ಉಡುಪಿ: ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಜೂ.20ರ ರಾತ್ರಿ ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಗುರುವಾರ ಮೂವರನ್ನೂ ಪೊಲೀರು ಬಂಧಿಸಿದ್ದಾರೆ. ಇವರಲ್ಲಿ ಇಬ್ಬರು ಆತ್ಮಹತ್ಯೆಗೆ ಯತ್ನಿಸಿರುವುದರಿಂದ ಅವರಿಬ್ಬರೂ ಆಸ್ಪತ್ರೆಯಲ್ಲಿದ್ದಾರೆ. ಇಬ್ಬರನ್ನು ಪೂರ್ವಾಹ್ನ ಹಿಡಿದರೆ ಓರ್ವನನ್ನು ರಾತ್ರಿ ವೇಳೆ ಬಂಧಿಸಲಾಯಿತು. ಯೋಗೇಶ್, ಹರಿಪ್ರಸಾದ್, ಆನಂದ್ ಬಂಧಿತರು.
ಕಳೆದ ಗುರುವಾರ ರಾತ್ರಿ ಪ್ರಕರಣ ನಡೆದರೆ ಈ ಗುರುವಾರ ಬೆಳಗ್ಗೆ ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಕರೆಯೊಂದು ಬಂತು: 'ಎಲ್ಲದಕ್ಕೂ ನಾನೇ ಹೊಣೆಗಾರ. ನನ್ನನ್ನು ನೀವು ಗುರುತಿಸಿದ್ದೀರಿ. ನೀವು ನನ್ನನ್ನು ಬಿಡುವುದಿಲ್ಲ. ನೀವು ದಸ್ತಗಿರಿ ಮಾಡದೆ ಬಿಡುವುದಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ'. ಹೀಗೆ ಹೇಳುವಾಗ ಇನ್ನಿಬ್ಬರು ಸಹಚರರ ಹೆಸರನ್ನೂ ಹೇಳಿದ್ದ. ಇಷ್ಟು ಹೊತ್ತಿಗೆ ವಾಂತಿಯ ಸದ್ದು ಕೂಡ ದೂರವಾಣಿಯಲ್ಲಿ ಕೇಳಿತ್ತು. ಪ್ರಾಯಃ ಯಾವುದೋ ವಿಷ ಪದಾರ್ಥ ಸೇವಿಸಿದ್ದಾನೆ ಎಂದು ಗ್ರಹಿಸಿದ ಪೊಲೀಸ್ ಅಧಿಕಾರಿಗಳು ಕೂಡಲೇ ದೂರವಾಣಿಯಲ್ಲಿ ಟವರ್ ಪತ್ತೆ ಹಚ್ಚಿ ಸ್ಥಳಕ್ಕೆ ಧಾವಿಸಿದರು. ಓಂತಿಬೆಟ್ಟಿನ ನಿರ್ಜನ ಪ್ರದೇಶದಲ್ಲಿ ಬಿದ್ದುಕೊಂಡಿದ್ದ. ಇನ್ನು ಜೀವಕ್ಕೆ ತೊಂದರೆಯಾದರೆ ತನಿಖೆಗೆ ತೊಂದರೆಯಾಗುತ್ತದೆ ಎಂದು ತತ್ಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರು. ಈಗ ಚಿಕಿತ್ಸೆ ಕೊಡಲಾಗುತ್ತಿದೆ. ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಇದು ನಡೆದದ್ದು ಬೆಳಗ್ಗೆ ಸುಮಾರು 10.30 ಗಂಟೆ ಹೊತ್ತಿಗೆ. ಈತನ ಹೆಸರು ಯೋಗೇಶ್ (ಯೋಗೀಶ್-30). ಮನೆ ಇರುವುದು ಓಂತಿಬೆಟ್ಟಿನಲ್ಲಿ. ಅವಿವಾಹಿತ. ಈತನ ಸಹಚರ ಪರ್ಕಳ ಬಡಗಬೆಟ್ಟು ಸಣ್ಣಕ್ಕಿಬೆಟ್ಟಿನ ಹರಿಪ್ರಸಾದ ಪೂಜಾರಿಯನ್ನು (27) ಪರ್ಕಳ ಪರಿಸರದಲ್ಲಿ ಸುಮಾರು 11.30ರಿಂದ 12 ಗಂಟೆ ಸಮಯದಲ್ಲಿ ಸೆರೆಹಿಡಿದಿದ್ದಾರೆ.
