ವಿದ್ಯಾರ್ಥಿನಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ

 ಉಡುಪಿ: ಹೊಸದಿಲ್ಲಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ 'ನಿರ್ಭಯ' ಪ್ರಕರಣದ ಕಹಿ ನೆನಪು ಮಾಸಿ ಹೋಗುವ ಮೊದಲೇ ಮಣಿಪಾಲದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದ್ದು, ಸಾರ್ವಜನಿಕರನ್ನು ಬೆಸ್ತು ಬೀಳಿಸಿದೆ. ವಿದ್ಯಾರ್ಥಿನಿ ಕೆಎಂಸಿ ತುರ್ತು ನಿಗಾ ಘಟಕದಲ್ಲಿದ್ದು, ಅಪಾಯದಿಂದ ಪಾರಾಗಿದ್ದಾರೆ. 
      ಮೂಲತಃ ಕೇರಳದ ತ್ರಿಶೂರು ಜಿಲ್ಲೆಯವಳಾದ, ಮಣಿಪಾಲ ವಿಶ್ವವಿದ್ಯಾನಿಲಯದ 4ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಗ್ರಂಥಾಲಯದಲ್ಲಿ ಗುರುವಾರ ರಾತ್ರಿ 11.30ರವರೆಗೆ ಸ್ಟಡಿ ಮಾಡಿ ಆನಂತರ ತಾನು ಉಳಿದುಕೊಂಡಿರುವ ಫ್ಲಾಟ್‌ಗೆ (ಕ್ಯಾಂಪಸ್‌ನಿಂದ ಹೊರಗೆ ಇರುವ) ಹಿಂತಿರುಗುತ್ತಿದ್ದ ವೇಳೆ ಆಟೋ ರಿಕ್ಷಾದಲ್ಲಿ ಬಂದ ಮೂವರು ಅಪರಿಚಿತರು ವಿದ್ಯಾರ್ಥಿನಿಯನ್ನು ಅಪಹರಿಸಿದ್ದಾರೆ. ಆನಂತರ ಅತ್ಯಾಚಾರ ಮಾಡಲಾಗಿದೆ. ತೀವ್ರ ಅಸ್ವಸ್ಥಗೊಂಡ ವಿದ್ಯಾರ್ಥಿನಿ ಕೆಎಂಸಿಗೆ ದಾಖಲಾಗಿದ್ದಾಳೆ. ತರಚಿದ ಗಾಯಗಳಲ್ಲದೆ, ಕಾಲಿನಲ್ಲಿ ಮುರಿತ ಉಂಟಾಗಿದ್ದು, ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ. ಸದ್ಯ ಆಕೆ ತೀವ್ರ ನಿಗಾ ಘಟಕದಲ್ಲಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. 
      ತೆರೆದಿರುವ ಗ್ರಂಥಾಲಯ: ಎಂಬಿಬಿಎಸ್ ಮತ್ತಿತರ ಉನ್ನತ ಕೋರ್ಸ್ ಮಾಡುವವರಿಗೆ ಕಲಿಕೆಗೆ ತೊಂದರೆಯಾಗಬಾರದು ಎಂಬ ನೆಲೆಯಲ್ಲಿ ವಿಶ್ವವಿದ್ಯಾಲಯದ ಗ್ರಂಥಾಲಯಗಳು ತಡರಾತ್ರಿವರೆಗೆ ತೆರೆದಿರುತ್ತವೆ. ಕಲಿಕೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಸ್ಟಡಿ ಮಾಡುತ್ತಾರೆ. ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಕೂಡ ಗ್ರಂಥಾಲಯ ರಾತ್ರಿ 11.30ರ ವರೆಗೆ ತೆರೆದಿರುತ್ತದೆ. 
    ರಾತ್ರಿ ಕ್ಯಾಂಪಸ್‌ನಿಂದ ಹೊರಗೆ ಬಂದು ಒಬ್ಬಳೇ ನಡೆದುಕೊಂಡು ಹೋಗುತ್ತಿರುವುದನ್ನು ಕಾಮುಕರು ಗಮನಿಸಿದ್ದಾರೆ. ಆನಂತರ ಅಪ ಹರಣ, ಅತ್ಯಾಚಾರ ನಡೆದಿದೆ. ಆರೋಪಿಗಳು ಸ್ಥಳೀಯರೇ ಇರಬೇಕು ಎಂದು ಶಂಕಿಸಲಾಗಿದೆ. 

