ಕಾರಿನ ಗ್ಯಾಸ್‌ ಕಿಟ್‌ ಅಳವಡಿಸುವ ಉದ್ದಿಮೆಯನ್ನು ನಡೆಸುತ್ತಿದ್ದರು, ನಂತರ ಸಕಲೇಶಪುರದಲ್ಲಿ ಜಲ್ಲಿ ಕ್ರಷರ್‌ ವ್ಯವಹಾರದ ಪಾಲುದಾರಾಗಿದ್ದ ಮೇಲೆ ದೊಡ್ಡ ಮೊತ್ತದ ಸಾಲಕ್ಕೆ ಗುರಿಯಾದರು. ಸಾಲಗಾರರ ಒತ್ತಡ ಹೆಚ್ಚಿದಾಗ ವಾಸ ಬದಲಾಯಿಸಿದಲ್ಲದೇ ಕಾರಿನಲ್ಲಿ ಗೋವಾಕ್ಕೆ ಹೋಗಿ ಅಲ್ಲಿ ಬ್ಯಾಂಕ್‌ ಮೂಲಕ ಹಣ ಕಳುಹಿಸಿ, ನಂತರ ಮುರ್ಡೆಶ್ವರದ ಮೂಲಕ ತ್ರಾಸಿಗೆ ಬಂದು ನಾಪತ್ತೆಯ ನಾಟಕವಾಡಿದ್ದಾರೆ.
       ನಂತರ ಕಾರನ್ನು ಅಲ್ಲಿಯೇ ಬಿಟ್ಟು , ನೇರವಾಗಿ ದೆಹಲಿಗೆ ತೆರಳಿ ಅಲ್ಲಿ ಮಹೇಂದ್ರ ಕಂಪನಿಯಲ್ಲಿ ತಿಂಗಳಿಗೆ 30 ಸಾವಿರ ಪಡೆಯುವ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಕಳೆದ ಜೂ.18ರಿಂದ ದೆಹಲಿಯಲ್ಲಿಯೇ ಇದ್ಧ ಶ್ಯಾಮಪ್ರಸಾದ್‌ ತನ್ನ ಶೈಕ್ಷಣಿಕ ದಾಖಲೆ ಹಾಗೂ ಓಡಾಡಲು ಕಾರಿನ ಅವಶ್ಯಕತೆ ಇರುವುದರಿಂದ ಪುನಃ ಬೆಂಗಳೂರಿನ ಬಾಡಿಗೆ ಮನೆಗೆ ಬಂದಿದ್ದರು.
      ಈ ನಡುವೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕದ್ದೇ ಇಲ್ಲಿ. ತನಿಖೆಯ ಜಾಡನ್ನು ಹಿಡಿದು ಹೊರಟ ಸಂಪತ್‌ ಕುಮಾರ್‌ ಹಾಗೂ ಉಪ ನಿರೀಕ್ಷಕ ಅಣ್ಣಯ್ಯ ಹಾಗೂ ಪೇದೆ ರತ್ನಾಕರ ಬೆಂಗೂರಿನ ಸದ್ರಿ ವಿಳಾಸವನ್ನು ಹುಡುಕಿಕೊಂಡು ಹೋದಾಗ ಶ್ಯಾಮಪ್ರಸಾದ್‌ ಅದೇ ಮನೆಯಲ್ಲಿರುವುದು ಕಂಡು ಬಂತು. ಕೂಡಲೇ ಶ್ಯಾಮಪ್ರಸಾದ್‌ನನ್ನು ಅವರು ಗಂಗೊಳ್ಳಿ ಠಾಣೆಗೆ ಕರೆದುಕೊಂಡು ಬಂದು ವಿಸ್ತ್ರ ವಿಚಾರಣೆ ನಡೆಸಿದ್ದಾರೆ.
         ಒಟ್ಟಾರೆ ನಾಪತ್ತೆ ನಾಟಕ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ಶ್ಯಾಪ್ರಸಾದ್‌ನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎಸ್‌.ಐ.ಹೇಳಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com