ಮೇಲಿನ ವಿಷಯವನ್ನು ಎಸ್ಪಿ ಕಚೇರಿಯಲ್ಲಿ ಅಪರಾಹ್ನ ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಐಜಿಪಿ ಪ್ರತಾಪ್ ರೆಡ್ಡಿ ಹೇಳಿದರು. ಎಸ್ಪಿಗಳಾದ ಉಡುಪಿಯ ಡಾ|ಬೋರಲಿಂಗಯ್ಯ, ಮಂಗಳೂರಿನ ಅಭಿಷೇಕ್ ಗೋಯಲ್ ಉಪಸ್ಥಿತರಿದ್ದರು.
ರೌಡಿ ಶೀಟರ್ ಯೋಗೇಶ್
ಯೊಗೇಶ್ ನಾಲ್ಕೈದು ವರ್ಷಗಳ ಹಿಂದೆ ಮಣಿಪಾಲದಲ್ಲಿ ಆಟೋರಿಕ್ಷಾ ನಡೆಸುತ್ತಿದ್ದ. ಈತನೂ ಅವಿವಾಹಿತ. ಮನೆಯಲ್ಲಿ ತಾಯಿ, ಅಣ್ಣ ಇದ್ದಾರೆ. ಅಣ್ಣ ಕಾರು ಚಾಲಕರು. ಯೋಗೇಶ್ ಯಾನೆ ಆಮ್ಲೆಟ್ ಯೋಗೇಶ್ 2005ರ ವರೆಗೆ ಸಣ್ಣಪುಟ್ಟ ಗಲಾಟೆ ಪ್ರಕರಣದಿಂದ ರೌಡಿ ಶೀಟ್ ಪಟ್ಟಿಯಲ್ಲಿ ಸೇರಿಕೊಂಡಿದ್ದ. ಅನಂತರ ಸ್ಕಾರ್ಪಿಯೋ ವಾಹನದ ಚಾಲಕನಾಗಿದ್ದ. ಮಧ್ಯೆ ಮಧ್ಯೆ ಬದಲಿ ಕಾರು ಚಾಲಕನಾಗಿ ಹೋಗುತ್ತಿದ್ದ. ಮಣಿಪಾಲಕ್ಕೆ ಬರುವ ಮುನ್ನ ಮುಂಬೈನಲ್ಲಿದ್ದ. ಘಟನೆ ನಡೆದ ಅನಂತರ ಯೋಗೇಶ್ ಊರಿನಲ್ಲಿರಲಿಲ್ಲ. ಮಧ್ಯೆ ಒಂದು ಬಾರಿ ಬಂದಿದ್ದ. ಘಟನೆ ಅನಂತರ ಮಧ್ಯರಾತ್ರಿ ಬಳಿಕ ಮನೆಗೆ ಬರುತ್ತಿದ್ದ ಎಂದು ತಿಳಿದುಬಂದಿದೆ. ಯೋಗೇಶ್ಗೆ ಕೆಲವು ಸಂಘಟನೆಗಳ ಸಂಪರ್ಕವಿತ್ತು ಎಂದು ಕೆಲವರು ಹೇಳುತ್ತಾರೆ. ಈ ಕುರಿತು ಎಸ್ಪಿ ಗಮನ ಸೆಳೆದಾಗ ನಿರಾಕರಿಸಿದ್ದಾರೆ.
