ಡಾ. ಎಸ್.ಎನ್. ಪಡಿಯಾರ್‍ರಿಗೆ ಪುತ್ರವಿಯೋಗ

ಯು. ಅರವಿಂದ ಪಡಿಯಾರ್ ನಿಧನ
ಕುಂದಾಪುರ: ಇಲ್ಲಿನ ಪ್ರತಿಷ್ಠಿತ ಸೇವಾ ಸಂಗಮ ಟ್ರಸ್ಟ್ ಹಾಗೂ ತೆಕ್ಕಟ್ಟೆ ವಿದ್ಯಾಗಿರಿ ಸೇವಾ ಸಂಗಮ ವಿದ್ಯಾಕೇಂದ್ರದ ಸಂಸ್ಥಾಪಕ ಡಾ.ಎಸ್.ಎನ್. ಪಡಿಯಾರ್ ಅವರ ಪುತ್ರ ಪ್ರತಿಷ್ಠಿತ ಹಿಮಾಲಯನ್ ಡ್ರಗ್ಸ್ ಕಂಪನಿಯ ಜನರಲ್ ಮನೇಜರ್ ಯು.ಅರವಿಂದ ಪಡಿಯಾರ್ (44ವ.) ಚನ್ನಪಟ್ಟಣದಲ್ಲಿ ನಡೆದ ಅಪಘಾತವೊಂದರಲ್ಲಿ ನಿಧನರಾಗಿದ್ದಾರೆ.

ಘಟನೆ ಹಿನ್ನಲೆ: ಕುಂದಾಪುರ ತಾಲೂಕಿನ ಉಪ್ಪುಂದದಲ್ಲಿ ಜೂ.5ರಂದು ನಡೆಯಬೇಕಿದ್ದ ಚಿಕ್ಕಪ್ಪನ ವೈಕುಂಠ ಸಮರಾಧನೆಗೆ ಬೆಂಗಳೂರಿನಿಂದ ಕುಂದಾಪುರಕ್ಕೆ ಆಗಮಿಸುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಅರವಿಂದ ಪಡಿಯಾರ್ ಕೆ.ಎಸ್.ಆರ್.ಟಿ.ಸಿ ವೊಲ್ವೋ ಬಸ್‍ನಲ್ಲಿ ಡ್ರೈವರ್‍ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ಜೂ.4ರ ಮಧ್ಯರಾತ್ರಿ 11.30ರ ಸುಮಾರಿಗೆ ಚನ್ನಪಟ್ಟಣದ ಬಳಿ ದಾರಿಗೆ ಅಡ್ಡವಾಗಿ ಎದುರಾದ ಆನೆಯನ್ನು ತಪ್ಪಿಸಲು ಹೋದಾಗ ಎದುರಿನಿಂದ ಬರುತ್ತಿದ್ದ ಟ್ರಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಅರವಿಂದ ಪಡಿಯಾರ್ ಸೇರಿದಂತೆ ಬಸ್ಸ್‍ನ ಡ್ರೈವರ್ ಹಾಗೂ ಇನ್ನಿಬ್ಬರು ದುರ್ಮರಣಕ್ಕೀಡಾದರು.
ಉನ್ನತ ಅಧಿಕಾರಿ : ಮೃತ ಅರವಿಂದ ಪಡಿಯಾರ್ ಅವರು ಪ್ರತಿಷ್ಠಿತ ಡಾಬರ್, ಪ್ಲೆಥಿಕೋ, ರ್ಯಾನ್‍ಬ್ಯಾಕ್ಸಿಯಂತಹ ಕಂಪನಿಗಳಲ್ಲಿ ದೆಹಲಿ, ಗುರ್‍ಗಾಂವ್, ಇಂಧೋರ್‍ಗಳಲ್ಲಿ ಅನುಪಮ ಸೇವೆ ಸಲ್ಲಿಸಿ ಹಿರಿಯ ಅಧಿಕಾರಿಯಾಗಿದ್ದರು. ಎಮ್ ಫಾರ್ಮ್ ವಿದ್ಯಾರ್ಹತೆಯನ್ನು ಹೊಂದಿರುವ ಇವರು ಮೆರಿಟ್‍ನ ಆಧಾರದಲ್ಲಿ ಉದ್ಯೋಗವನ್ನು ಹೊಂದಿ ತನ್ನ ಪ್ರಾಮಾಣಿಕ ಹಾಗೂ ದಕ್ಷ ಕಾರ್ಯ ನಿರ್ವಹಣೆಯಿಂದ ಹಂತ ಹಂತವಾಗಿ ಉನ್ನತ ಹುದ್ದೆಯನ್ನು ಅಲಂಕರಿಸಿದವರು. ಸರಳ, ಸಜ್ಜನಿಕೆ ವ್ಯಕ್ತಿತ್ವದಿಂದ ಕಂಪನಿ ಹಾಗೂ ಸಮಾಜದಲ್ಲಿ ಜನಾನುರಾಗಿಯಾಗಿದ್ದರು. ಇದೀಗ ಕಳೆದ ನಾಲ್ಕು ವರ್ಷಗಳಿಂದ ಪ್ರತಿಷ್ಠಿತ ಹಿಮಾಲಯನ್ ಡ್ರಗ್ಸ್ ಕಂಪನಿಯಲ್ಲಿ ಜನರಲ್ ಮನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
      ಮೃತರು ತಂದೆ, ತಾಯಿ, ಪತ್ನಿ, ಒರ್ವ ಪುತ್ರ, ಒರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಂತಾಪ: ಆರ್‍ಎಸ್‍ಎಸ್‍ನ ಹಿರಿಯ ಮುಖಂಡರೂ, ಹಿಂದೂ ಸಂಘಟನೆಯ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಅರವಿಂದ ಪಡಿಯಾರ್ ಅವರ ಕುಂದಾಪುರದ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com