ಆಕ್ರೋಶ: ತಡರಾತ್ರಿವರೆಗೆ ಓದಲು ಅವಕಾಶ ಮಾಡಿಕೊಡುವುದು ತಪ್ಪಲ್ಲ. ಹಾಗೆ ಓದಲು ಕುಳಿತವರಿಗೆ ತಾವು ಉಳಿದುಕೊಂಡಿರುವಲ್ಲಿಗೆ ತಲುಪುವ ವರೆಗೆ ಭದ್ರತೆ ನೀಡಬೇಕು. ಆದರೆ ಅಂಥ ಭದ್ರತೆ ಇಲ್ಲದೆ ಹೋಗಿರುವುದರಿಂದ ಈ ಗ್ಯಾಂಗ್ ರೇಪ್ ನಡೆದಿದೆ. ಭದ್ರತೆಯ ಕೊರತೆಯೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
    ದೂರು ದಾಖಲು: ಘಟನೆಯಿಂದ ವಿದ್ಯಾರ್ಥಿನಿ ಆಘಾತಗೊಂಡಿರು ವುದರಿಂದ ಅವಳಿಗೆ ದೂರು ನೀಡಲು ಸಾಧ್ಯವಾಗಿಲ್ಲ. ಮಣಿಪಾಲ ವಿಶ್ವವಿದ್ಯಾಲಯ ಎಸ್ಟೇಟ್ ಮ್ಯಾನೇಜರ್ ಜೈವಿಠಲ್ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೂವರು ಅಪರಿಚಿತರು ವಿದ್ಯಾರ್ಥಿನಿಯನ್ನು ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಲ್ಲಿ ತಿಳಿಸಿದ್ದಾರೆ. ಪ್ರಭಾರ ಐಜಿಪಿ ಅಭಿಷೇಕ ಗೋಯಲ್, ಎಸ್‌ಪಿ ಡಾ. ಬೋರಲಿಂಗಯ್ಯ, ಡಿವೈಎಸ್‌ಪಿಗಳಾದ ಡಾ. ಪ್ರಭುದೇವ ಮಾನೆ, ಯಶೋಧಾ ಒಂಟಗೋಡಿ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. 

>>ವಿದ್ಯಾರ್ಥಿನಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಗ್ಗೆ ಮಾಹಿತಿ ಸಿಗುತ್ತಿದೆ. ಸರಿಯಾದ ಡೈರೆಕ್ಷನ್‌ನಲ್ಲಿ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಬಂಧಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಮಣಿಪಾಲ ವಿಶ್ವವಿದ್ಯಾಲಯದ ಜತೆಗೆ ಅಪರಾಧಗಳ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ಐದಾರು ಬಾರಿ ಸಂವಾದ ನಡೆಸಿದೆ. ಮಣಿಪಾಲ ವಿವಿ ಮತ್ತು ಹೊರಗೆ ಸೂಕ್ತ ಭದ್ರತೆಗೆ ಕ್ರಮ ಕೈಗೊಳ್ಳಲಾಗುವುದು. ಮಣಿಪಾಲ ಕ್ಯಾಂಪಸ್ ಒಳಗೆ ಹೊರಠಾಣೆ ತೆರೆಯುವ ಪ್ರಸ್ತಾಪ ಸರಕಾರಕ್ಕೆ ಕಳುಹಿಸಿದ್ದೇವೆ. -ಡಾ. ಬೋರಲಿಂಗಯ್ಯ, ಎಸ್‌ಪಿ ಉಡುಪಿ *ಸಾಮೂಹಿಕ ಅತ್ಯಾಚಾರ ಪ್ರಕರಣ ಮಣಿಪಾಲಕ್ಕೆ ಮಾತ್ರವಲ್ಲ ಜಿಲ್ಲೆಗೆ ಕಪ್ಪುಚುಕ್ಕೆ. ಈ ಪ್ರಕರಣದ ಬಗ್ಗೆ ಎಸ್‌ಪಿ ಜತೆ ಮಾತುಕತೆ ನಡೆಸಿದ್ದೇನೆ. ತ್ವರಿತ ಕಾರ್ಯಾಚರಣೆ ಮಾಡಿರುವ ಪೊಲೀಸರು ಆರೋಪಿಗಳ ಮಾಹಿತಿ ಸಂಗ್ರಹಿಸಿದ್ದಾರೆ. ಮಣಿಪಾಲದಲ್ಲಿ 20 ಆಟೋ ರಿಕ್ಷಾ ಸ್ಟ್ಯಾಂಡ್‌ಗಳು, 800 ಆಟೋ ಚಾಲಕರು ಇದ್ದಾರೆ. ಅವರೆಲ್ಲ ಈ ತನಿಖೆಗೆ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ. ಈ ಪ್ರಕರಣದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಈ ಬಗ್ಗೆ ಗೃಹ ಸಚಿವ ಕೆ.ಜೆ. ಜಾರ್ಜ್ ಜತೆ ಚರ್ಚೆ ನಡೆಸಲಿದ್ದೇನೆ. -ಪ್ರಮೋದ್ ಮಧ್ವರಾಜ್, ಶಾಸಕರು 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com