ಹರಿಪ್ರಸಾದ್ ಪೂಜಾರಿ
ಹರಿಪ್ರಸಾದ ಪೂಜಾರಿ (27) ರಿಕ್ಷಾ ಚಾಲಕ. ಈತ ರಿಕ್ಷಾ ವ್ಯವಹಾರ ನಡೆಸುವುದು ಪರ್ಕಳ ರಿಕ್ಷಾ ನಿಲ್ದಾಣದಿಂದ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ. ಈತನದ್ದೇ ಆಟೋ ರಿಕ್ಷಾವನ್ನು ಕೃತ್ಯಕ್ಕೆ ಬಳಸಲಾಗಿತ್ತು. ಖಾಸಗಿ ಸಿಸಿಟಿವಿಯಲ್ಲಿ ಕಂಡುಬಂದ ಬಜಾಜ್ ಟು ಸ್ಟ್ರೋಕ್ ರಿಕ್ಷಾ ಇದೇ ಆಗಿತ್ತು. ಹಿಂದೆ ಪೊಲೀಸರು ಸಾವಿರಾರು ರಿಕ್ಷಾಗಳನ್ನು ಪರಿಶೀಲಿಸುವಾಗ ಈ ರಿಕ್ಷಾವನ್ನೂ ಪರಿಶೀಲಿಸಿದ್ದರು. ಆದರೆ ಸಂಶಯ ಬಂದಿರಲಿಲ್ಲ. ಹೇಳಿಕೊಳ್ಳುವಂತಹ ಜಖಂ ಆಗಿರಲಿಲ್ಲ. ಗಣೇಶನ ವಿಗ್ರಹವಿರಲಿಲ್ಲ. ಸಣ್ಣ ಕೃಷ್ಣನ ಮೂರ್ತಿ ಇತ್ತು. ಹರಿಪ್ರಸಾದ್ ಅಣ್ಣನ ಹೆಸರಿನಲ್ಲಿ ಎರಡು ರಿಕ್ಷಾಗಳಿದ್ದು ಒಂದನ್ನು ಅಣ್ಣ, ಇನ್ನೊಂದನ್ನು ಹರಿಪ್ರಸಾದ್ ಓಡಿಸುತ್ತಿದ್ದಾರೆ. ಹರಿಪ್ರಸಾದ್ಗೆ ತಂದೆ, ತಾಯಿ, ಅಣ್ಣ, ಅಕ್ಕ, ಅಕ್ಕನ ಮಗಳು ಇದ್ದಾರೆ.
ಆನಂದ್
ಮೂರನೆಯ ಆರೋಪಿ ಆನಂದನನ್ನು (33) ಆತ್ಮಹತ್ಯಾ ಯತ್ನದ ಹಂತದಲ್ಲಿ ಸೆರೆಹಿಡಿದದ್ದು ಸಂಜೆ 6.45 ಗಂಟೆಗೆ. ಈತನ ಮನೆ ಪರ್ಕಳ ಬಡಗುಬೆಟ್ಟು ಸಣ್ಣಕ್ಕಿಬೆಟ್ಟುವಿನಲ್ಲಿದೆ. ಈತನ ಮನೆಗೂ ಹರಿಪ್ರಸಾದನ ಮನೆಗೂ ಅರ್ಧ ಕಿ.ಮೀ. ದೂರವಿದೆ. ಮನೆಯಲ್ಲಿ ನೇಣುಹಾಕಿಕೊಳ್ಳಲು ಯತ್ನಿಸಿದಾಗ ಮನೆಯಿಂದ ಓಡಿಸಿದರು, ಬಳಿಕ ಈತ ಕುತ್ತಿಗೆಗೆ ಬಟ್ಟೆ ಸುತ್ತಿ ಗದ್ದೆ ಬದಿ ಓಡಿ ಬಿದ್ದುಕೊಂಡಿದ್ದ. ಸುದ್ದಿ ತಿಳಿದ ರಿಕ್ಷಾ ಚಾಲಕರು ಪೊಲೀಸರೊಂದಿಗೆ ಹಿಡಿದು ಕುತ್ತಿಗೆಯಿಂದ ಬಟ್ಟೆಯನ್ನು ಬಿಚ್ಚಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು. ಈತನ ಕಸುಬು ಕೋಲ ಕಟ್ಟುವ ನಲ್ಕೆ. ಈತ ವಿವಾಹಿತ. ಮನೆಯಲ್ಲಿ ಅಣ್ಣ, ಅತ್ತಿಗೆ, ಅವರ ನಾಲ್ಕು ಚಿಕ್ಕಮಕ್ಕಳು ಇದ್ದಾರೆ.
