ನಾಡ: ನಾಡ ಗ್ರಾಮದ ತೆಂಕಬೈಲು ಎಂಬಲ್ಲಿ ಗುರುವಾರ ರಾತ್ರಿ ಮನೆಯೊಂದಕ್ಕೆ ಅಪ್ಪಳಿಸಿದ ಸಿಡಿಲು ಮನೆಗೆ ಭಾರೀ ನಷ್ಟ ಉಂಟುಮಾಡಿದ್ದಲ್ಲದೆ, ಮನೆಯವರಿಗೆ ಆಘಾತಕ್ಕೊಳಪಡಿಸಿದೆ.
ರಾತ್ರಿ ಎಂಟು ಗಂಟೆ ಹೊತ್ತಿಗೆ ಭಾರೀ ಸದ್ದು ಮತ್ತು ಬೆಳಕಿನೊಂದಿಗೆ ಅಲ್ಲಿನ ಲಾರೆನ್ಸ್ ಕ್ರಾಸ್ತಾ ಅವರ ಮನೆಗೆ ಸಿಡಿಲು ಬಡಿದಿದೆ. ಸಿಡಿಲಿನ ಅಬ್ಬರಕ್ಕೆ ಮನೆಯ ಪೂರ್ವದ ಅಡುಗೆಮನೆಯ ಮಾಡಿನ ಹಂಚು, ಮುಂಭಾಗದ ಮಾಡಿನ ಸಿಮೆಂಟು ಶೀಟು ಘಾಸಿಗೊಂಡಿವೆ. ಅಡುಗೆ ನಿರತರಾಗಿದ್ದ ಲಾರೆನ್ಸ್ ಕ್ರಾಸ್ತಾರ ಪತ್ನಿ ಫಿಲೋಮಿನಾ ತೀವ್ರ ಆಘಾತಕ್ಕೊಳಗಾಗಿ, ಶ್ರವಣ ಶಕ್ತಿ ಕಳೆದುಕೊಂಡ ಕಾರಣ ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಮನೆಯಲ್ಲಿದ್ದ ಅವರ ಮಗ ಸ್ಟೀವನ್ ಕ್ರಾಸ್ತಾರಿಗೂ ಸಿಡಿಲಿನ ಆಘಾತವಾಗಿದೆ. ಅಡುಗೆಮನೆಯ ಪರಿಕರಗಳು ಛಿದ್ರವಾಗಿವೆ. ಮನೆಯ ವಿದ್ಯುತ್ ವಯರಿಂಗ್ ಬೆಂಕಿ ಹಿಡಿದು ಸುಟ್ಟು ಹೋಗಿದೆ. ವಿದ್ಯುತ್ ಉಪಕರಣಗಳು ಹಾಳಾಗಿವೆ. ಮನೆಯ ಬಳಿಯ ತೆಂಗಿನ ಮರಗಳಿಗೂ ಸಿಡಿಲು ಬಡಿದಿದೆ. ಸುತ್ತಲಿನ ಜೆಸಿಂಥಾ ಕ್ರಾಸ್ತಾ, ಸೆಲಿನ್ ಫೆರ್ನಾಂಡೀಸ್, ಉದಯ ಜೋಗಿ, ಜಾನಕಿ ಪೂಜಾರಿ ಅವರ ಮನೆಗಳಿಗೂ ಸಿಡಿಲಿನ ಪರಿಣಾಮವಾಗಿದ್ದು, ವಿದ್ಯುತ್ ಉಪಕರಣಗಳು ಕೆಟ್ಟುಹೋಗಿವೆ.
ಸ್ಥಳಕ್ಕೆ ಗ್ರಾ. ಪಂ. ಅಧ್ಯಕ್ಷ ಪ್ರವೀಣಚಂದ್ರ ಶೆಟ್ಟಿ, ಮಾಜಿ ತಾ. ಪಂ. ಸದಸ್ಯ ಪ್ರಭು ಕೆನೆಡಿ ಪಿರೇರಾ, ಚರ್ಚ್ನ ಧರ್ಮಗುರು ರೆ.ಫಾ. ಜೋಸೆಫ್ ಮಚಾದೊ, ಗ್ರಾ.ಪಂ. ಸದಸ್ಯರಾದ ವಾಸು ಪೂಜಾರಿ, ರಾಜು ಪಡುಕೋಣೆ, ಶೇಖರ ಶೆಟ್ಟಿ, ಮಾಜಿ ಅಧ್ಯಕ್ಷ ರಾಜೀವ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ವೈ. ಡಿ. ನಿರಂಜನ, ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮ ಕರಣಿಕ ಸಂತೋಷ್ ಆರ್ ಮಹಜರು ತಯಾರಿಸಿದ್ದು, 25 ಸಾವಿರ ರೂಪಾಯಿ ನಷ್ಟ ಅಂದಾಜಿಸಿದ್ದಾರೆ.