ಕುಂದಾಪುರ: ನಗರದ ಹೊರವಲಯದ ಸಂಗಮ್ ಜಂಕ್ಷನ್ ಬಳಿ ಬೃಹತ್ ಗಾತ್ರದ ಮರವೊಂದು ಎರಡು ಅಂಗಡಿಗಳು ಹಾಗೂ ಬಸ್ ನಿಲ್ದಾಣದ ಮೇಲೆ ಉರುಳಿ ಬಿದ್ದ ಪರಿಣಾಮ ಅಪಾರ ಸೊತ್ತು ಹಾನಿಯಾದ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ.
ಸಂಗಮ್ ಬಸ್ ನಿಲ್ದಾಣದ ಬಳಿ ಇರುವ ಬೃಹತ್ ಗಾತ್ರದ ಬೂರುಗದ ಮರವೊಂದು ಮಳೆಗೆ ಮೀನು ಮಾರಾಟದ ರಖಂ ಅಂಗಡಿ ಹಾಗೂ ಹಳೆ ಸಾಮಗ್ರಿಗಳ ಅಂಗಡಿ ಮೇಲೆ ಉರುಳಿದ್ದರಿಂದ ರಖಂ ಮೀನು ಮಾರಾಟ ಅಂಗಡಿ ಹಾಗೂ ಹಳೆಯ ಸಾಮಗ್ರಿಗಳ ಅಂಗಡಿಯಲ್ಲಿನ ಸೊತ್ತುಗಳು ಹಾನಿಗೀಡಾಗಿ ಸುಮಾರು ಮೂರು ಲಕ್ಷಕ್ಕೂ ಅಧಿಕ ನಷ್ಟ ಅಂದಾಜಿಸಲಾಗಿದೆ.
ಈ ಎರಡು ಅಂಗಡಿಗಳು ಖಾರ್ವಿಕೇರಿಯ ಶೇಷ ಸಾರಂಗ ಅವರಿಗೆ ಸೇರಿದ್ದಾಗಿದ್ದು, ಯಾವತ್ತೂ ಬೆಳಗ್ಗಿನ ಜಾವ ಇಲ್ಲಿಯೇ ಇರುತ್ತಿದ್ದ ಅವರು ಅಸೌಖ್ಯದ ಕಾರಣ ಇಂದು ಅಂಗಡಿಗೆ ಬಂದಿರಲಿಲ್ಲ.
ಸ್ಥಳಕ್ಕೆ ಪುರಸಭೆಯ ಅಧಿಕಾರಿಗಳು, ಮೆಸ್ಕಾಂ ಹಾಗೂ ಅರಣ್ಯ ಅಧಿಕಾರಿಗಳು ಆಗಮಿಸಿ ಮರ ತೆರವಿಗೆ ಕ್ರಮ ಕೈಗೊಂಡರು.