ಯೋಗೇಶ್ ಘಟನಾನಂತರ ಮೈಸೂರಿಗೆ ಹೋಗಿದ್ದನೆಂದು ತಿಳಿದುಬಂದಿದೆ. ಗುರುವಾರವಷ್ಟೇ ಹಿಂದಿರುಗಿದ್ದಾನೆ. ಹರಿಪ್ರಸಾದ್ ಊರಿನಲ್ಲಿಯೇ ಇದ್ದ. ಇವರು ಹೆಚ್ಚು ಕಲಿತವರಲ್ಲ.
ಆರೋಪಿ ಕುರಿತು ಗೊಂದಲ
ಆನಂದ್ ಎನ್ನುವ ಇಬ್ಬರು ಹೆಸರಿನವರು ಇದ್ದರು. ಇನ್ನೊಬ್ಬ ಆನಂದ್ ದೂರದ ಊರಿಗೆ ಹೋಗಿದ್ದರು. ಅವರನ್ನು ಕರೆತರಲು ಪೊಲೀಸರು ಹೋಗಿದ್ದರು. ಆದರೆ ಪ್ರಕರಣದ ಆರೋಪಿ ಆನಂದ್ ಊರಿನಲ್ಲಿಯೇ ಇರುವುದನ್ನು ಖಚಿತಪಡಿಸಿಕೊಂಡು ಸೆರೆ ಹಿಡಿಯಲಾಯಿತು.
ಕ್ರೈಮ್ ಬೈ ಚಾನ್ಸ್
ಘಟನೆಯನ್ನು ಕ್ರೈಮ್ ಬೈ ಚಾನ್ಸ್ ಎಂದು ಪೊಲೀಸರು ಹೇಳಿದ್ದಾರೆ. ಹೀಗೆಂದರೆ ಉದ್ದೇಶಪೂರ್ವಕವಾಗಿ ಯುವತಿಯನ್ನು ಹುಡುಕಿಕೊಂಡು ಹೋದವರಲ್ಲ. ಪ್ರಾಥಮಿಕ ವರದಿ ಪ್ರಕಾರ ಇವರಿಗೆ ಯುವತಿಯ ಪರಿಚಯವೂ ಇಲ್ಲ. ಮದ್ಯಸೇವನೆ ಮಾಡಿ ಗಮ್ಮತ್ತಿನಲ್ಲಿ ಹೊರಟರು. ಯುವತಿ ಸಿಕ್ಕಿದಳು. ಅನಂತರ ನಡೆಯಬಾರದ್ದು ನಡೆಯಿತು.
