ತಹಸೀಲ್ದಾರ್ ಕಚೇರಿ ಎದುರು ಆತ್ಮಹತ್ಯೆಗೆ ಯತ್ನ

ಭಟ್ಕಳ: ಇಲ್ಲಿನ ತಹಸೀಲ್ದಾರ ಕಚೇರಿ ಎದುರು ಗುರುವಾರ ಗ್ರಾಮ ಸಹಾಯಕ ಮಹಾದೇವಪ್ಪ ನಾಗಪ್ಪ ನಾಯ್ಕ (38) ಎಂಬವರು ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ತೀವ್ರ ಅಸ್ವಸ್ಥಗೊಂಡಿರುವ ಅವರನ್ನು ತಕ್ಷಣ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗುರುವಾರ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಸೇರ್ಪಡೆಗೊಳಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ. 
     ಕಳೆದ 20 ವರ್ಷಗಳಿಂದ ಭಟ್ಕಳ ತಹಸೀಲ್ದಾರ್ ಕಚೇರಿಯಲ್ಲಿ ಗ್ರಾಮ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದ ಅವರನ್ನು 6 ತಿಂಗಳ ಹಿಂದೆ ಸಹಾಯಕ ಕಮಿಷನರ್ ಮನೆ ಕೆಲಸಕ್ಕೆ ನಿಯೋಜನೆಗೊಳಿಸಲಾಗಿತ್ತು. ಇದರಿಂದ ಬೇಸತ್ತ ಅವರು ಮರಳಿ ತಹಸೀಲ್ದಾರ್ ಕಚೇರಿಯಲ್ಲಿ ಸೇವೆ ಮುಂದುವರಿಸಬೇಕೆಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ. 
    ಇತ್ತೀಚೆಗೆ ತಹಸೀಲ್ದಾರ್ ಕಚೇರಿಗೆ ಮರು ಸೇರ್ಪಡೆಗೊಂಡ ಅವರಿಗೆ ಅಮಾನತು ಪತ್ರ ಕೈಗೆ ಸಿಕ್ಕಿದ್ದು ತೀವ್ರ ಹತಾಶಗೊಂಡು ತಹಸೀಲ್ದಾರ್ ಕಚೇರಿ ಎದುರು ಆತ್ಮಹತ್ಯೆಗೆ ಯತ್ನಿಸಿದ್ದರು. ಏ. 14ರಂದು ಅವರನ್ನು ಅಮಾನತುಗೊಳಿಸಲಾಗಿದ್ದು, ಪತ್ರವನ್ನು ಗುರುವಾರ ನೀಡಲಾಗಿತ್ತು ಎಂದು ಅವರ ಸಮೀಪವರ್ತಿಗಳು ತಿಳಿಸಿದ್ದಾರೆ. ಸದ್ಯ ಮಹಾದೇವಪ್ಪ ನಾಗಪ್ಪ ನಾಯ್ಕ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com