ಪ್ರಕರಣದ ಗತಿ ಬದಲು
ಇದುವರೆಗೆ ನಂಬಲಾದ ಪ್ರಕರಣ ನಡೆದ ಪಥವನ್ನು ಈಗ ನಿರಾಕರಿಸಲಾಗುತ್ತಿದೆ. ಅಪಹರಣ ನಡೆದದ್ದು ಮಾಂಡವಿ ಪ್ಲಾಜಾ ಅಪಾರ್ಟ್ಮೆಂಟ್ ಹತ್ತಿರ. ಘಟನೆ ಅಲ್ಲಿ ಸಮೀಪದಲ್ಲಿ ನಡೆದಿತ್ತು ಎಂದು ತಿಳಿದಿದ್ದರು. ಆದರೆ ಘಟನೆ ದೂರದ ಕಡೆ ನಡೆದಿದೆ ಎನ್ನಲಾಗಿದೆ. ನಿಖರವಾಗಿ ಎಲ್ಲಿ ಎನ್ನುವುದನ್ನು ಇನ್ನಷ್ಟೆ ತಿಳಿಯಬೇಕಾಗಿದೆ. ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದು ಪರಿಶೀಲಿಸಿದ ಅನಂತರವೇ ತಿಳಿಯಬೇಕಾಗಿದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು. ಪ್ರಾಯಃ ಮಣಿಪಾಲದಿಂದ ಪರ್ಕಳ ಕಡೆಗೆ ಕರೆದೊಯ್ದಿರಬಹುದು ಎಂಬ ಶಂಕೆ ಪೊಲೀಸರಿಗೆ ಇದೆ. ಯುವತಿಯನ್ನು ಸೆಳೆದೊಯ್ಯುವಾಗ ಯಾರು ರಿಕ್ಷಾ ಚಾಲನೆ ಮಾಡಿಕೊಂಡಿದ್ದರೆಂದು ಗೊತ್ತಾಗಲಿಲ್ಲ. ವಾಪಸು ತಂದು ಬಿಡುವಾಗ ಯೋಗೇಶ್ ಚಾಲನೆ ಮಾಡುತ್ತಿದ್ದ. 'ಪ್ರಾಯಃ ಮನವಿ ಮಾಡಿದ ಮೇರೆಗೆ ಯುವತಿಯನ್ನು ತಂದು ಬಿಟ್ಟಿರಬಹುದು. ಯಾವುದಕ್ಕೂ ಈಗಲೇ ಹೇಳಲಾಗುವುದಿಲ್ಲ' ಎನ್ನುತ್ತಾರೆ ಎಸ್ಪಿ. 'ನಾವು ಕೇವಲ ಪ್ರಾಥಮಿಕ ಮಾಹಿತಿಯನ್ನಷ್ಟೇ ನೀಡಿದ್ದೇವೆ. ಇನ್ನೂ ತನಿಖೆ ನಡೆಸಲು ಬಹಳಷ್ಟು ಬಾಕಿ ಇದೆ' ಎಂದು ಐಜಿಪಿ ಹೇಳಿದ್ದಾರೆ.
ಕುಡಿತದ ದುಷ್ಪರಿಣಾಮ
ಅಮಲು ಪದಾರ್ಥ ಸೇವನೆ ಮಾಡಿದರೆ ಆರೋಗ್ಯ ಕೆಡುತ್ತದೆ ಎನ್ನುವುದು ಲಾಗಾಯ್ತಿನಿಂದಲೂ ಹೇಳುವ ಮಾತು. ಮನಸ್ಸೂ ಮಂಕಾಗುತ್ತದೆ ಎನ್ನುವುದೂ ಗೊತ್ತಿದೆ. ಸರಕಾರಕ್ಕೆ ಆರ್ಥಿಕ ಲಾಭ ಎಷ್ಟೇ ಇದ್ದರೂ ಅದರ ದುಪ್ಪಟ್ಟು ನಷ್ಟವಿದೆ ಎನ್ನುವುದನ್ನು ಅಂಕಿಅಂಶ ಸಹಿತ ಪ್ರತಿಪಾದಿಸುತ್ತದೆ ಮದ್ಯಪಾನ ಸಂಯಮ ಮಂಡಳಿ. ಕುಡಿದರೆ ಅತ್ಯಾಚಾರ ಮಾಡುವಷ್ಟು ಮನಸ್ಸು ಕೆಡುತ್ತದೆ ಎಂಬುದೂ ಮಣಿಪಾಲ ಪ್ರಕರಣದಿಂದ ಸಾಬೀತಾಗಿದೆ. ಆರೋಪಿಗಳು ಇಸ್ಪೀಟು ಆಡಿ ಬರುವ ವೇಳೆ ಈ ಕೃತ್ಯ ನಡೆಸಿದ್ದರೆಂದೂ ಹೇಳಲಾಗುತ್ತಿದೆ. ಇಂತಹ ದುಶ್ಚಟಗಳಿಂದ ವೈಯಕ್ತಿಕವಾಗಿ ಮತ್ತು ಸಮಾಜ ಎಷ್ಟು ಬೆಲೆ ತೆರಬೇಕಾಗುತ್ತದೆ ಎನ್ನುವುದಕ್ಕೆ ಮಣಿಪಾಲ ಪ್ರಕರಣ ಒಂದು ಉದಾಹರಣೆ.
ಪೊಲೀಸರು ತಿಳಿದುಕೊಂಡದ್ದಕ್ಕಿಂತ ಭಿನ್ನ
ಪ್ರಕರಣ ನಡೆದ ವೇಳೆಯೂ ಅನಂತರವೂ ಪೊಲೀಸರು ಅಂದುಕೊಂಡಂತೆ ತನಿಖಾ ಪಥ ಸಾಗಲಿಲ್ಲ. ಪ್ರಕರಣ ನಡೆದಾಗ ಹಿರಿಯಡಕ, ಅಲೆವೂರು ರಸ್ತೆ ಮೊದಲಾದೆಡೆ ದೂರ ನಾಕಾಬಂದ್ ಏರ್ಪಡಿಸಿದ್ದರು. ಆದರೆ ಆ ವ್ಯಾಪ್ತಿಯೊಳಗೆ ಆರೋಪಿಗಳು ಕೃತ್ಯ ನಡೆಸಿದ್ದರು. ಹಠಾತ್ ಘಟನೆ ನಡೆದಾಗ ಎಲ್ಲಾ ವ್ಯವಸ್ಥೆಗಳೂ ತತ್ಕ್ಷಣವೇ ಒದಗಿರುವುದಿಲ್ಲ. ಉದಾಹರಣೆಗೆ ಪೊಲೀಸ್ ವಾಹನ ಚಾಲಕ ಎಲ್ಲೋ ಮಲಗಿರುತ್ತಾನೆ. ಆತನನ್ನು ಎಬ್ಬಿಸಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದೊಯ್ಯುವಾಗ ಸ್ವಲ್ಪ ಹೊತ್ತು ತಗಲುತ್ತದೆ.
ಅಪಹರಣ, ಲೈಂಗಿಕ ಹಲ್ಲೆ, ಮೂವರು ಆರೋಪಿಗಳು ಇಷ್ಟು ವಿಷಯ ಬಿಟ್ಟರೆ ಉಳಿದದ್ದು ಭಿನ್ನ ಪಥದಲ್ಲಿಯೇ ಇದೆ. ಅಪಹರಣದ ಸ್ಥಳ ಮಾತ್ರ ಅದೇ ಆಗಿದೆ. ಉಳಿದಂತೆ ಹೋದ ಸ್ಥಳ ಬೇರೆಯಾಗಿದೆ. ಈಗ ಬಂಧಿಸಿದವರ ಚಲನವಲನ, ಹಿಂದಿನ ಇತಿಹಾಸ, ಕೆಲಸ ಇತ್ಯಾದಿಗಳನ್ನು ಮೂರು ದಿನಗಳ ಹಿಂದಿನಿಂದಲೂ ಪರಿಶೀಲಿಸಿದ್ದೆವು. ಇದುವರೆಗೆ ಆದ ಕೆಲಸಕ್ಕಿಂತ ಇನ್ನು ಮುಂದಿನ ಕೆಲಸ ಹೆಚ್ಚು. ಪ್ರಕರಣದ ಎಲ್ಲ ಘಟನೆಗಳನ್ನೂ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಬೇಕು ಎನ್ನುತ್ತಾರೆ ಐಜಿಪಿ.
ಯೋಗೇಶ್ ಗಂಭೀರ, ಆನಂದ್ ಸ್ಥಿರ
ಆನಂದ್ ಸೆರೆ ಸುದ್ದಿ ತಿಳಿಯುತ್ತಿದ್ದಂತೆ ಮಣಿಪಾಲ ಆಸ್ಪತ್ರೆ ಹೊರಗೆ ಜಮಾಯಿಸಿದ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಐಜಿಪಿಯವರು ಮೂರನೆಯ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಪೊಲೀಸ್ ಕಾರ್ಯಾಚರಣೆಯಿಂದ ಹೆದರಿ ಹಗ್ಗ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ ಆತನನ್ನು ಸೆರೆ ಹಿಡಿದು ಆಸ್ಪತ್ರೆಗೆ ದಾಖಲಿಸಿದ್ದು ಆರೋಗ್ಯ ಸ್ಥಿರವಾಗಿದೆ. ಯೋಗೇಶ್ ಆರೋಗ್ಯ ಗಂಭೀರವಾಗಿದೆ. ಬೆಳಗ್ಗೆ ಇಬ್ಬರು ನೀಡಿದ ಹೇಳಿಕೆ ಆಧಾರದಲ್ಲಿ ತನಿಖೆ ನಡೆಸಲು ಸಾಧ್ಯವಾಗಿದೆ' ಎಂದರು.
ಪ್ರಕರಣ ಭೇದಿಸುವಲ್ಲಿ ಸಹಕರಿಸಿದ ಮಧ್ಯವರ್ತಿ.
'ಪೊಲೀಸರು ರೌಡಿ ಶೀಟರುಗಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುವಾಗ ಯೋಗೇಶ್ ಬರಲಿಲ್ಲ. ಪೊಲೀಸರು ಬಲೆ ಬೀಸುತ್ತಿದ್ದರು. ನಾನು ಬರಲಿಕ್ಕೆ ಹೇಳಿದೆ. ನಿನ್ನೆ ದೂರವಾಣಿಯಲ್ಲಿ ತಪ್ಪು ಮಾಡಿದ್ದೀನಿ, ಬರ್ತೇನೆ ಎಂದ. ನಮ್ಮದೇ ಸರಕಾರವಿದೆ. ಜಾಮೀನು ಕೊಡಿಸ್ತೇನೆ ಎಂದೆ. ನಿನ್ನೆ ರಾತ್ರಿ 2 ಗಂಟೆಗೆ ಬರುತ್ತೇನೆ ಎಂದ, ಬರಲಿಲ್ಲ. ಇಂದು ಬೆಳಗ್ಗೆ 6 ಗಂಟೆಗೆ ಬರುತ್ತೇನೆ ಎಂದ, ಬರಲಿಲ್ಲ. ಕೊನೆಗೆ ದೂರವಾಣಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಾನಂತೂ ಬದುಕುವುದಿಲ್ಲ. ಶವ ಕೂಡ ಸಿಗುವುದಿಲ್ಲ. ಇನ್ನಿಬ್ಬರ ಹೆಸರು ಹೇಳಿ ಅವರಿಬ್ಬರನ್ನು ಬಚಾವು ಮಾಡು ಎಂದ'.
-ಸುಖೇಶ್, ವ್ಯಾಪಾರಿ, ಪರ್ಕಳ
ಪೊಲೀಸರು ರಿಕ್ಷಾ ಚಾಲಕರನ್ನು ಕರೆದು ಏನಾದರೂ ಮಾಡಿ ಹಿಡಿದುಕೊಡಬೇಕೆಂದು ಹೇಳಿದರು. ಇದೊಂದು ಊರಿನ ಮರ್ಯಾದೆ ಪ್ರಶ್ನೆ. ಆದ್ದರಿಂದ ನಾವು ಗುಂಪು ಪ್ರಯತ್ನದಿಂದ ಮಾಹಿತಿ ಕಲೆ ಹಾಕಿ ಹಿಡಿದುಕೊಟ್ಟಿದ್ದೇವೆ.
-ದೀಪಕ್ ಪೈ, ಮಣಿಪಾಲದ ರಿಕ್ಷಾ ಚಾಲಕ.
ಗುರುವಾರದ ಘಟನಾವಳಿ
* 10 ಗಂಟೆಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಯೋಗೇಶ್ (ಯೋಗೀಶ್) ದೂರವಾಣಿ ಕರೆ.
* ಅತ್ಯಾಚಾರ ನಡೆಸಿರುವ ಬಗ್ಗೆ ಹಾಗೂ ಇತರ ಆರೋಪಿಗಳ ಮಾಹಿತಿ.
*ಓಂತಿಬೆಟ್ಟಿಗೆ ದೌಡು, ವಿಷ ಪದಾರ್ಥ ಸೇವಿಸಿ ಆತ್ಮಹತ್ಯಾ ಸ್ಥಿತಿಯಲ್ಲಿದ್ದ ಯೋಗೇಶ ಮಣಿಪಾಲ ಆಸ್ಪತ್ರೆಗೆ ದಾಖಲು.
*ಮಧ್ಯಾಹ್ನ 12.30ರ ವೇಳೆಗೆ ಪರ್ಕಳ ಬಡಗಬೆಟ್ಟಿನಲ್ಲಿ ಎರಡನೇ ವ್ಯಕ್ತಿ ಹರಿಪ್ರಸಾದ್ ಪೂಜಾರಿ ಬಂಧನ.
*ಸುದ್ದಿ ತಿಳಿಯುತ್ತಲೇ ಮಣಿಪಾಲ ಆಸ್ಪತ್ರೆಯತ್ತ ಮಾಧ್ಯಮದವರು, ಸಾರ್ವಜನಿಕರ ದೌಡು.
*ಅಪರಾಹ್ನ 4ಕ್ಕೆ ಎಸ್ಪಿ ಕಚೇರಿಯಲ್ಲಿ ಐಜಿಪಿ ಪತ್ರಿಕಾಗೋಷ್ಠಿ.
*ಸಂಜೆ 6.45ರ ವೇಳೆಗೆ ಆನಂದ್ ಪರ್ಕಳದ 80 ಬಡಗಬೆಟ್ಟಿನ ಮನೆ ಸಮೀಪ ನೇಣುಬಿಗಿದು ಆತ್ಮಹತ್ಯೆಗೆ ಯತ್ನ. ಸುಮಾರು 7.10ರ ವೇಳೆಗೆ ಆಸ್ಪತ್ರೆಗೆ ದಾಖಲು.
ಮೂವರೂ ರಿಕ್ಷಾ ಚಾಲಕರು

ಆಟೋ ರಿಕ್ಷಾ ವಶಕ್ಕೆ
ಪ್ರಕರಣದಲ್ಲಿ ಬಳಸಿದ ಆಟೋ ರಿಕ್ಷಾವನ್ನು ಪರ್ಕಳ ಬಡಗುಬೆಟ್ಟು ನಡಿದಾರೆಮನೆ ಬಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಧಿವಿಜ್ಞಾನ ತಜ್ಞರು ರಿಕ್ಷಾದಲ್ಲಿದ್ದ ಉದ್ದನೆಯ ಕೂದಲು, ಕರ್ಟನ್ ಮೇಲಿರುವ ರಕ್ತದ ಕುರುಹು, ಬಿಳಿ ಬಣ್ಣದ ಮಣಿಸರ ಸೇರಿದಂತೆ ಒಟ್ಟು ಎಂಟು ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.